‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು, ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಮನಗರದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಗುರುವಾರ ಹಮ್ಮಿಕೊಂಡಿದ್ದ ‘ಪ್ರೇರಣಾ ಕಾರ್ಯಾಗಾರ’ವನ್ನು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ವಿದ್ಯಾರ್ಥಿಗಳೊಂದಿಗೆ ಉದ್ಘಾಟಿಸಿದರು.
ರಾಮನಗರ: ‘ಪರೀಕ್ಷೆ ದಿನ ಹತ್ತಿರವಾಗುತ್ತಿದ್ದಂತೆ ಮನಸ್ಸಿನಲ್ಲಿ ಒಂದು ರೀತಿಯ ಆತಂಕದ ಜೊತೆ ಒತ್ತಡವೂ ಶುರುವಾಗತೊಡಗಿತ್ತು. ಇದನ್ನು ಹೇಗೆ ನಿವಾರಿಸಿಕೊಳ್ಳುವುದು ಎಂದು ಒದ್ದಾಡುತ್ತಿದ್ದ ನಾನು, ಯಾರೊಂದಿಗೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿದೆ. ಕಾರ್ಯಗಾರದಲ್ಲಿ ಭಾಗವಹಿಸಿದ ಬಳಿಕ ಆತಂಕ ಮತ್ತು ಒತ್ತಡ ನಿವಾರಣೆಯಾಗಿ ಆತ್ಮವಿಶ್ವಾಸ ಹೆಚ್ಚಿತು. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರಣೆ ಸಿಕ್ಕಿತು...’
‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು, ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಗುರುವಾರ ಹಮ್ಮಿಕೊಂಡಿದ್ದ ‘ಪ್ರೇರಣಾ ಕಾರ್ಯಾಗಾರ’ದಲ್ಲಿ ಭಾಗವಹಿಸಿದ್ದ ಹಲವು ವಿದ್ಯಾರ್ಥಿಗಳ ಅಭಿಪ್ರಾಯವಿದು.
ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆದ ಕಾರ್ಯಾಗಾರದಲ್ಲಿ ಭಾವಹಿಸಿದ್ದ ಜಿಲ್ಲೆಯ ಉನ್ನತ ಅಧಿಕಾರಿಗಳ ಸ್ಪೂರ್ತಿದಾಯಕ ಮಾತುಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಷಯವಾರು ಶಿಕ್ಷಕರ ಉಪನ್ಯಾಸಗಳು ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಆತ್ಮವಿಶ್ವಾಸದ ನಗೆ ಮೂಡಿಸಿತು.
ಪರೀಕ್ಷಾ ಒತ್ತಡ ನಿರ್ವಹಣೆ, ಯೋಜಿತ ಅಧ್ಯಯನ, ಓದಿದ್ದನ್ನು ಸುಲಭವಾಗಿ ಜ್ಞಾಪಕವಿಟ್ಟುಕೊಳ್ಳುವ ತಂತ್ರಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾಹಿತಿಗಳನ್ನು ತದೇಕಚಿತ್ತದಿಂದ ಆಲಿಸುತ್ತಾ, ನೋಟ್ ಬುಕ್‌ನಲ್ಲಿ ಬರೆದುಕೊಂಡ ವಿದ್ಯಾರ್ಥಿಗಳು ತಮ್ಮೊಳಗಿದ್ದ ಅನುಮಾನಗಳನ್ನು ಪರಿಹರಿಸಿಕೊಂಡರು.
