ADVERTISEMENT

ಸಂಗೀತ ಕಲಾನಿಧಿ ಪಂಡರೀಕ ವಿಠಲ

ಸಾಂಸ್ಕೃತಿಕ ಕೇಂದ್ರವಾಗಿ ಸಾತನೂರು ಅಭಿವೃದ್ಧಿಗೆ ಮನವಿ

ದೊಡ್ಡಬಾಣಗೆರೆ ಮಾರಣ್ಣ
Published 15 ಫೆಬ್ರುವರಿ 2021, 5:32 IST
Last Updated 15 ಫೆಬ್ರುವರಿ 2021, 5:32 IST
ಜೀರ್ಣೋದ್ಧಾರಗೊಂಡಿರುವ ಸಾತನೂರು ವಿಠಲರಾಯ ಸ್ವಾಮಿ ದೇವಾಲಯ
ಜೀರ್ಣೋದ್ಧಾರಗೊಂಡಿರುವ ಸಾತನೂರು ವಿಠಲರಾಯ ಸ್ವಾಮಿ ದೇವಾಲಯ   

ಮಾಗಡಿ: ಜೈನ ಮತ್ತು ವೈಷ್ಣವರ ನೆಲೆಯಾದ ಸಾತನೂರನ್ನು ಅಭಿವೃದ್ಧಿಪಡಿಸಿ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಬೇಕು ಎಂಬುದು ಈ ಭಾಗದ ಜನರ ಬಹುದಿನದ ಬೇಡಿಕೆ.

ಇದು ಸಾತನೂರು ‘ಅಕ್ಬರೀಯ ಕಾಳಿದಾಸ’ ಎಂಬ ಬಿರುದಾಂಕಿತನಾಗಿದ್ದ ಸಂಗೀತ ಕಲಾನಿಧಿ ಪಂಡರೀಕ ವಿಠಲ ಎಂಬ ಸಂಸ್ಕೃತ ಕವಿ ಮತ್ತು ಸಂಗೀತಗಾರನ ಜನ್ಮಸ್ಥಳವೂ ಹೌದು. ಪಂಡರೀಕ ವಿಠಲ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಲು ಸಂಗೀತ ವಿದ್ವನ್ಮಣಿಗಳ ತವರೂರು ಚಿಕ್ಕಮುದುಗೆರೆಗೆ ತೆರಳಿ ಸಂಗೀತ ಅಭ್ಯಾಸ ಮಾಡಿದ. ಅಲ್ಲಿನ ಚೋಳರ ಕಾಲದ ರಂಗನಾಥಸ್ವಾಮಿ ದೇವಾಲಯದಲ್ಲಿ ನಿತ್ಯ ಸಂಗೀತಾಭ್ಯಾಸ ಮಾಡುವಾಗ ರಂಗನಾಥಸ್ವಾಮಿ ಪ್ರತ್ಯಕ್ಷನಾಗಿ ಸಂಗೀತಕ್ಕೆ ಮನಸೋತು ನರ್ತಿಸಿದನಂತೆ. ಇದಕ್ಕೆ ನಿದರ್ಶನವಾಗಿ ಇಂದಿಗೂ ದೇವಾಲಯದಲ್ಲಿ ಆಡುವನಯ್ಯ ಮುದುಗೆರೆಯ ರಂಗಯ್ಯ ಎಂಬ ಹಳೆಗನ್ನಡದ
ಶಿಲಾಶಾಸನವಿದೆ.

ಹೆಚ್ಚಿನ ಸಂಗೀತ ವಿದ್ಯೆ ಕಲಿಯಲು ಶಿವಗಂಗೆ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಬಿಜಾಪುರ ಸುಲ್ತಾನರ ಆಸ್ಥಾನ ಸೇರಿದ. ಅಲ್ಲಿ ಸ್ವಲ್ಪಕಾಲ ತಂಗಿದ್ದು, ದೂರದ ದೆಹಲಿಯ ದೊರೆ ಅಕ್ಬರ್‌ನ ಆಸ್ಥಾನ ಸೇರಿ ಅಲ್ಲಿದ್ದ ತಾನ್‌ಸೇನ ಸೇರಿದಂತೆ ಇತರೇ ಸಂಗೀತಗಾರರ ಸಮಾಗಮದಲ್ಲಿ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿ ಅವರ ಮೆಚ್ಚುಗೆಗಳಿಸಿದ.

ADVERTISEMENT

ಬಳಿಕ ‘ಅಕ್ಬರೀಯ ಕಾಳಿದಾಸ’ ಎಂಬ ಬಿರುದಾಂಕಿತನಾಗಿ ‘ರಾಗಮಾಲಿಕ’, ‘ರಾಗಮಂಜರಿ’, ‘ಸದ್ರಾಗ ಚಂದ್ರೋಧಯ’ ಸೇರಿದಂತೆ ಸಂಗೀತಕ್ಕೆ ಸಂಬಂಧಿಸಿದ ಮಹತ್ವದ ಗ್ರಂಥಗಳನ್ನು ಸಂಸ್ಕೃತದಲ್ಲಿ ರಚಿಸಿದ. ಹಾಗಾಗಿ, ಸಂಗೀತಗಾರ ಜನಿಸಿದ ಪುಣ್ಯಭೂಮಿ ಸಾತನೂರನ್ನು ಸಾಂಸ್ಕೃತಿಕ ಗ್ರಾಮವನ್ನಾಗಿಸಬೇಕಿದೆ.

‘ಗ್ರಾಮವನ್ನು ಅಭಿವೃದ್ಧಿಪಡಿಸಿದರೆ ರಾಷ್ಟ್ರೀಯ ಸ್ಮಾರಕವಾಗಲಿದೆ’ ಎನ್ನುತ್ತಾರೆ ಗ್ರಾಮದ ಅಂಚೆ ರಾಮಣ್ಣ.

