ADVERTISEMENT

ಚನ್ನಪಟ್ಟಣ: ಬಗೆಹರಿಯದ ರಸ್ತೆಬದಿ ವ್ಯಾಪಾರಿಗಳ ಸಮಸ್ಯೆ

ಮೂಲಸೌಕರ್ಯದ ಕೊರತೆ, ಬಳಕೆಯಾಗದ ನಗರಸಭೆಯ ಮಳಿಗೆಗಳು

ಎಚ್.ಎಂ.ರಮೇಶ್
Published 22 ಏಪ್ರಿಲ್ 2024, 7:11 IST
Last Updated 22 ಏಪ್ರಿಲ್ 2024, 7:11 IST
ಚನ್ನಪಟ್ಟಣದ ಅಂಚೆಕಚೇರಿ ರಸ್ತೆಯಲ್ಲಿ ರಸ್ತೆಬದಿ ವ್ಯಾಪಾರಿಗಳ ಅಂಗಡಿಗಳು
ಚನ್ನಪಟ್ಟಣದ ಅಂಚೆಕಚೇರಿ ರಸ್ತೆಯಲ್ಲಿ ರಸ್ತೆಬದಿ ವ್ಯಾಪಾರಿಗಳ ಅಂಗಡಿಗಳು   

ಚನ್ನಪಟ್ಟಣ: ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಬೀದಿಬದಿಯ ವ್ಯಾಪಾರಿಗಳು ಬಿರು ಬಿಸಿಲಿನಲ್ಲಿಯೇ ವ್ಯಾಪಾರ ಮಾಡುತ್ತಿದ್ದು, ನಗರಸಭೆ ಕರಬಲ ಮೈದಾನದಲ್ಲಿ ಈ ವ್ಯಾಪಾರಿಗಳಿಗಾಗಿಯೇ ನಿರ್ಮಿಸಿದ್ದ ಮಳಿಗೆಗಳು ಉಪಯೋಗವಾಗುತ್ತಿಲ್ಲ. 

ನಗರದ ಅಂಚೆ ಕಚೇರಿ ರಸ್ತೆ, ಎಂ.ಜಿ. ರಸ್ತೆ, ಜೆ.ಸಿ. ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಡಿ.ಟಿ. ರಾಮು ಸರ್ಕಲ್, ಕುವೆಂಪು ನಗರ ಸೇರಿದಂತೆ ಹಲವೆಡೆ ರಸ್ತೆ ಬದಿಗಳಲ್ಲಿ ಉದ್ದಕ್ಕೂ ಹರಡಿರುವ ವ್ಯಾಪಾರಸ್ಥರು, ತಳ್ಳುಗಾಡಿ ಇಟ್ಟುಕೊಂಡು ಅಥವಾ ಮೇಲೊಂದು ಟಾರ್ಪಲ್ ಕಟ್ಟಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ.  ಬಿಸಿಲಿನ ಝಳ ಬಡಿಯುತ್ತಿದ್ದರೂ ಇದೇ ಸ್ಥಳಗಳಲ್ಲಿ ವ್ಯಾಪಾರ ಮುಂದುವರಿಸಿದ್ದಾರೆ.

ರಸ್ತೆಬದಿ ವ್ಯಾಪಾರಸ್ಥರಿಗಳಿಗಾಗಿಯೇ ನಗರಸಭೆ 2006ರಲ್ಲಿ ಸಣ್ಣ ಮತ್ತು ಮಧ್ಯಮ ನಗರಗಳ ಅಭಿವೃದ್ಧಿ ಯೋಜನೆ (ಐಡಿಎಸ್‌ಎಂಟಿ ಯೋಜನೆ) ಅಡಿಯಲ್ಲಿ ಹಾಗೂ 2012ರಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ ಒಟ್ಟು ಸುಮಾರು ₹ 6 ಕೋಟಿ ವೆಚ್ಚದಲ್ಲಿ ಒಟ್ಟು 150ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ನಿರ್ಮಿಸಿದೆ. ಆದರೆ ಮೂಲಸೌಕರ್ಯಗಳ ಕೊರತೆಯಿಂದ ವ್ಯಾಪಾರಿಗಳು ಈ ಮಳಿಗೆಗಳತ್ತ ಬರುತ್ತಿಲ್ಲ. 

ADVERTISEMENT

ನಗರಸಭೆಯ ಮಳಿಗೆಗಳು ನಗರದ ಮೂಲೆಯಲ್ಲಿವೆ. ಈ ಜಾಗವು ಗ್ರಾಹಕರಿಗೆ ಪರಿಚಿತವಾಗಿಲ್ಲ. ಹಾಗಾಗಿ ಇಲ್ಲಿ ಗ್ರಾಹಕರು ಬರುವುದು ಕಡಿಮೆ. ಹಾಗಾಗಿ, ಇಲ್ಲಿ ವ್ಯಾಪಾರ ನಡೆಸುವುದು ಕಷ್ಟ ಎಂಬುದು ಬೀದಿಬದಿಯ ವ್ಯಾಪಾರಿಗಳ ಒಕ್ಕೊರಲ ಅಭಿಮತ. 