ಸ್ಫೂರ್ತಿಯ ಮಾತು:
ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಹಾರೈಕೆ ನುಡಿಗಳನ್ನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಹಾಗೂ ವಿಶೇಷ ಉಪಸ್ಥಿತಿ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು, ಮಕ್ಕಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು. ವಿದ್ಯಾರ್ಥಿಗಳ ಕೌತಕದ ಪ್ರಶ್ನೆಗಳಿಗೆ ಆಪ್ತವಾಗಿ ಪ್ರತಿಕ್ರಿಯಿಸುತ್ತಾ, ತಮ್ಮ ವಿದ್ಯಾರ್ಥಿ ದಿನಗಳ ನೆನಪುಗಳನ್ನು ಹಂಚಿಕೊಂಡರು. ‘ತಾವೂ ಇವರಂತಾಗಬೇಕು’ ಎಂಬ ಪ್ರೇರಣೆಯನ್ನು ಮಕ್ಕಳ ಮನದಲ್ಲಿ ತುಂಬಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ‘ಪ್ರಜಾವಾಣಿ’ಯ ಕೊಡುಗೆಯ ಕುರಿತು ಮೂವರೂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ‘ತಾವು ಸಹ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯನ್ನು ಓದಿಯೇ ಬೆಳೆದವರು. ನಮ್ಮ ಜ್ಞಾನದ ಅರಿವು ವಿಸ್ತರಿಸಿ ಈ ಮಟ್ಟಕ್ಕೆ ಬರುವಲ್ಲಿ ಪತ್ರಿಕೆಯ ಕಾಣಿಕೆಯೂ ಇದೆ’ ಎಂದು ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸ್ಮರಿಸಿದರು. ‘ಕನ್ನಡ ಕಲಿಯಲು ಪ್ರಜಾವಾಣಿ ಓದು ನನಗೆ ನೆರವಾಯಿತು. ಇಂದಿಗೂ ನಾನು ಪತ್ರಿಕೆಯನ್ನು ನಿತ್ಯ ಓದುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಹೇಳಿದರು.
ಸಾಧನೆಗೆ ಪ್ರತಿಜ್ಞೆ:
‘ಓದಿದ್ದನ್ನು ನೆನಪಿಟ್ಟುಕೊಳ್ಳುವ ತಂತ್ರಗಳು, ಜೀವನ ಕೌಶಲ ಹಾಗೂ ವ್ಯಕ್ತಿತ್ವ ವಿಕಸನ’ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಉಪನ್ಯಾಸಕ ಬಾಬು ಕೆ.ಪಿ. ಅವರ ಮಾತುಗಳು, ಒತ್ತಡ ಮಾಡಿಕೊಳ್ಳದೆ ಹೇಗೆ ಓದಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಹೊಸ ಮಾರ್ಗಗಳನ್ನು ತೋರಿದವು.
ಬಾಬು ಅವರ ಪ್ರೇರಣದಾಯಕ ಮಾತುಗಳ ಜೊತೆಗೆ ಮಾತಿನ ನಡುವಣ ಹಾಸ್ಯ ಚಟಾಕಿಗೆ ಸಭಾಂಗಣದಲ್ಲಿ ಆಗಾಗ ನಗೆಯುಕ್ಕುತ್ತಿತ್ತು. ಈ ಸಲದ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ತರುವ ಪ್ರತಿಜ್ಞಾ ವಿಧಿ ಬೋಧಿಸಿದ ಅವರ ಮಾತು ಮುಗಿದಾಗ, ನಮಗೇನೊ ದಕ್ಕಿತು ಎಂಬ ಭಾವ ವಿದ್ಯಾರ್ಥಿಗಳ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಮಾನಸಿಕ ಸದೃಢತೆ:
‘ಪರೀಕ್ಷೆ ಎದುರಿಸಲು ಮಾನಸಿಕ ಸಿದ್ಧತೆ ಹೇಗಿರಬೇಕು?’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ಮನೋವೈದ್ಯಕೀಯ ಕಾರ್ಯಕರ್ತೆ ಎಸ್. ಪದ್ಮರೇಖಾ ಅವರು, ಆತಂಕ ನಿವಾರಿಸಿಕೊಂಡು ಆತ್ಮವಿಶ್ವಾಸದಿಂದ ಹೇಗೆ ಪರೀಕ್ಷೆ ಬರೆಯಬೇಕು ಎಂಬುದರ ಕುರಿತು ಹಲವು ಟಿಪ್ಸ್‌ಗಳನ್ನು ನೀಡಿದರು.
