ಚನ್ನಪಟ್ಟಣ: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಂಡರೆ ಆರೋಗ್ಯ ಪೂರ್ಣ ಜೀವನಕ್ಕೆ ವರದಾನವಾಗುತ್ತದೆ ಎಂದು ಸಾಹಿತಿ ವಿಜಯ್ ರಾಂಪುರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಪುಟ್ಟಪ್ಪನದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಸ್ಟೆಪ್ಸ್ ಸಂಸ್ಥೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಯೋಗದೊಂದಿಗೆ 2019-20ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಕಾರ್ಯಕ್ರಮದಡಿ ಗುರುವಾರ ನಡೆದ 'ಕುಡಿಯುವ ನೀರು ಮತ್ತು ನೈರ್ಮಲ್ಯ' ಕುರಿತಾದ ಬೀದಿ ನಾಟಕ ಪ್ರದರ್ಶನ ಹಾಗೂ ಜಾಗೃತಿ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಬಯಲು ಬಹಿರ್ದೆಸೆ, ಅಶುದ್ಧ ಕುಡಿಯುವ ನೀರು ಹಾಗೂ ಸೊಳ್ಳೆಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಜನರ ಬದುಕು ದುಸ್ತರವಾಗಿದೆ. ಚಿಕಿತ್ಸೆಯ ವೆಚ್ಚ ಭರಿಸಲಾಗದೇ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬ ಅಂಶವನ್ನು ಜನರು ಮನದಟ್ಟು ಮಾಡಿಕೊಳ್ಳಬೇಕು. ಶುಚಿತ್ವಕ್ಕೆ ಮಹತ್ವ ನೀಡಿದರೆ ಆರೋಗ್ಯ ಜೀವನ ತಾನಾಗೆ ಬರುತ್ತದೆ ಎಂದರು.
ರಾಮನಗರ ಜಿಲ್ಲಾ ಕುಂಬಾರ ಮಹಾ ಸಂಘದ ಉಪಾಧ್ಯಕ್ಷ ಎಂ.ರಾಮಕೃಷ್ಣ ಮಾತನಾಡಿ, ‘ಎಲ್ಲೆಂದರಲ್ಲಿ ತ್ಯಾಜ್ಯ ಹರಡುವುದರಿಂದ ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಅನೈರ್ಮಲ್ಯದಿಂದ ಪ್ರಾಣಕ್ಕೆ ಕುತ್ತು ಬರುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು’ ಎಂದರು.
ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ ಹಾಗೂ ಯುವ ಕವಿ ಅಬ್ಬೂರು ಶ್ರೀನಿವಾಸ್ ಜಾಗೃತಿ ಗೀತೆಗಳನ್ನು ಹಾಡಿದರು. ಗ್ರಾಮಸ್ಥರಾದ ಆರ್.ಎಸ್. ಹೇಮಂತ್, ಹರ್ಷಿತ್, ಸಣ್ಣಪ್ಪ, ಬೋರಮ್ಮ, ಪದ್ಮಮ್ಮ, ನಿಂಗಮ್ಮ, ಶ್ರೀನಿವಾಸ, ಜಯಲಕ್ಷ್ಮಿ, ಜಸ್ವಂತ್ ಹಾಗೂ ಸ್ಟೆಪ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.