ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಇದೇ 23 ಹಾಗೂ 24ರಂದು ಬೃಹತ್ ಪಾದಯಾತ್ರೆಯಲ್ಲಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಕುಮಾರ್ ತಿಳಿಸಿದರು.
‘23ರಂದು ರಾಮನಗರದ ಐಜೂರು ವೃತ್ತದಲ್ಲಿ ಪಾದಾಯಾತ್ರೆ ಆರಂಭವಾಗಲಿದ್ದು, ಜಿಲ್ಲೆಯ ಪ್ರಮುಖ ಮೂರು ಮಠಾಧೀಶರು ಭಾಗವಹಿಸಲಿದ್ದಾರೆ. ಬಿಡದಿ ಮೂಲಕ ಪಾದಯಾತ್ರೆ ಸಾಗಲಿದ್ದು, ಕೆಂಗೇರಿಯ ಮಠದಲ್ಲಿ ವಾಸ್ತವ್ಯ ಹೂಡಲಿದ್ದೇವೆ. ನಂತರ ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿಗೆ ಬಸವರಾಜ ಬೊಮ್ಮಾಯಿ ಸಲ್ಲಿಸಲಿದ್ದೇವೆ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ರೈತರಿಗೆ ದೀಪಾವಳಿ ವೇಳೆಗೆ ಶುಭ ಸುದ್ದಿಯನ್ನು ರಾಜ್ಯ ಸರ್ಕಾರ ನೀಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆ ನೀರಾವರಿ ಸಚಿವರಾಗಿದ್ದರು. ಹಾಗಾಗಿ, ಅಣೆಕಟ್ಟು ನಿರ್ಮಾಣ ಸಂಬಂಧ ಇರುವ ಅವರಿಗೆ ಮಾಹಿತಿ ಇದೆ. ಕಾನೂನು ತೊಡಕಿನ ಬಗ್ಗೆ ಸಬೂಬು ಹೇಳದೇ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮಹೇಶ್, ಲೀಲಾ ರಾಮ್‌ಪ್ರಸಾದ್ ಗೌಡ, ವತ್ಸಲಾ, ವಾಸುದೇವ, ಪ್ರಸಾದ್, ಸುಧೀರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.