ADVERTISEMENT

ಮಾಗಡಿ: ವಿದ್ಯಾರ್ಥಿಗಳು, ಪೋಷಕರು ‍ಪ್ರತಿಭಟನೆ

ಅವಧಿಗೆ ಮುನ್ನವೇ ಉತ್ತರ ಪತ್ರಿಕೆ ಪಡೆದ ಆರೋಪ

​ಪ್ರಜಾವಾಣಿ ವಾರ್ತೆ
Published 1 ಮೇ 2022, 5:58 IST
Last Updated 1 ಮೇ 2022, 5:58 IST
ಮಾಗಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಂಭಾಗ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು
ಮಾಗಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಂಭಾಗ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು   

ಮಾಗಡಿ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏ. 28ರಂದು ನಡೆದ ದ್ವಿತೀಯ ಪಿಯು ಪರೀಕ್ಷೆಯ ಕನ್ನಡ ವಿಷಯದ ಪರೀಕ್ಷೆ ವೇಳೆ 15 ನಿಮಿಷ ಮುಂಚಿತವಾಗಿ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆಯನ್ನು ಬಲವಂತವಾಗಿ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿನ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಬಾಲಗಂಗಾಧರನಾಥ ಸ್ವಾಮಿ ವಿಜ್ಞಾನ ಪದವಿಪೂರ್ವ ಕಾಲೇಜಿನ 13 ವಿದ್ಯಾರ್ಥಿಗಳಿಂದ ಅವಧಿಗೆ ಮುನ್ನ ಉತ್ತರ ಪತ್ರಿಕೆ ಕಿತ್ತುಕೊಂಡಿದ್ದಾರೆ. ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ಬರೆಯಬೇಕಿತ್ತು. ಕಾಲೇಜಿನ ಕೊಠಡಿಯ ಬೋರ್ಡ್‌ ಮೇಲೆಯೂ ಪರೀಕ್ಷೆಯ ಮುಕ್ತಾಯದ ಅವಧಿ ಮಧ್ಯಾಹ್ನ 1.15 ಎಂದು ಬರೆದಿತ್ತು. ಈ ಬಗ್ಗೆ ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿದರೂ ಸ್ಪಂದಿಸಲಿಲ್ಲ ಎಂದು ದೂರಿದರು.

‘ಈ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಕನ್ನಡ ವಿಷಯದ ಮರುಪರೀಕ್ಷೆಗೆ ಅವಕಾಶ ಕೊಡಬೇಕು’ ಎಂದುಪೋಷಕ ನಾರಾಯಣಸ್ವಾಮಿ ಒತ್ತಾಯಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಂಶುಪಾಲ ಕಾಂತರಾಜು, ‘ಕಾಲೇಜಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಸಮಯದಲ್ಲಿ ವ್ಯತ್ಯಾಸ ಮಾಡಿಲ್ಲ. ಕೊಠಡಿ ಮೇಲ್ವಿಚಾರಕರಿಂದ ವಿವರಣೆ ಪಡೆಯಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.