ಪರೀಕ್ಷಾ ಸಂದರ್ಭದಲ್ಲಿ ದಿನಚರಿ ಹೇಗಿರಬೇಕು? ಆಹಾರ ಸೇವನೆ, ನಿದ್ರೆ, ಪರೀಕ್ಷಾ ಕೊಠಡಿಯಲ್ಲಿ ಸಮಚಿತ್ತತೆ ಕಾಯ್ದುಕೊಂಡು, ಒತ್ತಡವಿಲ್ಲದೆ ನಿರಾಳವಾಗಿ ಪರೀಕ್ಷೆ ಎದುರಿಸಲು ಅನುಸರಿಸಬೇಕಾದ ಕ್ರಮಗಳೇನು? ಮಾನಸಿಕವಾಗಿ ಸದೃಢರಾಗಲು ವಿದ್ಯಾರ್ಥಿ ಪಾಲಿಸಬೇಕಾದ ನಿಯಮಗಳ ಕುರಿತು ಪ್ರಾತ್ಯಕ್ಷಿಕೆ ಸಮೇತ ನೀಡಿದ ವಿವರಣೆಯು ವಿದ್ಯಾರ್ಥಿಗಳ ಮನದಲ್ಲಿ ಅಚ್ಚೊತ್ತಿತು.
ಶಾಲಾ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪ ನಿರ್ದೇಶಕ ವಿ.ಸಿ. ಬಸವರಾಜೇಗೌಡ, ಅಭಿವೃದ್ಧಿ ವಿಭಾಗದ (ತರಬೇತಿ ಮತ್ತು ಶಿಕ್ಷಣ ಸಂಸ್ಥೆ) ಉಪ ನಿರ್ದೇಶಕ ಪ್ರಭು ಸ್ವಾಮಿ, ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ, ‘ಪ್ರಜಾವಾಣಿ’– ‘ಡೆಕ್ಕನ್ ಹೆರಾಲ್ಡ್’ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಶಂಕರ ಹಿರೇಮಠ, ವ್ಯವಸ್ಥಾಪಕ ಮಹೇಶ್ ಇದ್ದರು ಶಿಕ್ಷಕ ಶಿವಸ್ವಾಮಿ ಅವರು ನಿರೂಪಣೆ ಮಾಡಿದರು.
‘ಪ್ರಜಾವಾಣಿ’ಯಲ್ಲಿ ಬರುವ ಎಸ್‌ಎಸ್ಎಲ್‌ಸಿ ಪರೀಕ್ಷಾ ದಿಕ್ಸೂಚಿಯನ್ನು ನಾನು ತಪ್ಪದೆ ಓದುತ್ತೇನೆ. ಪರೀಕ್ಷೆ ತಯಾರಿಗೆ ದಿಕ್ಸೂಚಿ ಜೊತೆಗೆ ಈ ಕಾರ್ಯಾಗಾರವು ಪರೀಕ್ಷಾ ಸಾಧನೆಗೆ ನನಗೆ ಮತ್ತಷ್ಟು ಪ್ರೇರಣೆ ನೀಡಿತು. ಈ ಸಲ ಅತಿ ಹೆಚ್ಚು ಅಂಕಗಳನ್ನು ಗಳಿಸುವೆಕೀರ್ತನ ಪಟೇಲ್ ಪಬ್ಲಿಕ್ ಆಂಗ್ಲ ಶಾಲೆ ರಾಮನಗರ
ಪರೀಕ್ಷೆ ದಿನ ಹತ್ತಿರವಾಗುತ್ತಿದ್ದಂತೆ ನನ್ನಲ್ಲಿದ್ದ ಆತಂಕದ ಜೊತೆಗೆ ಒತ್ತಡವೂ ಹೆಚ್ಚಾಗುತ್ತಿತ್ತು. ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಒತ್ತಡವು ಕಡಿಮೆಯಾಗಿದೆ. ಸಂಪನ್ಮೂಲ ವ್ಯಕ್ತಿಗಳ ಮಾತು ಹಾಗೂ ಸಲಹೆಗಳು ನನ್ನಲ್ಲಿದ್ದ ಆತಂಕವನ್ನು ದೂರಾಗಿಸಿತುಅಬ್ದುಲ್ ಸೂಫಿಯನ್ ಲಿಟಲ್ ಪ್ರೆಟಿ ಆಂಗ್ಲ ಶಾಲೆ ರಾಮನಗರ
ಪರೀಕ್ಷೆಗೆ ವ್ಯವಸ್ಥಿತವಾಗಿ ಯೋಜನೆ ಹಾಕಿಕೊಂಡು ಒತ್ತಡ ಮಾಡಿಕೊಳ್ಳದೆ ಹೇಗೆ ಓದಬೇಕು ಎಂಬುದು ಗೊತ್ತಾಯಿತು. ಇಂತಹದ್ದೊಂದು ಕಾರ್ಯಾಗಾರ ಆಯೋಜಿಸಿದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಹಾಗೂ ಶಿಕ್ಷಣ ಇಲಾಖೆಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದುಶ್ರೀಲಕ್ಷ್ಮಿ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಪ್ರೌಢಶಾಲೆ ರಾಮನಗರ
