
ಜೈಲು (ಪ್ರಾತಿನಿಧಿಕ ಚಿತ್ರ)
ರಾಮನಗರ: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಶಿಕ್ಷಕನೊಬ್ಬನಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ 22 ವರ್ಷ 6 ತಿಂಗಳು ಜೈಲು ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿದೆ. ಕನಕಪುರದ ಕೋಟೆ ನಿವಾಸಿ ಸತೀಶ್ ಕುಮಾರ್ (36) ಶಿಕ್ಷೆಗೊಳಗಾದ ಅಪರಾಧಿ.
ಪಟ್ಟಣದ ಶಾಲೆಯಲ್ಲಿ ಶಿಕ್ಷಕನಾಗಿದ್ದ ಸತೀಶ್, ಅದೇ ಶಾಲೆಯ 9ನೇ ತರಗತಿ ಓದುತ್ತಿದ್ದ ಸಮೀಪದ ಬಡಾವಣೆಯ ವಿದ್ಯಾರ್ಥಿನಿ ಜೊತೆ ಸಲುಗೆ ಬೆಳೆಸಿಕೊಂಡಿದ್ದ. 2021ರ ಮೇ 7ರಂದು ತಡರಾತ್ರಿ ಆಕೆಯನ್ನು ಪುಸಲಾಯಿತಿ ಮನೆಯಿಂದ ಅಪಹರಿಸಿ, ಅತ್ಯಾಚಾರ ಎಸಗಿದ್ದ. ಈ ಕುರಿತು ವಿದ್ಯಾರ್ಥಿನಿ ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ, ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಇನ್‌ಸ್ಪೆಕ್ಟರ್ ಸುಮಾರಾಣಿ ಅವರು, ಆರೋಪಿ ವಿರುದ್ಧ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶೆ ಪಂಚಾಕ್ಷರಿ ಅವರು, ಸತೀಶ್ ವಿರುದ್ಧದ ಆರೋಪ ಸಾಬೀತಾಗಿದ್ದರಿಂದ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು.
ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ವೀಣಾಕುಮಾರಿ ವಾದ ಮಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಸಕಾಲಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಕೆ.ಎಸ್. ಮಂಜು, ಚಿದಾನಂದ ಅನಗಂಡಿ ಹಾಗೂ ಕೋರ್ಟ್ ಸಿಬ್ಬಂದಿ ದಾದಾ ಖಲಂದರ್ ಶ್ರಮ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.