ಇಲ್ಲಿನ ಎಲ್ಲ ಮಳಿಗೆಗಳನ್ನು ವ್ಯಾಪಾರಸ್ಥರು ಬಾಡಿಗೆಗೆ ಪಡೆದಿದ್ದಾರಾದರೂ ಇಲ್ಲಿ ಮಾತ್ರ ತಮ್ಮ ಮಳಿಗೆಗಳನ್ನು ತೆರೆದಿಲ್ಲ. ಹೆಸರಿಗೆ ಮಾತ್ರ ಈ ಮಳಿಗೆಗಳು ಇದ್ದು, ಇಲ್ಲಿಗೆ ವ್ಯಾಪಾರಸ್ಥರೂ ಬರುತ್ತಿಲ್ಲ, ಗ್ರಾಹಕರೂ ಬರುತ್ತಿಲ್ಲ. ಹಾಗಾಗಿ ಇವು ಅನಾಥವಾಗಿಯೇ ಉಳಿದಿವೆ. 

‘ಕರಬಲ ಮೈದಾನದ ಅಂಗಡಿಗಳಿಗೆ ಸ್ಥಳಾಂತರ ಮಾಡಲು ರಸ್ತೆಬದಿ ವ್ಯಾಪಾರಸ್ಥರ ಮನವೊಲಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಲವಂತವಾಗಿ ಅವರನ್ನು ಸ್ಥಳಾಂತರಿಸುವ ಪ್ರಯತ್ನವೂ ಸಫಲವಾಗಿಲ್ಲ. ಮುಂದಿನ ದಿನಗಳಲ್ಲಿ ವ್ಯಾಪಾರಸ್ಥರ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗವುದು’ ಎಂದು ನಗರಸಭಾ ಅಧಿಕಾರಿಯೊಬ್ಬರು ತಿಳಿಸಿದರು.

‘ಜನರು ಹೆಚ್ಚು ಓಡಾಡುವ ಜಾಗಗಳನ್ನು ಬಿಟ್ಟು ಕರಬಲ ಮೈದಾನದಲ್ಲಿ ವ್ಯಾಪಾರ ಮಾಡಿದರೆ ನಮ್ಮ ವಸ್ತುಗಳನ್ನು ಕೇಳುವವರೇ ಇಲ್ಲದಂತಾಗುತ್ತದೆ. ಹಾಗಾಗಿ, ಬಿಸಿಲಿನ ತಾಪವನ್ನು ಲೆಕ್ಕಿಸದೆ ವ್ಯಾಪಾರ ನಡೆಸಿದರೆ ಅಷ್ಟೋ ಇಷ್ಟೋ ಲಾಭ ಗಳಿಸಬಹುದು’ ಎಂದು ಅಂಚೆ ಕಚೇರಿ ರಸ್ತೆಯ ರಸ್ತೆಬದಿ ವ್ಯಾಪಾರಿ ಸಿದ್ದಪ್ಪ ಹಾಗೂ ಎಂ.ಜಿ.ರಸ್ತೆಯ ಶ್ರೀನಿವಾಸ್ ಹೇಳಿದರು.

ಕರಬಲ ಮೈದಾನದ ಮಳಿಗೆಗಳಿಗೆ ರಸ್ತೆಬದಿ ವ್ಯಾಪಾರಸ್ಥರನ್ನು ಸ್ಥಳಾಂತರಿಸಿದರೆ ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಬಹುದು. ಜೊತೆಗೆ ಕರಬಲ ಮೈದಾನದ ಒಂದೇ ಜಾಗದಲ್ಲಿ ವಸ್ತುಗಳೆಲ್ಲವೂ ದೊರೆಯುವಂತಾಗುತ್ತದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರಿಕರ ಅಭಿಪ್ರಾಯ.

ಬಿಸಿಲಿಗೆ ಭಯಪಟ್ಟು ಕರಬಲ ಮೈದಾನದ ಮಳಿಗೆಗಳಿಗೆ ಹೋದರೆ ಇರುವ ವ್ಯಾಪಾರ ಬಿಟ್ಟು ಮನೆ ಸೇರಿಕೊಳ್ಳಬೇಕಾಗುತ್ತದೆ
ಲಕ್ಷ್ಮಮ್ಮ ಹೂ ವ್ಯಾಪಾರಿ
ನಗರಸಭೆ ಮಳಿಗೆಗಳನ್ನು ಕಟ್ಟಿಸಿದೆ ನಿಜ. ಆದರೆ ಅಲ್ಲಿ ಕೆಲವು ಬಲಾಢ್ಯರು ಟೆಂಡರ್ ಮೂಲಕ ಮಳಿಗೆಗಳನ್ನು ಖರೀದಿಸಿದ್ದಾರೆ. ನಾವು ಮಳಿಗೆ ತೆರೆಯಲು ಬಾಡಿಗೆ ಹೆಚ್ಚು ಕೇಳುತ್ತಾರೆ. ಬಾಡಿಗೆ ನೀಡಿ ವ್ಯಾಪಾರ ಮಾಡಿದರೆ ನಮಗೆ ಏನೇನೂ ಸಿಗುವುದಿಲ್ಲ.
ಮಹಮದ್ ಸಲೀಂ ಹಣ್ಣು ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.