ADVERTISEMENT

ಸುದರ್ಶನ್ ಪರ ಕೆಎಟಿ ತೀರ್ಪು

ಮತ್ತೆ ಮುನ್ನೆಲೆಗೆ ಬಂದ ತಹಶೀಲ್ದಾರ್ ವರ್ಗಾವಣೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 4:29 IST
Last Updated 20 ಜೂನ್ 2022, 4:29 IST
ಬಿ.ಕೆ. ಸುದರ್ಶನ್
ಬಿ.ಕೆ. ಸುದರ್ಶನ್   

ಚನ್ನಪಟ್ಟಣ: ಚನ್ನಪಟ್ಟಣ ತಹಶೀಲ್ದಾರ್ ಆಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಬಿ.ಕೆ. ಸುದರ್ಶನ್ ಅವರು ತಹಶೀಲ್ದಾರ್ ಆಗಿ ಮುಂದುವರೆಯುವಂತೆ ಕರ್ನಾಟಕ ಆಡಳಿತ ನ್ಯಾಯಾಧೀಕರಣ (ಕೆಎಟಿ) ತೀರ್ಪು ನೀಡಿದ್ದು, ಚನ್ನಪಟ್ಟಣ ತಹಶೀಲ್ದಾರ್ ಪ್ರಕರಣ ಮತ್ತೆ ಸುದ್ದಿಯಾಗುತ್ತಿದೆ.

ಕಳೆದ ಏಪ್ರಿಲ್ 29ರಂದು ಕಂದಾಯ ಇಲಾಖೆ ಆದೇಶದಂತೆ ತಹಶೀಲ್ದಾರ್ ಆಗಿದ್ದ ನಾಗೇಶ್ ಅವರ ಎತ್ತಂಗಡಿಯಾಗಿತ್ತು. ಅಂದು ಸಂಜೆಯೆ ಬಿ.ಕೆ.ಸುದರ್ಶನ್ ಅಧಿಕಾರ ವಹಿಸಿಕೊಂಡಿದ್ದರು. ಮಾರನೇ ದಿನ ಏ.30 ರಂದು ಬಿ.ಕೆ.ಸುದರ್ಶನ್ ಅವರನ್ನು ಎತ್ತಂಗಡಿ ಮಾಡಿ ಅವರ ಜಾಗಕ್ಕೆ ಹರ್ಷವರ್ಧನ್ ಅವರನ್ನು ತಹಶೀಲ್ದಾರ್ ಆಗಿ ನೇಮಿಸಲಾಗಿತ್ತು. ಕೇವಲ 24 ಗಂಟೆಗಳಲ್ಲಿ ಮೂರು ಮಂದಿ ಚನ್ನಪಟ್ಟಣ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು.

ಅಂದು ಇದನ್ನು ಪ್ರಶ್ನಿಸಿ ನಾಗೇಶ್ ಹಾಗೂ ಸುದರ್ಶನ್ ಇಬ್ಬರೂ ಕೆಎಟಿ ಮೊರೆ ಹೋಗಿದ್ದರು. ಈಗ ಕೆಎಟಿಯು
ಬಿ.ಕೆ. ಸುದರ್ಶನ್ ಅವರು ತಹಶೀಲ್ದಾರ್ ಆಗಿ ಮುಂದುವರೆಯುವಂತೆ ತೀರ್ಪು ನೀಡಿದೆ. ಇದರೊಂದಿಗೆ ಚನ್ನಪಟ್ಟಣ ತಹಶೀಲ್ದಾರ್ ಪ್ರಹಸನ ಮತ್ತೆ ಸದ್ದು ಮಾಡುತ್ತಿದೆ.

ADVERTISEMENT

ಇಬ್ಬರ ಅರ್ಜಿಯನ್ನು ವಿಚಾರಣೆ ನಡೆಸಿರುವ ಕೆಎಟಿಯು ನಾಗೇಶ್ ವಿಧಾನಸೌಧ ಸಚಿವಾಲಯದ ಅಧಿಕಾರಿಯಾಗಿದ್ದು, ಎರವಲು ಸೇವೆಯ ಮೇಲೆ ತಹಶೀಲ್ದಾರ್ ಆಗಿ ನಿಯೋಜನೆಗೊಂಡಿದ್ದರು. ಇವರ ಅವಧಿ ಮುಗಿದಿರುವ ಕಾರಣ ಅವರ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇನ್ನೂ ಹರ್ಷವರ್ಧನ್ ಗ್ರೇಡ್-2 ತಹಶೀಲ್ದಾರ್ ಆಗಿದ್ದು, ಇವರನ್ನು ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. ಹಾಗಾಗಿ ಸುದರ್ಶನ್ ಅವರು ತಹಶೀಲ್ದಾರ್ ಆಗಿ ಮುಂದುವರೆಯಬೇಕು ಎಂದು ಕೆಎಟಿ ತೀರ್ಪು ನೀಡಿದೆ.

ಚನ್ನಪಟ್ಟಣ ತಹಶೀಲ್ದಾರ್ ವರ್ಗಾವಣೆ ವಿಚಾರವು ಶಾಸಕ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದ್ದ ಕಾರಣ 24 ಗಂಟೆಗಳಲ್ಲಿ ಮೂರು ಮಂದಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುವಂತಾಗಿತ್ತು.

ಕಳೆದ ಎರಡು ವರ್ಷಗಳ ಹಿಂದೆ ತಹಶೀಲಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುದರ್ಶನ್ ಮೊದಲು ವರ್ಗಾವಣೆಯಾಗಿ ಅವರ ಜಾಗಕ್ಕೆ ನಾಗೇಶ್ ಬಂದಿದ್ದರು. ಎರಡು ವರ್ಷವಾದ ನಂತರ ಮೊದಲು ಏ.8 ರಂದು ನಾಗೇಶ್ ಎತ್ತಂಗಡಿಯಾಗಿ, ಸುದರ್ಶನ್ ನೇಮಕವಾಗಿದ್ದರು. ಆದರೆ ಒಂದೇ ರಾತ್ರಿ ಕುಮಾರಸ್ವಾಮಿ ಆ ಆದೇಶವನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ನಂತರ ಏಪ್ರಿಲ್ 29ರಂದು ಮತ್ತೆ ನಾಗೇಶ್ ವರ್ಗಾವಣೆಯಾಗಿ, ಸುದರ್ಶಶನ್ ಬಂದಿದ್ದರು. ಏಪ್ರಿಲ್
30ರ ಬೆಳಿಗ್ಗೆ ಸುದರ್ಶನ್ ಎತ್ತಂಗಡಿಯಾಗಿ ಹರ್ಷವರ್ಧನ್ ಬಂದಿದ್ದರು. ಈಗ ಕೆಎಟಿ ಮತ್ತೆ ಸುದರ್ಶನ್ ಪರ ತೀರ್ಪು ನೀಡಿದ್ದು ಇದು ತಾಲ್ಲೂಕು ರಾಜಕಾರಣದಲ್ಲಿ ಯಾವ ರೂಪ ಪಡೆದುಕೊಳ್ಳುತ್ತದೆಯೊ ಎಂಬ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.