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಡಿಸಿ ಸರ್ ಜಿಲ್ಲಾ ಪಂಚಾಯಿತಿ ಸಿಇಒ ಸರ್ ಎಸ್‌ಪಿ ಸರ್ ಅವರು ನಮ್ಮೊಂದಿಗೆ ಮುಕ್ತವಾಗಿ ಆಡಿದ ಮಾತುಗಳು ನನಗೆ ಸ್ಫೂರ್ತಿ ತುಂಬಿದವು. ವಿಷಯವಾರು ಉಪನ್ಯಾಸದಿಂದ ಹೆಚ್ಚು ಅಂಕ ಗಳಿಸುವುದು ಹೇಗೆಂದು ಗೊತ್ತಾಯಿತುಮಹಮ್ಮದ್ ರಾಕೀಬ್ ಸರ್ಕಾರಿ ಪ್ರೌಢಶಾಲೆ ಐಜೂರು ರಾಮನಗರ
ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ನನ್ನಲ್ಲಿದ್ದ ಪರೀಕ್ಷಾ ಭಯ ದೂರವಾಗಿದೆ. ಯಾವುದೇ ಆತಂಕವಿಲ್ಲದೆ ನಿರಾಳವಾಗಿ ಪರೀಕ್ಷೆ ಎದುರಿಸಲು ಕಾರ್ಯಾಗಾರದಲ್ಲಿ ಹಲವು ಟಿಪ್ಸ್‌ಗಳು ಸಿಕ್ಕಿವೆ. ಆ ಮೇರೆಗೆ ಚನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆಯುವೆನಿಶಾಜ್ ಖಾನಂ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ರಾಮನಗರ
ತರಗತಿಯಲ್ಲಿ ನಮ್ಮ ಶಿಕ್ಷಕರು ಪರೀಕ್ಷೆ ತಯಾರಿಗೆ ವಿಷಯವಾರು ಸಲಹೆ–ಸೂಚನೆಗಳನ್ನು ನೀಡಿ ಅಣಿಗೊಳಿಸುತ್ತಲೇ ಇದ್ದಾರೆ. ಅದಕ್ಕೆ ಪೂರಕವಾಗಿ ಈ ಕಾರ್ಯಾಗಾರದಲ್ಲಿ ಸಾಧನೆಗೆ ಪ್ರೇರಣೆ ಸಿಕ್ಕಿದೆ. ಚನ್ನಾಗಿ ಪರೀಕ್ಷೆ ಎದುರಿಸಿ ಅತಿ ಹೆಚ್ಚು ಅಂಕ ಪಡೆಯುವ ಆತ್ಮವಿಶ್ವಾಸ ಮೂಡಿದೆಬಸಂತ್ ನೇತಾಜಿ ಪಾಪ್ಯುಲರ್ ಆಂಗ್ಲ ಶಾಲೆ ರಾಮನಗರ
‘ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು’
‘ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಯಶಸ್ಸು ಖಚಿತ. ನಾನು ಸಹ ನಿಮ್ಮಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗಿನಿಂದಿಡಿದು ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಎಎಸ್ ಅಧಿಕಾರಿಯಾಗಿ ನಿಮ್ಮೆದುರು ಕುಳಿತಿರುವುದಕ್ಕೆ ಪ್ರಾಮಾಣಿಕ ಪ್ರಯತ್ನ ಹಾಗೂ ಸಾಧಿಸುವ ಛಲವೇ ಕಾರಣ. ಇದುವರೆಗೆ ನೀವು ಎದುರಿಸಿರುವ ಪರೀಕ್ಷೆಗಳಲ್ಲಿ ಎಸ್‌ಎಸ್‌ಎಲ್‌ಸಿ ಸಹ ಒಂದು. ಇಲ್ಲಿ ಫೇಲಾದರೆ ಅಥವಾ ಕಡಿಮೆ ಅಂಕ ಗಳಿಸಿದರೆ ಜೀವನವೇ ಮುಗಿಯಿತು ಅಂದುಕೊಳ್ಳಬೇಕಿಲ್ಲ’ ಎಂದು ಕಾರ್ಯಾಗಾರ ಉದ್ಘಾಟಿಸಿದ ಯಶವಂತ್ ವಿ. ಗುರುಕರ್ ಅವರು ತಮ್ಮ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು.
