ADVERTISEMENT

ಅಂತರ್ಜಲ ಮಟ್ಟ ಕುಸಿತ: ಕನಕಪುರ ತಾಲ್ಲೂಕಿಗೆ ಕಾವೇರಿ, ಅರ್ಕಾವತಿ ಆಸರೆ

ಬರಡನಹಳ್ಳಿ ಕೃಷ್ಣಮೂರ್ತಿ
Published 15 ಮಾರ್ಚ್ 2024, 4:38 IST
Last Updated 15 ಮಾರ್ಚ್ 2024, 4:38 IST
ಕನಕಪುರ ನಾರಾಯಣಪ್ಪನ ಕೆರೆಯಲ್ಲಿ ತುಂಬಿಸಿದ್ದ ನೀರು ಬೇಸಿಗೆಯಿಂದ ಖಾಲಿಯಾಗಿರುವುದು
ಕನಕಪುರ ನಾರಾಯಣಪ್ಪನ ಕೆರೆಯಲ್ಲಿ ತುಂಬಿಸಿದ್ದ ನೀರು ಬೇಸಿಗೆಯಿಂದ ಖಾಲಿಯಾಗಿರುವುದು   

ಕನಕಪುರ: ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ತಾಲ್ಲೂಕಿನಲ್ಲಿ ಬರಗಾಲದ ಕಾರಣದಿಂದ ಅಂತರ್ಜಲ ಕುಸಿತವಾಗಿ ಅಲ್ಲಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ತಾಲ್ಲೂಕು ಆಡಳಿತವು ಖಾಸಗಿ ಕೊಳವೆ ಬಾವಿ ಮತ್ತು ಟ್ಯಾಂಕರ್‌ ಮೂಲಕ ನೀರಿನ ನಿರ್ವಹಣೆಯನ್ನು ಮಾಡುತ್ತಿದೆ.

ಜಿಲ್ಲೆಯಲ್ಲಿ ಕನಕಪುರ ತಾಲ್ಲೂಕನ್ನು ಈಗಾಗಲೇ ಬರಗಾಲ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಳಕ್ಕಾಗಿ ಸಾವಿರಕ್ಕೂ ಹೆಚ್ಚು ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಿದ್ದು, ಕೆರೆಗಳನ್ನು ಕಾವೇರಿ  ಮತ್ತು ಅರ್ಕಾವತಿ ನದಿಯ ನೀರಿನಿಂದ ತುಂಬಿಸಲಾಗಿದೆ.

ಆದರೆ, ಬರಗಾಲ ಹೆಚ್ಚಾಗುತ್ತಿದಂತೆ ಬೇಸಿಗೆಯ ತಾಪಕ್ಕೆ ತಾಲ್ಲೂಕಿನ ಕೆರೆಗಳು ಬರಿದಾಗಿವೆ. ತುಂಬಿಸಿದ್ದ ಕೆರೆಗಳು ಖಾಲಿಯಾಗಿ ಒಣಗುತ್ತಿವೆ. ಅಂತರ್ಜಲ ಕಡಿಮೆ ಆಗಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳು ಬತ್ತಲಾರಂಭಿಸಿವೆ. ಹಲವು ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಆಗಿ, ನೀರಿನ ಸಮಸ್ಯೆ ಎದುರಾಗಿದೆ.

ADVERTISEMENT

ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕನಕಪುರದಲ್ಲಿ ನಡೆಸಿದ ಕೆಡಿಪಿ ಸಭೆಯನ್ನು ನಡೆಸಿದಾಗ ತಾಲ್ಲೂಕಿನಲ್ಲಿ ಬರಗಾಲ ನಿರ್ವಹಣೆಯನ್ನು ಹೇಗೆ ಮಾಡಿದ್ದೀರಿ, ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮತ್ತು ಸಿಇಒ ಅವರಿಗೆ ಸೂಚನೆ ನೀಡಿದ್ದರು.

ಅದರಂತೆ ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ ತಾಲ್ಲೂಕು ಆಡಳಿತವು ಗ್ರಾಮ ಪಂಚಾಯ್ತಿ ಮೂಲಕ ಕೊಳವೆ ಬಾವಿಗಳಿಗೆ ಹೆಚ್ಚಿನ ಪೈಪ್‌ಗಳನ್ನು ಬಿಟ್ಟು ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ ಟ್ಯಾಂಕರ್‌ ಮೂಲಕ ನೀರಿನ ನಿರ್ವಹಣೆ ಮಾಡಲಾಗುತ್ತಿದೆ.

ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ತಲೆದೋರಿದೆ. ಅಂತಹ ಪ್ರದೇಶಗಳಲ್ಲಿ ಇರುವ ಕೊಳವೆ ಬಾವಿಗಳಲ್ಲಿ ಇನ್ನು ಹೆಚ್ಚಿನ ಪೈಪ್‌ಗಳನ್ನು ಬಿಟ್ಟು ಅದರಲ್ಲೂ ನೀರು ಸಿಗದಿದ್ದಾಗ ಅಕ್ಕಪಕ್ಕದ ಜಮೀನುಗಳಲ್ಲಿನ ರೈತರ ಕೊಳವೆ ಬಾವಿಗಳನ್ನು ತಿಂಗಳಿಗೆ ₹ 20 ಸಾವಿರದಂತೆ ಒಪ್ಪಂದ ಮಾಡಿಕೊಂಡು ಜನರಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ.

ಕೆಲವು ಗ್ರಾಮಗಳಲ್ಲಿ ಪಂಚಾಯಿತಿ ಬೋರ್‌ನಲ್ಲೂ ನೀರು ಸಿಗದೆ, ಅಕ್ಕಪಕ್ಕದ ರೈತರ ಜಮೀನಿನಲ್ಲೂ ನೀರು ಸಿಗದಿದ್ದಾಗ ಅಂತಹ ಗ್ರಾಮಗಳಲ್ಲಿ ಖಾಸಗಿಯಾಗಿ ಟ್ಯಾಂಕರ್‌ ಮೂಲಕ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.

3 ಸಾವಿರ ಲೀಟರ್‌ ನೀರಿನ ಟ್ಯಾಂಕರ್‌ಗೆ, 5 ಕಿಲೋ ಮೀಟರ್‌ ವರೆಗೆ ₹ 600, ಅದಕ್ಕಿಂತ ಹೆಚ್ಚಿನ ಕಿಲೋ ಮೀಟರ್‌ ಆದರೆ 1 ಕಿಲೋ ಮೀಟರ್‌ಗೆ ₹ 40ರಂತೆ ಹೆಚ್ಚಿಗೆ ಕೊಡುವ ಕರಾರಿನ ಮೇಲೆ ನೀರು ಪೂರೈಕೆ ಮಾಡಲಾಗುತ್ತಿದೆ.

ಸದ್ಯಕ್ಕೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದರೂ ತಾಲ್ಲೂಕು ಆಡಳಿತವು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ದೊಡ್ಡಾಲಹಳ್ಳಿ ಅಂಬೇ‍ಡ್ಕರ್‌ ಕಾಲೋನಿಯಲ್ಲಿ ಟ್ಯಾಂಕರ್‌ನಿಂದ ನೀರು ತೆಗೆದುಕೊಳ್ಳೂತ್ತಿರುವ ಮಹಿಳೆಯರು
ಕನಕಪುರ ತಾಲ್ಲೂಕಿನಲ್ಲಿ ಎದುರಾಗುವ ಬರಗಾಲ ನಿರ್ವಹಣೆಗೆ ಸಿಇಒ ದಿಗ್ವಿಜಯ ಬೋಡ್ಕೆ ಅಧ್ಯಕ್ಷಯಲ್ಲಿ ನಡೆದ ಸಭೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು

Cut-off box - ಜನ– ಜಾನುವಾರುಗಳಿಗೆ ನೀರಿನ ಸಮಸ್ಯೆ ಬಾರದಂತೆ ನಿರ್ವಹಣೆ ಮಾಡಲು ಪಂಚಾಯಿತಿಗೆ ಒಬ್ಬರು ನೋಡಲ್‌ ಆಫೀಸರ್‌ ನೇಮಕ ಮಾಡಲಾಗಿದೆ ತಾಲ್ಲೂಕಿನ ಬರಗಾಲ ನಿರ್ವಹಣೆಗೆ ಕಳೆದ ವರ್ಷದ ₹ 33 ಲಕ್ಷ ಈ ವರ್ಷ ₹ 67 ಲಕ್ಷ ಒಟ್ಟು ₹ 1 ಕೋಟಿಯಷ್ಟು ಹಣವಿದೆ. ನೀರು ಕಡಿಮೆ ಆಗಿರುವ ಕೊಳವೆ ಬಾವಿಗಳನ್ನು ಪುನಃ ಕೊರೆಸುತ್ತಿದೇವೆ. ನೀರು ಸಿಗದಿದ್ದರೆ ಖಾಸಗಿ ಕೊಳವೆ ಬಾವಿ ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳುತ್ತಿದ್ದೇವೆ ಕೊಳವೆ ಬಾವಿ ಸಿಗದ ಕಡೆ ಒಂದು ಟ್ಯಾಂಕರ್‌ಗೆ ₹ 600ರಂತೆ ಟೆಂಡರ್‌ ಮೂಲಕ ನೀರು ಪಡೆಯುತ್ತಿದ್ದೇವೆ. ಸದ್ಯಕ್ಕೆ ಬರನಿರ್ವಹಣೆ ಸಮಪರ್ಕವಾಗಿ ಆಗುತ್ತಿದ್ದು ಎಲ್ಲಾ ಕಡೆ ನೀರಿನ ವ್ಯವಸ್ಥೆ ಆಗಿದೆ. ಡಾ.ಸ್ಮಿತಾ ರಾಮ್‌ ತಹಶೀಲ್ದಾರ್‌ ಕನಕಪುರ

