ಕನಕಪುರ: ‘ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ತಕ್ಷಣ ಗೌರವಧನ ಬಿಡುಗಡೆ ಮಾಡದಿದ್ದರೆ ಅತಿಥಿ ಶಿಕ್ಷಕರು ಶಾಲೆ ತೊರೆಯುವ ಅಭಿಯಾನ ಮಾಡಬೇಕಾಗುತ್ತದೆ’ ಎಂದು ಅತಿಥಿ ಶಿಕ್ಷಕರ ಸಂಘ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತಿಗೌಡ ಅವರಿಗೆ ಅತಿಥಿ ಶಿಕ್ಷಕರ ಸಂಘದಿಂದ ಶನಿವಾರ ಸಂಘದ ಅಧ್ಯಕ್ಷ ಮುನಿಶಿವ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
‘ಶಾಲೆ ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದಿದೆ. ತಾಲ್ಲೂಕಿನಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಇನ್ನೂ ವೇತನ ಬಿಡುಗಡೆಯಾಗದೆ ಅತಿಥಿ ಶಿಕ್ಷಕರು ಪರದಾಡುವ ಪರಿಸ್ಥಿತಿ ನಿರ್ಮಾಣ. ಸರ್ಕಾರ ಕೊಡುವ ವೇತನವನ್ನೇ ನಂಬಿಕೊಂಡು ಅತಿಥಿ ಶಿಕ್ಷಕರ ಕುಟುಂಬವು ಜೀವನ ನಡೆಸುತ್ತಿದೆ. ಜೂನ್‌ನಿಂದ ಶಾಲೆಗಳು ಪ್ರಾರಂಭವಾಗಿ ಸೆಪ್ಟೆಂಬರ್ ತಿಂಗಳವರೆಗೂ ನಾಲ್ಕು ತಿಂಗಳು ಕಳೆದರೂ ವೇತನ ಬಿಡುಗಡೆಯಾಗಿಲ್ಲ’ ಎಂದರು.
‘ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರು ಜೀವನ ನಡೆಸುವುದೇ ತುಂಬಾ ಕಷ್ಟಕರವಾಗಿದೆ. ಅದಕ್ಕಾಗಿ ಕೂಡಲೇ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು. ಬೇರೆ ತಾಲ್ಲೂಕುಗಳಲ್ಲಿ ಅತಿಥಿ ಶಿಕ್ಷಕರಿಗೆ ವೇತನ ಬಿಡುಗಡೆಯಾಗಿದೆ. ನಮ್ಮ ತಾಲ್ಲೂಕಿನಲ್ಲಿ ಮಾತ್ರ ಇನ್ನು ವೇತನ ಬಿಡುಗಡೆಯಾಗಿಲ್ಲ’ ಎಂದರು.
‘ಶೀಘ್ರವಾಗಿ ಶಿಕ್ಷಣ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು, ತಾಲ್ಲೂಕಿನ ಅತಿಥಿ ಶಿಕ್ಷಕರಿಗೆ ಬಾಕಿ ವೇತನ ಬಿಡುಗಡೆ ಮಾಡದಿದ್ದರೆ ಶಾಲೆ ತೊರೆಯುವ ಅಭಿಯಾನ ಹಮ್ಮಿಕೊಳ್ಳಲು ಎಲ್ಲಾ ಅತಿಥಿ ಶಿಕ್ಷಕರು ನಿರ್ಧಸಿದ್ದಾರೆ’ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತಿಗೌಡ ಮಾತನಾಡಿ, ‘ಈಗಷ್ಟೇ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಂದಿದ್ದೇನೆ. ಕಾಲಾವಕಾಶ ಕೊಡಿ, ಅತಿಥಿ ಶಿಕ್ಷಕರ ವೇತನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.
ಅತಿಥಿ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ರುದ್ರೇಶ್, ಗೌರವಾಧ್ಯಕ್ಷ ಜಯರಾಮು, ಕಾರ್ಯದರ್ಶಿ ರೇಣುಕಾ, ಕುಮಾರ್ ನಾಯಕ್, ಅರ್ಜುನ್, ಹಳ್ಳಿ ಕುಮಾರ ನಾಯಕ್, ಶಿವ ಬೀರಯ್ಯ, ಶಿವಮಾದು, ತ್ಯಾಗರಾಜು, ಜಗದೀಶ್, ಮಹೇಶ್, ದೊಡ್ಡಯ, ಜಂಬೀರಯ್ಯ, ಪ್ರೇಮ, ಸುಶ್ಮಿತಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.