‘ಪರೀಕ್ಷೆಗೆ ಇನ್ನೂ ತಯಾರಾಗಿಲ್ಲವೆಂದು ಆತಂಕಪಡದೆ ಈಗಿನಿಂದಲೇ ಓದಲು ಶುರು ಮಾಡಿದರೂ ನೀವು ಶೇ 90ರಷ್ಟು ಅಂಕ ಗಳಿಸಬಲ್ಲಿರಿ. ನಿಮ್ಮ ಮನಸ್ಸನ್ನು ಟಿ.ವಿ ಮೊಬೈಲ್ ಸಾಮಾಜಿಕ ಜಾಲತಾಣಗಳತ್ತ ಹರಿಬಿಡದೆ ಪರೀಕ್ಷೆ ಕಡೆಗೆಷ್ಟೇ ಕೇಂದ್ರಿಕರಿಸಿ. ದೇವರ ಸಮಾನರಾದ ತಂದೆ–ತಾಯಿಯನ್ನು ಪೂಜಿಸಿ. ಸದಾ ನಿಮಗೆ ಒಳಿತು ಬಯಸುವ ಗುರುಗಳನ್ನು ಗೌರವಿಸಿ. ಪಠ್ಯದ ಜೊತೆಗೆ ಒಳ್ಳೆಯ ಪುಸಕ್ತಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.
‘ಸಾಧನೆಯ ಆತ್ಮವಿಶ್ವಾಸ ಇರಲಿ’ ‘ಯಾವುದೇ ಗುರಿ ಸಾಧಿಸುವುದಕ್ಕೆ ಸಿದ್ದರಾಗುವುದಕ್ಕೆ ಮುಂಚೆ ಆ ಗುರಿ ಹಾಗೂ ಅದನ್ನು ತಲುಪುವ ಮಾರ್ಗದ ಬಗ್ಗೆ ಸ್ಪಷ್ಟತೆ ಹೊಂದಿರಬೇಕು. ಎಷ್ಟೇ ವೈಫಲ್ಯ ಹಾಗೂ ಅವಮಾನಗಳಾದರೂ ಛಲ ಬಿಡದೆ ಎದುರಿಸಿ ತಲುಪುವೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿರಬೇಕು. ಸೋಲುಗಳು ನಮ್ಮನ್ನು ಮತ್ತಷ್ಟು ಸದೃಢರನ್ನಾಗಿ ಮಾಡುತ್ತವೆ. ಸತತ ಐದು ಪ್ರಯತ್ನದ ಬಳಿಕ ಯಾವುದೇ ಕೋಚಿಂಗ್ ಪಡೆಯದೆ ನಾನು ಯುಪಿಎಸ್‌ಸಿ ಪರೀಕ್ಷೆ ಪಾಸಾದೆ’ ಎಂದು ವಿದ್ಯಾರ್ಥಿಗಳಿಗೆ ಹಾರೈಕೆ ನುಡಿಗಳನ್ನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ತಾವು ಸಾಗಿ ಬಂದ ಹಾದಿಯ ಎಳೆಗಳನ್ನು ಬಿಚ್ಚಿಟ್ಟರು.
