ADVERTISEMENT

ಅನ್ನಭಾಗ್ಯ ಅಕ್ಕಿ, ರಾಗಿ ಕಳ್ಳತನ: ಇಬ್ಬರ ಅಮಾನತು

ಕರ್ತವ್ಯ ಲೋಪ: ಆಹಾರ ನಿರೀಕ್ಷಕ, ಶಿರಸ್ತೇದಾರ್ ಅಮಾನತುಗೊಳಿಸಿದ ಆಯುಕ್ತರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 7:21 IST
Last Updated 13 ಜನವರಿ 2024, 7:21 IST

ಚನ್ನಪಟ್ಟಣ (ರಾಮನಗರ): ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಸಂಘದ (ಟಿಎಪಿಸಿಎಂಎಸ್) ಗೋದಾಮಿನಿಂದ ಕಳೆದ ನವೆಂಬರ್‌ನಲ್ಲಿ ಅನ್ನಭಾಗ್ಯ ಯೋಜನೆಯ 1543 ಕ್ವಿಂಟಲ್ ಅಕ್ಕಿ ಮತ್ತು 70 ಕ್ವಿಂಟಲ್ ರಾಗಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಕರ್ತವ್ಯಲೋಪಕ್ಕಾಗಿ ಇಬ್ಬರು ಅಧಿಕಾರಿಗಳನ್ನು ಶುಕ್ರವಾರ ಅಮಾನತಗೊಳಿಸಿದೆ.

ಚನ್ನಪಟ್ಟಣದ ಆಹಾರ ನಿರೀಕ್ಷಕ ಚೇತನ್‌ಕುಮಾರ್ ಕೆ. ಮತ್ತು ಆಹಾರ ಶಿರಸ್ತೇದಾರ್ ಶಾಂತಕುಮಾರಿ ಅವರನ್ನು ಅಮಾನತುಗೊಳಿಸಿ, ಇಲಾಖೆಯ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಯೂ ಆಗಿರುವ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ. ಗೋದಾಮಿನಿಂದ ಅಕ್ಕಿ ಮತ್ತು ರಾಗಿ ಕಳ್ಳತನವಾಗಿರುವ ಕುರಿತು ಕಳೆದ ನ. 22ರಂದು ಆಹಾರ ನಿರೀಕ್ಷಕ ಚೇತನ್‌ಕುಮಾರ್ ನೀಡಿದ್ದ ದೂರಿನ ಮೇರೆಗೆ ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸರ್ಕಾರದ ಬೊಕ್ಕಸಕ್ಕೆ ಒಟ್ಟು ₹55.04 ಲಕ್ಷ ನಷ್ಟ ಉಂಟುಮಾಡಿದ್ದ ಪ್ರಕರಣದ ಕುರಿತು ಪೊಲೀಸ್ ತನಿಖೆ ಜೊತೆಗೆ, ಇಲಾಖಾ ತನಿಖೆಯು ನಡೆಯುತ್ತಿತ್ತು. ಮೇಲ್ನೋಟಕ್ಕೆ ಚೇತನ್‌ಕುಮಾರ್ ಹಾಗೂ ಶಾಂತಕುಮಾರಿ ಅವರ ಕರ್ತವ್ಯಲೋಪ ಕಂಡುಬಂದಿದ್ದರಿಂದ, ಇಲಾಖೆಯ ಉಪ ನಿರ್ದೇಶಕಿ ರಮ್ಯ ಸಿ.ಆರ್ ಅವರು ಇಬ್ಬರಿಗೂ ನೋಟಿಸ್ ಜಾರಿ ಮಾಡಿದ್ದರು.

ADVERTISEMENT

ಅದಕ್ಕೆ ಅವರಿಬ್ಬರು ನೀಡಿದ ಪ್ರತಿಕ್ರಿಯೆ ತೃಪ್ತಿದಾಯಕವಾಗಿರಲಿಲ್ಲ. ಪಡಿತರ ದಾಸ್ತಾನು ಬಂದಾಗ ಅಧಿಕಾರಿಗಳು ಅದನ್ನು ಸಮಗ್ರವಾಗಿ ಪರಿಶೀಲಿಸಬೇಕು. ನಿಯಮಿತವಾಗಿ ನ್ಯಾಯಬೆಲೆ ಅಂಗಡಿ ಹಾಗೂ ಸಗಟು ಮಳಿಗೆಗಳಲ್ಲಿನ ದಾಸ್ತಾನು ಎತ್ತುವಳಿ, ವಿತರಣೆ ಹಾಗೂ ಅಂತಿಮ ಶಿಲ್ಕಿನ ಬಗ್ಗೆ ಪರಿಶೀಲನೆ ನಡೆಸಿದ್ದಲ್ಲಿ, ಗೋದಾಮಿನಿಂದ ಅಕ್ಕಿ ಮತ್ತು ರಾಗಿ ಕಳ್ಳತನವಾಗುತ್ತಿರಲಿಲ್ಲ. ನೌಕರರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ವಾಸಿರೆಡ್ಡಿ ಅವರು ಇಬ್ಬರನ್ನು ಅಮಾತು ಮಾಡಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು, ಗೋದಾಮಿನ ವ್ಯವಸ್ಥಾಪಕ ಬಿ.ಆರ್. ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ್ದಾರೆ. ಇದಾದ ಒಂದೇ ವಾರದಲ್ಲಿ ಆತ ಜಾಮೀನ ಮೇಲೆ ಹೊರಬಂದಿದ್ದ. ಇಲಾಖೆಯು ಟಿಎಪಿಸಿಎಂಎಸ್‌ಗೆ ನೀಡಿದ್ದ ಪಡಿತರ ಅಕ್ಕಿ ಸಂಗ್ರಹದ ಪರವಾನಗಿ ರದ್ದುಪಡಿಸಿ, ಸಂಘಕ್ಕೆ ಪಾವತಿಯಾಗಬೇಕಿರುವ ಸುಮಾರು ₹65 ಲಕ್ಷ ಬಿಲ್‌ ಅನ್ನು ಜಿಲ್ಲಾಧಿಕಾರಿ ತಡೆ ಹಿಡಿಯಲಾಗಿದೆ.

ಘಟನೆ ನಡೆದು ಒಂದೂವರೆ ತಿಂಗಳಾಗುತ್ತಾ ಬಂದರೂ ಅಕ್ಕಿ ಸಾಗಿಸಿದವರು ಯಾರು ಮತ್ತು ಎಲ್ಲಿಗೆ ಸಾಗಿಸಲಾಗಿದೆ ಎಂಬ ಸುಳಿವು ಮಾತ್ರ ಸಿಕ್ಕಿಲ್ಲ. ಪೊಲೀಸ್ ತನಿಖೆ ಸಹ ಕುಂಟುತ್ತಾ ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.