ರಾಮನಗರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲನೊಬ್ಬ ಮಂಗಳವಾರ ಶೂ ಎಸೆಯಲು ಯತ್ನಿಸಿದ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೃತ್ಯವನ್ನು ಖಂಡಿಸಿರುವ ಬೆಂಗಳೂರು ದಕ್ಷಿಣ ಜಿಲ್ಲಾ ವಕೀಲರ ಸಂಘವು, ತಪ್ಪಿತಸ್ಥ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಬುಧವಾರ ಪ್ರತಿಭಟಿಸಿದರು.
ಸಂಘದ ಆವರಣದಲ್ಲಿ ಬೆಳಿಗ್ಗೆ ಜಮಾಯಿಸಿದ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ವಕೀಲನ ವಿರುದ್ಧ ಘೋಷಣೆಗಳನ್ನು ಕೂಗಿದರು. ಸುಪ್ರೀಂ ಕೋರ್ಟ್ ಪಾವಿತ್ರ್ಯತೆ ಕಾಪಾಡಬೇಕಾದರೆ ಇಂತಹ ಘಟನೆಗಳು ನಡೆಯದಂತೆ ಕೋರ್ಟ್ ಆವರಣದಲ್ಲಿ ಸೂಕ್ತ ಬಂದೋಬಸ್ತ್ ಮಾಡಬೇಕು. ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ತಿಮ್ಮೇಗೌಡ, ‘ದೇಶದ ಸವೋಚ್ಚ ನ್ಯಾಯಾಲಯದ 52ನೇ ಮುಖ್ಯ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಆರ್. ಗವಾಯಿ ಅವರತ್ತ, ಪೂರ್ವಾಗ್ರಹ ಪೀಡಿತನಾಗಿ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿರುವುದು ವಕೀಲರ ಪಾಲಿಗೆ ಕಪ್ಪು ಚುಕ್ಕೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಅಂಗವಾದ ನ್ಯಾಯಾಂಗದ ಪಾವಿತ್ರ್ಯತೆ ಕಾಪಾಡುವುದು ಪ್ರತಿಯೊಬ್ಬ ವಕೀಲನ ಹಕ್ಕು. ಅಂತಹದ್ದರಲ್ಲಿ ವಕೀಲನೇ ಇಂತಹ ಕೃತ್ಯ ಎಸಗಿರುವುದು ಖಂಡನೀಯ. ನ್ಯಾಯಾಂಗದ ಮುಂದೆ ಯಾರೂ ದೊಡ್ಡವರಲ್ಲ. ತಪ್ಪಿತಸ್ಥ ವಕೀಲನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ದೇಶಕ್ಕೆ ಸಂದೇಶ ನೀಡಬೇಕು’ ಎಂದು ಒತ್ತಾಯಿಸಿದರು.
‘ಸುಪ್ರೀಂ ಕೋರ್ಟ್‌ನಿಂದಿಡಿದು ಕೆಲ ಹಂತದ ನ್ಯಾಯಾಲಯಗಳಲ್ಲಿ ಇನ್ನು ಮುಂದೆ ನ್ಯಾಯಾಂಗ ವ್ಯವಸ್ಥೆಗೆ ಅಗೌರವ ತೋರುವಂತಹ ಇಂತಹ ಕೃತ್ಯಗಳು ನಡೆಯದಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕೋರ್ಟ್ ಆವರಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಹನುಮಂತರಾಜು, ಉಪಾಧ್ಯಕ್ಷ ಚಂದ್ರಶೇಖರ್, ಖಜಾಂಚಿ ಮಂಜೇಶ್ ಗೌಡ ಆರ್.ಸಿ, ಹಿರಿಯ ವಕೀಲರಾದ ಸುಬ್ಬಾ ಶಾಸ್ತ್ರಿ, ಎಸ್. ಲೋಕೇಶ್, ದೇವರಾಜು, ಶಿವಣ್ಣಗೌಡ, ಉಮೇಶ್, ಅಶೋಕ್, ಎಚ್.ಎಸ್. ವಿಜಯ್ ಕುಮಾರ್ ಹಾಗೂ ಇತರರು ಇದ್ದರು.
ವಕೀಲನ ಬಂಧನಕ್ಕೆ ಆಗ್ರಹ
ಕೋರ್ಟ್ ಕಲಾಪ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್‌ನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದರು. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ನ್ಯಾ. ಗವಾಯಿ ಅವರ ಮೇಲೆ ನಡೆದಿರುವ ಘಟನೆಯ ಹಿಂದೆ ಸನಾತನ ಜಾತಿ ಮನಸ್ಥಿತಿ ಇದೆ. ಶೂ ಎಸೆದಿರುವ ವಕೀಲ ‘ಸನಾತನ ಧರ್ಮದ ಮೇಲಿನ ಅವಮಾನವನ್ನು ಹಿಂದೂಸ್ತಾನವು ಸಹಿಸುವುದಿಲ್ಲ’ ಎಂದಿದ್ದಾನೆ. ಆ ಮೂಲಕ ದಲಿತ ವ್ಯಕ್ತಿಯೊಬ್ಬರು ನ್ಯಾಯಾಂಗದ ಅತ್ಯುನ್ನತ ಹುದ್ದೆ ಅಲಂಕರಿಸುವುದಕ್ಕೆ ಅಸಹನೆ ತೋರಿದ್ದಾನೆ. ಇದು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಚಾರ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ ಪದಾಧಿಕಾರಿಗಳಾದ ಚಲುವರಾಜು ಗುಡ್ಡೆ ವೆಂಕಟೇಶ್ ಕುಂಬಾಪುರ ಬಾಬು ಪ್ರಕಾಶ್ ವೆಂಕಟೇಶ್ ಗವಿಯಪ್ಪ ಯೋಗೇಶ್ ಕೇತೋಹಳ್ಳಿ ಬಸವರಾಜು ಮರಿಸ್ವಾಮಿ ಸಿದ್ದರಾಜು ಚೇತನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.