‘ಸಾಧನೆಗಾಗಿ ಕೆಲ ತ್ಯಾಗಗಳನ್ನು ಸಹ ಮಾಡಬೇಕು. ಟಿ.ವಿ ಮೊಬೈಲ್ ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ಪರೀಕ್ಷೆ ಕಾರಣಕ್ಕಾಗಿ ಸರಿಯಾಗಿ ಆಹಾರ ಸೇವಿಸದೆ ನಿದ್ರೆ ಮಾಡದೆ ಆರೋಗ್ಯ ಹಾಳು ಮಾಡಿಕೊಳ್ಳಬಾರದು. ವಿದ್ಯಾರ್ಥಿ ಜೀವನದಲ್ಲಿ ನಮ್ಮ ಗುರಿಗಳು ಪರೀಕ್ಷೆಯಿಂದ ಪರೀಕ್ಷೆಗೆ ಬದಲಾಗುತ್ತಾ ಹೋಗುತ್ತವೆ. ಆದರೆ ನಮ್ಮ ಸಾಮರ್ಥ್ಯಕ್ಕೆ ತಕ್ಕದಾದ ಗುರಿ ಆಯ್ಕೆ ಮಾಡಿಕೊಂಡು ಅದರ ಬೆನ್ನು ಬಿದ್ದರೆ ಖಂಡಿತಾ ಯಶಸ್ಸು ಸಿಗುತ್ತದೆ’ ಎಂದು ಅನ್ಮೋಲ್ ಜೈನ್ ನುಡಿದರು.
‘ಏನೇ ಮಾಡಿದರೂ ಅತ್ಯುತ್ತಮವಾಗಿರಲಿ’ ‘ಯಾವ ಕೆಲಸವೂ ದೊಡ್ಡದಲ್ಲ ಚಿಕ್ಕದಲ್ಲ. ನೀವು ಏನೇ ಮಾಡಿದರೂ ಎಲ್ಲರಂತೆ ಸಾಮಾನ್ಯವಾಗಿ ಮಾಡದೆ ಅತ್ಯುತ್ತಮವಾಗಿ ಮಾಡಿ. ಬುದ್ದಿವಂತಿಕೆ ಮತ್ತು ದಡ್ಡತನ ಹುಟ್ಟಿನಿಂದಲೇ ಬರುವುದಿಲ್ಲ. ತಮ್ಮಿಷ್ಟದ ಕೆಲಸವನ್ನು ಪ್ರಾಮಾಣಿಕ ಪರಿಶ್ರಮದೊಂದಿಗೆ ಅತ್ಯುತ್ತಮವಾಗಿ ಮಾಡುವುದು ಕೂಡ ಸಾಧನೆಯೇ. ಹಾಗಾಗಿ ಏನೇ ಮಾಡಿದರೂ ಶ್ರೇಷ್ಠವಾಗಿ ಗಮನ ಸೆಳೆಯುವಂತೆ ಮಾಡಿ’ ಎಂದು ವಿಶೇಷ ಉಪಸ್ಥಿತಿ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.