Cut-off box - ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಟಾಸ್ಕ್‌ ಪೋರ್ಸ್‌ ಸಮಿತಿಯನ್ನು ರಚಿಸಿದ್ದು ಎಲ್ಲಾ ಪಿಡಿಒಗಳ ಸಭೆ ನಡೆಸಿ ನೀರಿನ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿದ್ದೇವೆ. ನೀರಿನ ಕೊರತೆ ಎಲ್ಲಿ ಇದೆಯೋ ಅಲ್ಲಿ ಖಾಸಗಿ ಕೊಳವೆ ಬಾವಿ ಇಲ್ಲವೆ ಟ್ಯಾಂಕರ್‌ ಮೂಲಕ ನೀರಿನ ಬವಣೆಯನ್ನು ನೀಗಿಸಲಾಗುತ್ತಿದೆ. ವಾರಕ್ಕೆ ಒಂದು ಸಭೆಯನ್ನು ನಡೆಸಿ ರಿಪೋರ್ಟ್‌ ತೆಗೆದುಕೊಳ್ಳಲಾಗುತ್ತಿದೆ. ಅ ಸಾರ್ವಜನಿಕರು ನೀರಿನ ಸಮಸ್ಯೆ ತಿಳಿಸಲು ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯಿತಿಯಿಂದ ಸಹಾಯವಾಣಿಯ ವ್ಯವಸ್ಥೆ ಮಾಡಿದ್ದು ಸಾರ್ವಜನಿಕರು ನೇರವಾಗಿ ಸಮಸ್ಯೆಯನ್ನು ತಿಳಿಸಬಹುದಾಗಿದೆ. ಭೈರಪ್ಪ ತಾ.ಪಂ. ಇಒ ಕನಕಪುರ

Cut-off box - ಸದ್ಯದ ಪರಿಸ್ಥಿತಿಯಲ್ಲಿ ಕನಕಪುರ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಾಣುತ್ತಿಲ್ಲ ಮುಂದೆ ನೀರಿನ ಸಮಸ್ಯೆ ದೊಡ್ಡದಾಗಿ ತಲೆದೋರಬಹುದು. ಅದಕ್ಕಾಗಿ ಈಗಿನಿಂದಲೇ ನೀರಿನ ನಿರ್ವಹಣೆಗೆ ನಾವೆಲ್ಲಾ ಸಿದ್ಧರಾಗಬೇಕು. ನೀರನ್ನು ಗ್ರಾಮಗಳಲ್ಲಿ ಮಿತವಾಗಿ ಬಳಸಬೇಕು ಪಂಚಾಯಿತಿಗಳು ನೀರನ್ನು ವ್ಯರ್ಥವಾಗದ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಜನರು ಸಹ ನೀರನ್ನು ಅವಶ್ಯಕತೆಯಷ್ಟು ಮಾತ್ರ ಬಳಕೆ ಮಾಡಬೇಕು ಮಂಜು ಕೆಬ್ಬಳ್ಳಿ ನಿವಾಸಿ ಖಾಲಿಯಾಗಿರುವ ಕೆರೆಗಳನ್ನು ಮತ್ತೆ ತುಂಬಿಸಬೇಕು. ನೀರಿನ ನಿರ್ವಹಣೆಗೆ ಗ್ರಾಮ ಪಂಚಾಯ್ತಿಗಳು ಹೆಚ್ಚಿನ ಒತ್ತು ಕೊಡಬೇಕು. ಜನರ ಜೊತೆಗೆ ಜಾನುವಾರುಗಳಿಗೂ ನೀರು ಮತ್ತು ಮೇವಿನ ಕೊರತೆ ಬರದಂತೆ ನೋಡಿಕೊಳ್ಳಬೇಕು. ಬರಗಾಲ ನಿರ್ವಹಣೆಯಲ್ಲಿ ತಾಲ್ಲೂಕು ಆಡಳಿತದ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕು. ರಾಮಕೃಷ್ಣ ಸಾಸಲಾಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.