ADVERTISEMENT

ಹಕ್ಕುಪತ್ರ ನಕಲು ಪ್ರತಿ ಅಲ್ಲ: ರಾಮನಗರ ನಗರಸಭೆ ಸ್ಪಷ್ಟನೆ

ಬೀಡಿ ಕಾಲೊನಿ ನಿವಾಸಿಗಳಿಗೆ ಶೀಘ್ರ ಇ–ಖಾತಾ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 3:01 IST
Last Updated 1 ಜನವರಿ 2026, 3:01 IST
ರಾಮನಗರ ನಗರಸಭೆ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಮಾತನಾಡಿದರು. ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರಾದ ಪವಿತ್ರ, ಮುತ್ತುರಾಜು, ಪದ್ಮಶ್ರೀ, ಎಕ್ಬಾಲ್ ಷರೀಫ್, ಮೊಹಿನ್ ಅಹ್ಮದ್ ಖುರೇಷಿ ಇದ್ದಾರೆ
ರಾಮನಗರ ನಗರಸಭೆ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಮಾತನಾಡಿದರು. ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರಾದ ಪವಿತ್ರ, ಮುತ್ತುರಾಜು, ಪದ್ಮಶ್ರೀ, ಎಕ್ಬಾಲ್ ಷರೀಫ್, ಮೊಹಿನ್ ಅಹ್ಮದ್ ಖುರೇಷಿ ಇದ್ದಾರೆ   

ರಾಮನಗರ: ನಗರದ ಬೀಡಿ ಕಾಲೊನಿ ಕುಟುಂಬಗಳಿಗೆ ನೀಡಿರುವುದು ದೃಢೀಕೃತ ಹಕ್ಕುಪತ್ರವೇ ಹೊರತು ನಕಲು ಪ್ರತಿ ಅಲ್ಲ ಎಂದು ನಗರಸಭೆ ಸ್ಪಷ್ಟಪಡಿಸಿದೆ. 

ಯಾವುದೇ ದಾಖಲೆ ಇಲ್ಲದೆ ಅತಂತ್ರವಾಗಿದ್ದ 489 ಕುಟುಂಬಗಳಿಗೆ ಇದರಿಂದಾಗಿ ಅಧಿಕೃತ ದಾಖಲೆ ಸಿಕ್ಕಿದೆ. ಇದರ ಆಧಾರದ ಮೇಲೆ ಕಾಲೊನಿಯು ನಗರಸಭೆ ವ್ಯಾಪ್ತಿಗೆ ಸೇರಿದ ಬಳಿಕ ಇ–ಖಾತೆ ಮಾಡಿಕೊಡಲು ಬದ್ಧ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ನಗರಸಭೆಯಿಂದ ಹಕ್ಕುಪತ್ರದ ನಕಲು ಪ್ರತಿಗಳನ್ನು ನೀಡಲಾಗಿದೆ ಎಂದು ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಸೈಯ್ಯದ್ ಜಿಯಾವುಲ್ಲಾ ಮಾಡಿರುವ ಆರೋಪ ಜನರ ದಿಕ್ಕು ತಪ್ಪಿಸುವಂತಿದೆ ಎಂದರು.

ADVERTISEMENT

ವಸತಿ ಉದ್ದೇಶಕ್ಕಾಗಿ 2005ರಲ್ಲಿ ನಗರದ ಹೊರವಲಯವಾಗಿದ್ದ ಕಾಲೊನಿ ಜಾಗವನ್ನು ನಗರಸಭೆಯಿಂದಲೇ ಗುರುತಿಸಲಾಗಿತ್ತು. ರಾಜೀವ್ ಗಾಂಧಿ ವಸತಿ ನಿಗಮ, ಏಷ್ಯಾ ಅಭಿವೃದ್ಧಿ ಬ್ಯಾಂಕ್ ನೆರವಿನೊಂದಿಗೆ ಅಲ್ಲಿ ವಸತಿ ನಿವೇಶನ ಅಭಿವೃದ್ಧಿಪಡಿಸಿತ್ತು. ಜಿಲ್ಲಾಡಳಿತ, ನಿಗಮ, ಹಿಂದಿನ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಕ್ಕುಪತ್ರ ವಿತರಿಸಲಾಗಿತ್ತು ಎಂದರು.

ಮೂಲ ಹಕ್ಕುಪತ್ರ ಎಲ್ಲಿವೆ ಎಂದು ನಿಗಮ ಇದುವರೆಗೂ ನಗರಸಭೆಗೆ ಮಾಹಿತಿ ನೀಡಿಲ್ಲ. ಫಲಾನುಭವಿಗಳಿಗೂ ಅಧಿಕೃತ ದಾಖಲೆ ಕೊಟ್ಟಿರಲಿಲ್ಲ. ಇದನ್ನು ಮನಗಂಡ ನಗರಸಭೆಯು ಸ್ಥಳೀಯ ಶಾಸಕರ ಸಲಹೆ ಹಾಗೂ ಸಾಮಾನ್ಯ ಸಭೆ ನಿರ್ಣಯದ ಮೇರೆಗೆ ದೃಢೀಕೃತ ಹಕ್ಕುಪತ್ರ ನೀಡುವ ಮೂಲಕ ಜನರ ಬೇಡಿಕೆಗೆ ಸ್ಪಂದಿಸಿದೆ ಎಂದು ಹೇಳಿದರು.

ಬೀಡಿ ಕಾಲೊನಿ ಕುಟುಂಬಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನಗರಸಭೆ ಬದ್ಧವಾಗಿದೆ. ಕಾಲೊನಿ ವಿಷಯದಲ್ಲಿ ಜಿಯಾವುಲ್ಲಾ ರಾಜಕಾರಣ ಮಾಡುವುದನ್ನು ಬಿಡಲಿ. 20 ವರ್ಷದಿಂದ ಸಂಘದ ಅಧ್ಯಕ್ಷರಾಗಿರುವ ಜಿಯಾವುಲ್ಲಾ ಇಷ್ಟು ವರ್ಷ ಏನು ಮಾಡುತ್ತಿದ್ದರು  ಎಂದು ಪ್ರಶ್ನಿಸಿದರು.

ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರಾದ ಪವಿತ್ರ, ಮುತ್ತುರಾಜು, ಪದ್ಮಶ್ರೀ, ಎಕ್ಬಾಲ್ ಷರೀಫ್, ಮೊಹಿನ್ ಅಹ್ಮದ್ ಖುರೇಷಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.