‘ನಾನೂ ಕೂಡ ಬಡ ರೈತ ಕುಟುಂಬದಿಂದ ಬಂದವನು. ಪಠ್ಯಕ್ಕಿಂತ ಕ್ರೀಡಾ ಚಟುವಟಿಕೆಯಲ್ಲಿ ಮುಂದಿದ್ದ ನಾನು ಎಸ್ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫೇಲಾಗಿದ್ದೆ. ಆದರೆ ಅತಿ ಕಡಿಮೆ ಅವಧಿಯಲ್ಲಿ ಮುಖ್ಯ ಪರೀಕ್ಷೆಯಲ್ಲಿ ಶೇ 70ರಷ್ಟು ಅಂಕ ಪಡೆದು ಪಾಸಾದೆ. ನನ್ನಿಷ್ಟದ ಎಲ್‌ಎಲ್‌ಬಿ ಬಿಟ್ಟು ಎಂಜಿನಿಯರಿಂಗ್ ಅನ್ನು ಅತ್ಯುತ್ತಮವಾಗಿ ಓದಿದೆ. ಪೊಲೀಸ್ ಸಮವಸ್ತ್ರದತ್ತ ಆಕರ್ಷಿತನಾಗಿ ಸತತ ಮೂರು ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿ ಐಪಿಎಸ್ ಅಧಿಕಾರಿಯಾದೆ’ ಎಂದು ತಮ್ಮ ಸಾಧನೆಯ ಹಾದಿಯನ್ನು ಹಂಚಿಕೊಂಡ ಶ್ರೀನಿವಾಸ ಗೌಡ ಅವರು ವಿದ್ಯಾರ್ಥಿಗಳಿಗೆ ಸಾಧನೆಯ ಪ್ರೇರಣೆ ನೀಡಿದರು.
‘ಕಷ್ಟಪಡದೆ ಇಷ್ಟಪಟ್ಟು ಓದಿ’
‘ವಿದ್ಯಾರ್ಥಿಗಳು ಕಾಟಾಚಾರಕ್ಕಾಗಿ ಕಷ್ಟಪಟ್ಟು ಓದಿದ್ದರೆ ಆ ವಿಷಯ ತಲೆಗೆ ಹತ್ತುವುದಿಲ್ಲ. ಬದಲಿಗೆ ಇಷ್ಟಪಟ್ಟು ಓದಿದರೆ ಅದು ವರ್ಷಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ. ದಿನಕ್ಕೆ ನಾಲ್ಕೈದು ತಾಸು ಓದಿದ ಮಾತ್ರಕ್ಕೆ ಎಲ್ಲವೂ ತಲೆಯಲ್ಲಿ ಸಂಗ್ರಹವಾಗುವುದಿಲ್ಲ. ಅಷ್ಟು ಹೊತ್ತು ನೀವು ಇಷ್ಟಪಟ್ಟು ಓದಿದ್ದು ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ನದಿ ನಗರ ಇತಿಹಾಸ ಇಸವಿ ಸೇರಿದಂತೆ ಕೆಲ ಮಾಹಿತಿಗಳನ್ನು ಕೋಡ್ ವರ್ಡ್ ಮೂಲಕ ನೆನಪಿಟ್ಟುಕೊಳ್ಳಬೇಕು. ಅಧ್ಯಯನಕ್ಕೆ ವಿಷಯವಾರು ವೇಳಾಪಟ್ಟಿ ಹಾಕಿಕೊಳ್ಳಬೇಕು. ಓದಿದ್ದನ್ನು ಮನನ ಮಾಡಿಕೊಳ್ಳುವ ಜೊತೆಗೆ ಸಹಪಾಠಿಗಳೊಂದಿಗೆ ಚರ್ಚಿಸಬೇಕು. ಸೀರಿಯಸ್ ಆಗಿ ಓದುವ ಬದಲು ಸ್ಮಾರ್ಟ್ ಆಗಿ ಓದುವುದರಿಂದ ವಿಷಯ ನೆನಪಿಟ್ಟುಕೊಳ್ಳುವುದು ಸುಲಭವಾಗಲಿದೆ’.
