ADVERTISEMENT

ಪ್ರಾಮಾಣಿಕತೆಯಲ್ಲಿದೆ ಪ್ರಜಾಪ್ರಭುತ್ವ ಯಶಸ್ಸು: ಮರಿಸ್ವಾಮಿ ಅಭಿಪ್ರಾಯ

ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆಯಲ್ಲಿ ಡಿಡಿಪಿಯು ಮರಿಸ್ವಾಮಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:25 IST
Last Updated 13 ಅಕ್ಟೋಬರ್ 2025, 2:25 IST
<div class="paragraphs"><p>ರಾಮನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು.&nbsp;&nbsp;</p></div>

ರಾಮನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು.  

   

ರಾಮನಗರ: ಪ್ರಜಾಪ್ರಭುತ್ವದ ನಿಜವಾದ ಯಶಸ್ಸು ಪ್ರಾಮಾಣಿಕತೆಯಲ್ಲಿ ಅಡಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಎಂ. ಮರಿಸ್ವಾಮಿ ಅಭಿಪ್ರಾಪಟ್ಟರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಜನರು ಯಾವುದೇ ಆಸೆ,ಆಮಿಷ, ಜಾತಿ, ಧರ್ಮದ ಮೋಹಕ್ಕೆ ಸಿಲುಕದೆ ಪ್ರಾಮಾಣಿಕವಾಗಿ ಉತ್ತಮರನ್ನು ಆಯ್ಕೆ ಮಾಡಬೇಕು. ಜನಪ್ರತಿನಿಧಿಗಳು ಸಹ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಜವಾಬ್ದಾರಿ ನಿರ್ವಹಿಸಬೇಕು ಎಂದರು. 

ಪ್ರಜಾಪ್ರಭುತ್ವದ ಆತ್ಮವಾದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ವಿದ್ಯಾವಂತರು, ವಿಚಾರವಂತರು ಹಾಗೂ ಪ್ರಾಮಾಣಿಕರು ಶಾಸನಸಭೆಗಳಿಗೆ ಆಯ್ಕೆಯಾಗಬೇಕು ಎಂದರು.

ಹಣ ನೀಡಿದವರಿಗೆ ಮತ ಚಲಾಯಿಸುವ ಬದಲು ಯೋಗ್ಯರಿಗೆ ಮತ ಚಲಾಯಿಸುವ ಮನೋಭಾವ ಬೆಳೆಸಿಕೊಂಡರೆ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳಲಿದೆ ಎಂದು ಹೇಳಿದರು.

ಬೈರಮಂಗಲ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜಣ್ಣ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲೇ ಮಕ್ಕಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವುದೆ ಅಣಕು ಯುವ ಸಂಸತ್ ಸ್ಪರ್ಧೆಗಳ ಉದ್ದೇಶವಾಗಿದೆ. ವಿದ್ಯಾರ್ಥಿಗಳು ನಮ್ಮ ಸಂವಿಧಾನವನ್ನು ಅಧ್ಯಯನ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು’ ಎಂದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಯಿತು. ಮತದಾರರ ಸಾಕ್ಷರತಾ ಸಂಘದ ಜಿಲ್ಲಾ ಸಂಚಾಲಕ ಎಂ.ಎನ್. ಪ್ರದೀಪ್, ಉಪನ್ಯಾಸಕರಾದ ಡಾ. ನಾಗೇಶ್, ಡಾ. ಕಿರಣ್ ಕುಮಾರ್, ಮಂಜುನಾಥ್, ಶಿಲ್ಪ, ರಾಣಿಕುಮಾರಿ, ಮಂಜುಳಾ ಹಾಗೂ ಇತರರು ಇದ್ದರು.

ಜನಪ್ರತಿನಿಧಿಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬುದನ್ನು ಎಲ್ಲರೂ ವಹಿಸಬೇಕು. ಪ್ರಜಾಪ್ರಭುತ್ವದ ವಿಫಲತೆಗೆ ಜನರ ಅಜಾಗರೂಕತೆಯೇ ಕಾರಣ. ಜನಪ್ರತಿನಿಧಿಗಳನ್ನು ದೇವರಂತೆ ಆರಾಧಿಸುವುದು ಅಪಾಯಕಾರಿ
ರಾಜಣ್ಣ ಪ್ರಾಂಶುಪಾಲ ಭೈರಮಂಗಲ ಸರ್ಕಾರಿ ಸರ್ಕಾರಿ ಪಿಯು ಕಾಲೇಜು

ಮತ ಮಾರಾಟಕ್ಕಿಲ್ಲ 

ಚುನಾವಣೆ ಸಂದರ್ಭದಲ್ಲಿ ಜನರು ನಮ್ಮ ಊರಿನಲ್ಲಿ ಮತ ಮಾರಾಟಕ್ಕಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು. ಚುನಾವಣೆಯಲ್ಲಿ ನಿರ್ಭೀತಿಯಿಂದ ನಿಷ್ಪಕ್ಷವಾಗಿ ಮತ ಚಲಾಯಿಸುವುದು ನಮ್ಮ ಹಕ್ಕು ಎನ್ನುವ ಅರಿವು ಪ್ರತಿಯೊಬ್ಬ ಮತದಾರರಲ್ಲೂ ಮೂಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ಪ್ರಾಮಾಣಿಕರನ್ನಷ್ಟೇ ಗೆಲ್ಲಿಸಬೇಕು. ಜಾತಿ ಮತ್ತು ಧರ್ಮ ಹಾಗೂ ಆಸೆ–ಆಮಿಷದ ಹೆಸರಿನಲ್ಲಿ ಮತ ಕೇಳುವವರನ್ನು ದೂರವಿಟ್ಟು ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು ಎಂದು ಡಿಡಿಪಿಯು ಮರಿಸ್ವಾಮಿ ಹೇಳಿದರು. ಉಳ್ಳವರ ಪ್ರಜಾಪ್ರಭುತ್ವ ಅಪಾಯಕಾರಿ  ‘ರಾಜಕೀಯ ಪದವೀಧರರ ಪಾಂಡಿತ್ಯಕ್ಕೂ ನಿಜವಾದ ರಾಜಕೀಯ ನೇತಾರರಿಗೂ ವ್ಯತಿರಿಕ್ತ ಸಂಬಂಧವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯಗಳನ್ನು ಕಾಪಾಡುವುದು ಮುಖ್ಯ. ಪ್ರಜಾಪ್ರಭುತ್ವವು ಉಳ್ಳವರ ಪಾಲಾದರೆ ಅಪಾಯಕಾರಿ. ಇತ್ತೀಚೆಗೆ ಪಾರದರ್ಶಕತೆ ಪ್ರಾಮಾಣಿಕತೆ ಜಾತ್ಯತೀತ ಮೌಲ್ಯ ಸಾಂವಿಧಾನಿಕ ಆಶಯಗಳನ್ನು ಮರೆಮಾಚಲಾಗುತ್ತಿದೆ. ಜಾತಿ ಮತ್ತು ಧರ್ಮದ ಸಂಗತಿಗಳೇ ಈಗ ಮುನ್ನೆಲೆಗೆ ಬರುತ್ತಿವೆ. ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಕೊಡದೆ ಹೊರಗಿನವರಿಗೆ ಮಣೆ ಹಾಕಲಾಗುತ್ತಿದೆ. ಸ್ಥಳೀಯರ ಆಶೋತ್ತರಗಳಿಗೆ ಸ್ಪಂದಿಸುವ ಗುಣ ಸ್ಥಳೀಯ ಜನ ನಾಯಕರಿಗೆ ಇರುತ್ತದೆಯೇ ಹೊರತು ಹೊರಗಿನವರಿಗಲ್ಲ’ ಎಂದು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ. ಶಿವಣ್ಣ ಅಭಿಪ್ರಾಯಪಟ್ಟರು.