ವಂಚನೆ–ಪ್ರಾತಿನಿಧಿಕ ಚಿತ್ರ
ರಾಮನಗರ: ತಮ್ಮ ಮೊಬೈಲ್‌ಗೆ ಬಂದ ಪಾರ್ಟ್ ಟೈಮ್ ಉದ್ಯೋಗದ ಸಂದೇಶವನ್ನು ನಂಬಿದ ಗರುಡ ಪಡೆಯ ಪೊಲೀಸ್ ಸಿಬ್ಬಂದಿಯೊಬ್ಬರು, ವಂಚಕರ ಗಾಳಕ್ಕೆ ಸಿಲುಕಿ ಬರೋಬ್ಬರಿಗೆ ₹3.08 ಲಕ್ಷ ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಕಗ್ಗಲಿಪುರ ಠಾಣೆ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯವರಾದ ಪೊಲೀಸ್ ಸಿಬ್ಬಂದಿ ಮೊಬೈಲ್ ಸಂಖ್ಯೆಗೆ ಪಾರ್ಟ್ ಟೈಮ್ ಉದ್ಯೋಗದ ಜೊತೆಗೆ ಹೆಚ್ಚು ಹಣ ಗಳಿಸುವ ಅವಕಾಶದ ಸಂದೇಶವೊಂದು ಬಂದಿತ್ತು. ಅದನ್ನು ನಂಬಿದ ಸಿಬ್ಬಂದಿ, ಸಂದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ. ಹೂಡಿಕೆ ಆಧಾರದ ಮೇಲೆ ಹೆಚ್ಚು ಲಾಭ ಗಳಿಸುವ ಆಮಿಷವೊಡ್ಡಿ, ಹೆಚ್ಚು ಹೂಡಿಕೆ ಮಾಡುವಂತೆ ಉತ್ತೇಜಿಸಿದ್ದಾರೆ.
ಅವರ ಮಾತನ್ನು ನಿಜ ಎಂದು ನಂಬಿದ ಸಿಬ್ಬಂದಿ, ವಂಚಕರ ಹೇಳಿದ ಯುಪಿಐಡಿ ಹಾಗೂ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು ₹3,08,844 ಮೊತ್ತ ಪಾವತಿಸಿದ್ದಾರೆ. ಲಾಭಾಂಶ ಹಿಂದಿರುಗಿಸಬೇಕಾದರೆ ಮತ್ತಷ್ಟು ಹೂಡಿಕೆ ಮಾಡಬೇಕು ಎಂದ ವಂಚಕರು, ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾರೆ. ಆಗ ಸಿಬ್ಬಂದಿ ಅನುಮಾನಗೊಂಡು ಹಣ ವರ್ಗಾವಣೆ ಮಾಡುವುದನ್ನು ನಿಲ್ಲಿಸಿದ್ದಾರೆ.
ಆರೋಪಿಗಳು ಸಾಮಾಜಿಕ ಜಾಲತಾಣ ಟೆಲಿಗ್ರಾಮ್‌ನಲ್ಲಿ ಗ್ರೂಪ್ ರಚಿಸಿಕೊಂಡು, ಅದರ ಮೂಲಕ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ವಂಚನೆ ಮಾಡಿದ್ದಾರೆ. ಈ ಕುರಿತು ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ವಂಚಕರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.