– ಬಾಬು ಕೆ.ಪಿ ಉಪನ್ಯಾಸಕ ಡಯಟ್ ರಾಮನಗರ
‘ಒತ್ತಡ ನಿವಾರಿಸುವ ಆರೋಗ್ಯಕರ ಅಭ್ಯಾಸ’
‘ಆರೋಗ್ಯಕರ ಒತ್ತಡಗಳು ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಆತಂಕ ಮತ್ತು ಭಯವನ್ನು ದೂರ ಮಾಡಬಲ್ಲವು. ಇದಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿ ಕೆಲ ಕ್ರಮಗಳನ್ನು ಅನುರಿಸಬೇಕು. ಓದು ನಿದ್ರೆ ಆಹಾರ ವಿಶ್ರಾಂತಿ ಟಿ.ವಿ–ಮೊಬೈಲ್ ವೀಕ್ಷಣೆ ಕ್ರೀಡೆ ಸೇರಿದಂತೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನುಕೂಲಕರ ವೇಳಾಪಟ್ಟಿ ಅನುರಿಸಬೇಕು. ಇದು ನಮ್ಮಲ್ಲಿರುವ ಪರೀಕ್ಷಾ ಒತ್ತಡವನ್ನು ತಗ್ಗಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಪರೀಕ್ಷೆ ಬಂದರೆ ಸಹಜವಾದ ಒತ್ತಡವಿರುತ್ತದೆ. ಆದರೆ ಅದು ನಮ್ಮನ್ನು ಕುಗ್ಗಿಸುಷ್ಟು ಬೆಳೆಯಲು ಬಿಡಬಾರದು. ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ಬೇರೆಯವರಿಗೆ ಹೋಲಿಸಿಕೊಂಡು ತಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಾರದು’.
–ಎಸ್. ಪದ್ಮರೇಖಾ ಮನೋವೈದ್ಯಕೀಯ ಕಾರ್ಯಕರ್ತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಪರೀಕ್ಷೆಗೆ ವಿಷಯವಾರು ಟಿಪ್ಸ್
‘ಗಣಿತವೆಂದರೆ ಕಬ್ಬಿಣದ ಕಡಲೆಯಲ್ಲ. ಸಮಾಧಾನದಿಂದ ಸತತ ಅಭ್ಯಾಸ ಮಾಡಿದರೆ ಹೆಚ್ಚು ಅಂಕ ತಂದುಕೊಡಬಲ್ಲದು’ ಎಂದು ಗಣಿತ ವಿಷಯ ಕುರಿತು ಉಪನ್ಯಾಸ ನೀಡಿದ ರಾಮನಗರ ತಾಲ್ಲೂಕಿನ ಬಿಳಗುಂಬ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಎಲ್.ಸಿ. ಮಹದೇವಯ್ಯ ಕಿವಿಮಾತು ಹೇಳಿದರು. ಇಂಗ್ಲಿಷ್ ವಿಷಯದ ಕುರಿತು ಉಪನ್ಯಾಸ ನೀಡಿದ ಚನ್ನಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಂಗ್ಲಿಷ್ ಶಿಕ್ಷಕ ವಸಂತ್ ಕುಮಾರ್ ಇಂಗ್ಲಿಷ್‌ಗೆ ಹೆದರದೆ ಸುಲಭವಾಗಿ ಹೇಗೆ ಅರ್ಥ ಮಾಡಿಕೊಳ್ಳಬೇಕು? ಉತ್ತೀರ್ಣಕ್ಕೆ ಅಗತ್ಯವಿರುವ ಅಂಕಗಳ ಗಡಿ ದಾಟಿ ಹೆಚ್ಚು ಅಂಕಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಯಾವ ರೀತಿ ತಯಾರಿ ನಡೆಸಬೇಕು ಎಂಬುದರ ಕುರಿತು ಅಮೂಲ್ಯ ಸಲಹೆಗಳನ್ನು ನೀಡಿದರು. ವಿಜ್ಞಾನ ವಿಷಯದಲ್ಲಿ ಕ್ಲಿಷ್ಟ ಎನಿಸುವ ವಿಷಯಗಳನ್ನು ಸ್ಪಷ್ಟ ಮತ್ತು ಸುಲಭವಾಗಿ ಅರ್ಥ ಮಾಡಿಕೊಂಡು ಹೇಗೆ ಅಂಕಗಳನ್ನು ಗಳಿಸಬೇಕು? ಸಮಯ ವ್ಯರ್ಥ ಮಾಡದೆ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಸಂಕ್ಷಿಪ್ತವಾಗಿ ಉತ್ತರಗಳನ್ನು ಬರೆಯುವುದರ ಕುರಿತು ಚನ್ನಪಟ್ಟಣ ತಾಲ್ಲೂಕಿನ ಬ್ರಹ್ಮಣಿಪುರದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸ್ವಾಮಿ ಟಿ. ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.