ADVERTISEMENT

ಕನಕಪುರ: ಉರಿಯದ ಬೀದಿ ದೀಪ, ಜನರಿಗೆ ಕತ್ತಲೆ ಭಾಗ್ಯ!

ಬರಡನಹಳ್ಳಿ ಕೃಷ್ಣಮೂರ್ತಿ
Published 27 ನವೆಂಬರ್ 2025, 5:17 IST
Last Updated 27 ನವೆಂಬರ್ 2025, 5:17 IST
ಕನಕಪುರ ನಗರದ ಜೋಡಿ ರಸ್ತೆಯಲ್ಲಿ ಅಳವಡಿಸಿರುವ ಬೀದಿ ದೀಪಗಳು
ಕನಕಪುರ ನಗರದ ಜೋಡಿ ರಸ್ತೆಯಲ್ಲಿ ಅಳವಡಿಸಿರುವ ಬೀದಿ ದೀಪಗಳು   

ಕನಕಪುರ: ‌‌ನಗರದ ಬೀದಿ ದೀಪಗಳು ಉರಿಯದೆ ಜನರು ಕತ್ತಲೆಯಲ್ಲಿ ಜೀವನ ದೂಡುವಂತಾಗಿದೆ. ಇಲ್ಲಿನ ಎಂ.ಜಿ ರಸ್ತೆ ನಾರಾಯಣಪ್ಪನ ಕೆರೆಯಿಂದ ರೈಸ್‌ಮಿಲ್‌ವರೆಗೂ ಇರುವ ಜೋಡಿ ರಸ್ತೆ ವಿಭಜಕಕ್ಕೆ ಅಳವಡಿಸಿರುವ ಜೋಡಿ ದೀಪಗಳು ಹಲವು ತಿಂಗಳಿಂದ ರಾತ್ರಿ ವೇಳೆ ಉರಿಯುತ್ತಿಲ್ಲ. 

ಕನಕಪುರ ನಗರದ ಎಂ.ಜಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಅಂದಿನ ಡಿಸಿಎಂ ಡಿ.ಕೆ‌.ಶಿವಕುಮಾರ್ ಅವರು ಕ್ಷೇತ್ರದ ಮತದಾರರು ಹಾಗೂ ನಗರದ ಅಂದ‌‌‌ ಹೆಚ್ಚಿಸಲು ಜೋಡಿ ರಸ್ತೆ ನಿರ್ಮಿಸಿ ಮಧ್ಯದಲ್ಲಿ ಜೋಡಿ ದೀಪಗಳನ್ನು ಹಾಕಿಸಿದ್ದರು.

ಈಚೆಗೆ ವೈಟ್ ಟಾಪಿಂಗ್‌ ಮಾಡಲು ಕಾಂಕ್ರೀಟ್ ಕಾಮಗಾರಿ ಆರಂಭಿಸಿದ ನಂತರ ಬೀದಿ ದೀಪಗಳು ಉರಿಯುತ್ತಿಲ್ಲ. ಕಾರಣ ಕೇಳಿದರೆ ಕಾಮಗಾರಿ ವೇಳೆ ಕೇಬಲ್ ಹಾಳಾಗಿದೆ ಎನ್ನುವ ಉತ್ತರವನ್ನು ನಗರಸಭೆ ನೀಡುತ್ತಾ ಬಂದಿದೆ.

ADVERTISEMENT

ನಗರದ ಮೂರು ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಒಂದು ದೀಪ ಉರಿಯದ ಕಾರಣ ಇಡೀ ನಗರ ಕತ್ತಲೆಯಲ್ಲಿ ಮುಳುಗಿದೆ. ರಾತ್ರಿ 6ರಿಂದ ಬೆಳಿಗ್ಗೆ 6ರವರೆಗೆ ಜನರು ಕತ್ತಲೆಯಲ್ಲಿ ಓಡಾಡುವಂತಾಗಿದೆ. ಜನರ ಪಾಲಿಗೆ ಕತ್ತಲೆ ಭಾಗ್ಯ ಸಿಕ್ಕಿದೆ.

