
ಮಾಗಡಿ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪಟ್ಟಣದ ಬಾಗೇಗೌಡ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ಬೀದಿನಾಯಿಗಳ ಹಿಂಡು ಮೂರು ವರ್ಷದ ಮಯಾಂಕ್ ಹಾಗೂ ಗಾನವಿ ಎಂಬಾಕೆ ಮೇಲೆ ದಾಳಿ ಮಾಡಿವೆ. ಗಾಯಗೊಂಡ ಮಕ್ಕಳಿಗೆ ಮಾಗಡಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಪೋಷಕರು ಮನವಿ ಮಾಡಿದ್ದಾರೆ. ಬಾಗೇಗೌಡ ಬಡಾವಣೆಯಲ್ಲಿ 20 ರಿಂದ 25ಕ್ಕೂ ಹೆಚ್ಚು ಬೀದಿ ನಾಯಿಗಳು ವಾಸವಾಗಿವೆ. ಬೀದಿನಾಯಿಗಳ ಹಾವಳಿ ತಪ್ಪಿಸಬೇಕು. ಪುರಸಭೆಯವರು ಕ್ರಮವಹಿಸದಿದ್ದಲ್ಲಿ ಪುರಸಭೆ ಮುಂಭಾಗದಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಬಾಗೇಗೌಡ ಬಡಾವಣೆ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲು ಯೋಜಿಸಲಾಗಿದೆ. ಮಾಗಡಿ ಪಟ್ಟಣದ ಶಾಲಾ ಕಾಲೇಜು, ಸರ್ಕಾರಿ ಕಚೇರಿ ವಾರ್ಡ್‌ಗಳಲ್ಲಿ ಒಟ್ಟು 95 ನಾಯಿಗಳು ಇದೆ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಒಟ್ಟಾರೆ ಪಟ್ಟಣದಲ್ಲಿ 650ಕ್ಕೂ ಹೆಚ್ಚು ನಾಯಿಗಳು ಇದೆ ಎಂದು ಸರ್ವೆ ಮಾಡಿಸಲಾಗಿದೆ ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕರು ಶ್ರೀನಿವಾಸ್ ತಿಳಿಸಿದರು.
ಬಾಗೇಗೌಡರ ಬಡಾವಣೆಯಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದೆ. ಇದರ ಹಾವಳಿ ತಪ್ಪಿಸುವ ಕೆಲಸ ಮಾಡಬೇಕು. ನಾಯಿಗಳ ಹಾವಳಿ ಹೆಚ್ಚಾದರೆ ನಾಯಿಯನ್ನು ಹಿಡಿದು ಪುರಸಭೆಯಲ್ಲಿ ಬಿಡಬೇಕಾಗುತ್ತದೆ ಎಂದು ಬಡಾವಣೆ ನಿವಾಸಿ ವಿಶ್ವನಾಥ್ ಎಚ್ಚರಿಕೆ ನೀಡಿದರು.
ಬೀದಿ ನಾಯಿಗಳನ್ನು ಹಿಡಿಯಲು ನಮಗೆ ಅವಕಾಶ ಇಲ್ಲ. ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿ ಮತ್ತೆ ಅದೇ ಸ್ಥಳದಲ್ಲಿ ಬಿಡಬೇಕೆಂಬ ಆದೇಶವಿದೆ. ಬೀದಿನಾಯಿ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಲು ಟೆಂಡರ್ ಕರೆಯಲಾಗುತ್ತಿದೆ. ಅಲ್ಲಿವರೆಗೂ ಪೋಷಕರು ಚಿಕ್ಕ ಮಕ್ಕಳನ್ನು ಒಂಟಿಯಾಗಿ ಬಿಡದಂತೆ ಎಚ್ಚರ ವಹಿಸಬೇಕು. ಮಂಗಳವಾರ ನಡೆದಿರುವ ಘಟನೆ ಬಗ್ಗೆ ವರದಿ ತರಿಸಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.