ADVERTISEMENT

ಸೋರುತಿಹುದು ಶಾಲಾ ಮಾಳಿಗೆ

ಕಲ್ಲಹಳ್ಳಿ ಸ್ಕೂಲ್‌ ಕಟ್ಟಡ ದುರಸ್ತಿಗೆ ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ್ಯ

ಬರಡನಹಳ್ಳಿ ಕೃಷ್ಣಮೂರ್ತಿ
Published 13 ಸೆಪ್ಟೆಂಬರ್ 2021, 3:55 IST
Last Updated 13 ಸೆಪ್ಟೆಂಬರ್ 2021, 3:55 IST
ಗಿರೀಶ್‌
ಗಿರೀಶ್‌   

ಕನಕಪುರ: ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕು ಎಂದು ಹೇಳುವ ಸರ್ಕಾರ ತಾಲ್ಲೂಕಿನ ಕಸಬಾ ಹೋಬಳಿಯ ಕಲ್ಲಹಳ್ಳಿ ಗ್ರಾಮದ ನಮ್ಮೂರ ಸರ್ಕಾರಿ ಶಾಲೆಯ ಕೊಠಡಿಗಳು ಹಾಳಾಗಿದ್ದರೂ ದುರಸ್ತಿಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದೆ.

ನಮ್ಮೂರ ಸರ್ಕಾರಿ ಶಾಲೆಯು ಇಂದೋ, ನಾಳೆಯೋ ಬೀಳಲಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಹೆದರುತ್ತಿದ್ದರೆ, ಕೊಠಡಿಗಳಲ್ಲಿ ನಿಂತು ಪಾಠ ಹೇಳಿಕೊಡಲು ಶಿಕ್ಷಕರು
ಭಯಭೀತರಾಗಿದ್ದಾರೆ.

ಸುಮಾರು 40 ವರ್ಷಗಳ ಹಿಂದೆ ಈ ಸರ್ಕಾರಿ ಶಾಲೆ ಪ್ರಾರಂಭಗೊಂಡಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನಾಲ್ಕೈದು ಹಂತಗಳಲ್ಲಿ ಆರ್‌ಸಿಸಿ, ಹೆಂಚಿನ ಹಾಗೂ ಶೀಟಿನ ಮೇಲ್ಚಾವಣಿ ಕೊಠಡಿಗಳನ್ನು ನಿರ್ಮಾಣ ಮಾಡಿದ್ದಾರೆ. ದಿನ ಕಳೆದಂತೆ ಶಾಲೆಯ ಮೇಲ್ಚಾವಣಿ ಹಾಳಾಗಿವೆ. ಆರ್‌ಸಿಸಿ ಸೋರುತ್ತಿದೆ. ಹೆಂಚು ಮತ್ತು ಶೀಟ್‌ಗಳು, ಜಂತಿಗಳು ಹಾಳಾಗಿ ಕೊಠಡಿಗಳ ಎಲ್ಲಾ ಕಡೆ ಮಳೆ ಬಂದರೆ ನೀರು ಸುರಿಯುತ್ತಿದೆ.

ADVERTISEMENT

ಕೋವಿಡ್‌ ಕಾರಣದಿಂದ ಒಂದೂವರೆ ವರ್ಷದಿಂದ ಶಾಲೆ ಮುಚ್ಚಿರುವುದರಿಂದ ಶಿಕ್ಷಕರು ಎಲ್ಲಿ ಸೋರುವುದಿಲ್ಲವೋ ಅಲ್ಲಿಗೆ ಶಾಲೆಯ ಪೀಠೋಪಕರಣ, ಕಂಪ್ಯೂಟರ್‌ ಮತ್ತಿತರ ವಸ್ತುಗಳನ್ನು
ಇಟ್ಟಿದ್ದಾರೆ.

ಆದರೆ, ಅಲ್ಲಿಯೂ ಮಳೆ ನೀರು ಸೋರುತ್ತಿದ್ದು ಪೀಠೋಪಕರಣಗಳು, ಕಂಪ್ಯೂಟರ್‌ಗಳು ಹಾಳಾಗಿವೆ. ಅವುಗಳನ್ನು ರಕ್ಷಣೆ ಮಾಡುವುದು ಹೇಗೆಂಬ ಚಿಂತೆ ಶಿಕ್ಷಕರಿಗೆ
ಕಾಡುತ್ತಿದೆ.

ರಾಜ್ಯದಲ್ಲಿ ಕೋವಿಡ್‌ ಸೋಂಕು ಕಡಿಮೆಯಾಗಿರುವುದರಿಂದ ಶಿಕ್ಷಣ ಇಲಾಖೆಯು ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸುತ್ತಿದೆ. ಕಲ್ಲಹಳ್ಳಿ ಗ್ರಾಮದಲ್ಲೂ ಶಾಲೆ ಪ್ರಾರಂಭಿಸಬೇಕಿದೆ. ಇದರಿಂದ ಹಾಳಾಗಿ ಸೋರುತ್ತಿರುವ ಕೊಠಡಿಗಳನ್ನು ಸರಿಪಡಿಸಬೇಕೆಂದು ಗ್ರಾಮದ ಯುವಕರು ಗ್ರಾಮ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಶಾಲೆಯಲ್ಲಿ ಕೊಠಡಿಗಳು ಸೋರುತ್ತಿರುವುದರಿಂದ ಅದನ್ನು ಸರಿಪಡಿಸಲು ಹೋಗಿ ಈಗಾಗಲೇ ಗ್ರಾಮದ ರಾಜಣ್ಣ, ನೀರುಗಂಟಿ ಗೋವಿಂದ, ವಿದ್ಯಾರ್ಥಿ ಬೀರೇಶ್‌ ಎಂಬುವರು ಗಾಯಗೊಂಡಿದ್ದಾರೆ. ಅದಕ್ಕಾಗಿ ಶಾಲೆಯ ಮೇಲ್ಚಾವಣಿ ತೆಗೆದು ಕಬ್ಬಿಣದ ಶೀಟ್‌ಗಳನ್ನು ಅಳವಡಿಸಬೇಕು. ಶಾಲೆಯನ್ನು ಅಭಿವೃದ್ಧಿಪಡಿಸಿ ಗ್ರಾಮದ ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮದ ಜನತೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.