ಕುರುಪೇಟೆ, ಹೌಸಿಂಗ್ ಬೋರ್ಡ್, ರೈಸ್‌ಮಿಲ್ ಕಡೆಯಿಂದ ಬಸ್ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಜನರು ಕತ್ತಲೆಯಲ್ಲಿ ನಡೆದುಕೊಂಡು ಹೋಗಬೇಕಿದೆ. ಕತ್ತಲೆ ಕಾರಣದಿಂದ ಅಪಘಾತಗಳು ಸಾಮಾನ್ಯವಾಗಿವೆ. ಕತ್ತಲೆ ಲಾಭ ಪಡೆದು ಕಳವು ಪ್ರಕರಣಗಳು ಕೂಡ ಹೆಚ್ಚುತ್ತಿವೆ.

ನಗರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಬೀದಿದೀಪ ಸರಿಪಡಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಆದರೂ, ನಗರಸಭೆ ಇಲ್ಲಿವರೆಗೂ ನಗರದ ಜೋಡಿ ರಸ್ತೆಯಲ್ಲಿ ಕೆಟ್ಟು ನಿಂತಿರುವ ಬೀದಿದೀಪ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎನ್ನುತ್ತಾರೆ ಸ್ಥಳೀಯರು. 

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕನಕಪುರ ನಗರವನ್ನು ರಾಜ್ಯದಲ್ಲೇ ಮಾದರಿ ನಗರವನ್ನಾಗಿ ಮಾಡಿದ್ದಾರೆ. ಮಾದರಿ ನಗರದಲ್ಲಿ ಜನರು ಬೆಳಕಿಲ್ಲದೆ ಕತ್ತಲೆಯಲ್ಲಿ ಪರದಾಡುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳಿಗೆ ಸೂಚನೆ ನೀಡಿ ಬೀದಿದೀಪ ಸರಿಪಡಿಸಬೇಕು ಎನ್ನುವುದು ನಾಗರಿಕರ ಒತ್ತಾಯ.

ಉರಿಯದ ಬೀದಿ ದೀಪಗಳು
ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಸಮಸ್ಯೆಯಾಗಿದೆ. ಸರಿಪಡಿಸುವಂತೆ ಸೂಚಿಸಿದರೂ ಕ್ರಮಕೈಗೊಂಡಿಲ್ಲ. ನಗರಸಭೆಯಿಂದಲೇ ಸರಿಪಡಿಸಲಾಗುವುದು
ಸಾಗರ್ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್
ನಗರಸಭೆ ಅವರು ಈಗಲೂ ಸಮಸ್ಯೆ ಜಾಗ ತೋರಿಸಿದರೆ ತಕ್ಷಣವೇ ಕೇಬಲ್ ಸರಿಪಡಿಸಿ ಕೊಡಲಾಗುವುದು
ಪ್ರಕಾಶ್ ಸಹಾಯಕ ಎಂಜಿನಿಯರ್‌ ರಾಷ್ಟ್ರೀಯ ಹೆದ್ದಾರಿ
ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು. ಸಾರ್ವಜನಿಕವಾಗಿ ಆಗಿರುವ ಸಮಸ್ಯೆ ಪರಿಹರಿಸಬೇಕು.
ಮಹಾಲಿಂಗ ಹೌಸಿಂಗ್ ಬೋರ್ಡ್ ನಿವಾಸಿ
ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರಸಭೆ ಶೀಘ್ರವಾಗಿ ಬೀದಿ ದೀಪಗಳನ್ನು ಸರಿಪಡಿಸಬೇಕು.
ಅಂದಾನಿ ಗೌಡ ಮಹದೇಶ್ವರ ಬಡಾವಣೆ ನಿವಾಸಿ
ಎಂ.ಜಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡುವಾಗ ಬೀದಿ ದೀಪ ಹಾಳಾಗಿದೆ. ಆರು ತಿಂಗಳಾದರೂ ಅದನ್ನು ರಿಪೇರಿ ಮಾಡಿಸಿಲ್ಲ
ಕುಮಾರ್ ಬೃಂದಾವನ ನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.