ಸಾತನೂರಿನಲ್ಲಿ ವಿಠಲರಾಯಸ್ವಾಮಿ ಗುಡಿ ಎತ್ತರವಾದ ಮಣ್ಣಿನತಿಟ್ಟೆಯ ಮೇಲಿದೆ. ಗುಡಿ ಪ್ರವೇಶಿಸಲು ಕಾಡುಕಲ್ಲಿನ ಮೆಟ್ಟಿಲುಗಳನ್ನು ಏರಿಹೋಗಬೇಕಿದೆ. ಪೂರ್ವಾಭಿಮುಖವಾಗಿರುವ ದೇವಾಲಯದ ಒಳಗೆ ಗರ್ಭಗೃಹ, ನವರಂಗ, ಅಂತರಾಳ, ಮುಖಮಂಟಪಗಳಿವೆ. ಗುಡಿಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ
ಶಾಸನವಿದೆ.

ಕ್ರಿ.ಶ 1497ರಲ್ಲಿ ತಿರುಮಲ ಸೋಮಯಾಜಿಯ ಮಕ್ಕಳು ವಿಠಲರಾಯಸ್ವಾಮಿ ಗುಡಿಯ ದೀಪ, ಧೂಪ, ನೈವೇದ್ಯಕ್ಕೆ ಬಿಟ್ಟಿರುವ ದಾನ ಶಾಸನವಿದೆ. ಇದೇ ದೇವಾಲಯದಲ್ಲಿ ಸಂಗೀತ ಕಲಾನಿಧಿ ಪಂಡರೀಕ ವಿಠಲನು ಕುಳಿತು ಸಂಗೀತ ಅಭ್ಯಾಸ ಮಾಡಿದ ಮತ್ತು ಸಂಗೀತದ ಅಮೂಲ್ಯವಾದ ಕೃತಿಗಳನ್ನು ಬರೆದ ಎಂಬ ಮಾಹಿತಿ ಶಾಸನದಲ್ಲಿದೆ.

ಗರ್ಭಗೃಹದಲ್ಲಿ 5 ಅಡಿ ಎತ್ತರದ ಕೃಷ್ಣಶಿಲೆಯಲ್ಲಿ ವಿಠಲರಾಯಸ್ವಾಮಿಯನ್ನು ಕೆತ್ತಲಾಗಿದೆ. ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರದ ಶಿಲ್ಪಗಳಿವೆ. ಶಂಖಚಂಕ್ರ, ಗದಾಧಾರಿಯಾಗಿ, ಸೊಂಟದ ಮೇಲೆ ಎರಡು ಕೈಗಳನ್ನು ಇಟ್ಟುಕೊಂಡಿರುವ ವಿಠಲರಾಯ ವಿಗ್ರಹ ನೋಡಲು ಮನಮೋಹಕವಾಗಿದೆ. ಗರ್ಭಗೃಹದ ವಿಠಲರಾಯ ಸ್ವಾಮಿ ವಿಗ್ರಹದಲ್ಲಿ ರುಕ್ಮಿಣಿ, ಸತ್ಯಭಾಮೆ, ಗರುಡ, ಬುದ್ಧನ ಶಿಲ್ಪಗಳನ್ನು ಕೆತ್ತಲಾಗಿದೆ.

‘ಕಬ್ಬಾಳಮ್ಮ ಗುಡಿ, ಆಂಜನೇಯಸ್ವಾಮಿ, ಮಾರಮ್ಮ, ಮರದಿಂದ ತಯಾರಿಸಿರುವ ಶಕ್ತಿದೇವತೆಯ ಗುಡಿಗಳು, ಕರುವುಗಲ್ಲಮ್ಮ, ಗ್ರಾಮದೇವತೆ, ಚೋಳರ ಕಾಲದ ಸ್ವಯಂಭು ಈಶ್ವರ ಗುಡಿಗಳು, ತಿರುಮಲ್ಲೇಶ್ವರ ಗುಡಿಗಳಿವೆ. ಗದ್ದೆಯಲ್ಲಿ ನೆಲಮಟ್ಟದಲ್ಲಿ ಇರುವ ಜೈನರ ಮಾನಸ್ತಂಭ, ಬಸದಿಗಳು, ಎತ್ತರವಾದ ನಿಲುವು ಗಲ್ಲುಗಳಿವೆ. ಸಾತನೂರಿನ ಚಾರಿತ್ರಿಕ, ಜನಪದೀಯ, ಜೈನ, ವೈಷ್ಣವ, ಬೌದ್ಧರ ಸ್ಮಾರಕಗಳ ಬಗ್ಗೆ ತಲಸ್ಪರ್ಶಿ ಅಧ್ಯಯನ ನಡೆಯಬೇಕಿದೆ’ ಎಂದು ಇತಿಹಾಸಕಾರ ಪ್ರೊ.ತಿಮ್ಮಹನುಮಯ್ಯ
ಹೇಳುತ್ತಾರೆ.

‘ಸಂಗೀತ ಕಲಾನಿಧಿ, ಅಕ್ಬರೀಯ ಕಾಳಿದಾಸ ಎಂಬ ಬಿರುದಾಂಕಿತ ಪಂಡರೀಕ ವಿಠಲ ಜನಿಸಿದ ಸ್ಥಳವಾದ ಸಾತನೂರನ್ನು ಅಭಿವೃದ್ಧಿಪಡಿಸಿ ಸಾಂಸ್ಕೃತಿಕ ನಗರಿ ಮಾಡಲು ಸರ್ಕಾರ ಮುಂದಾಗಬೇಕಿದೆ’ ಎಂದು ಮನವಿ ಮಾಡುತ್ತಾರೆ ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.