ADVERTISEMENT

ದಾಸೋಹ ಭವನದ ಹುಂಡಿ ಒಡೆದು ಕಳವು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 14:12 IST
Last Updated 19 ಡಿಸೆಂಬರ್ 2019, 14:12 IST
ಹೊಲದಲ್ಲಿ ಹುಂಡಿ ಹೊಡೆದು ಹಣ ದೋಚಿರುವುದು
ಹೊಲದಲ್ಲಿ ಹುಂಡಿ ಹೊಡೆದು ಹಣ ದೋಚಿರುವುದು   

ರಾಮನಗರ: ತಾಲ್ಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿರುವ ರೇವಣಸಿದ್ದೇಶ್ವರ ಅಭಿವೃದ್ಧಿ ಸೇವಾ ಟ್ರಸ್ಟ್ ನ ದಾಸೋಹ ಭವನದ ಹುಂಡಿ ಕಳ್ಳತನ ಮಾಡಿ ಹಣ ದೋಚಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಪ್ರಸಾದ ನಿಲಯದಲ್ಲಿ ಉಚಿತ ಪ್ರಸಾದಕ್ಕೆ ಕಾಣಿಕೆ ಸಲ್ಲಿಸಲು ಅನುಕೂಲವಾಗುವಂತೆ ದೊಡ್ಡ ಗಾತ್ರದ ಹುಂಡಿ ಇಡಲಾಗಿದೆ. ಕಳ್ಳರು ದಾಸೋಹ ಭವನದ ಒಳಗೆ ನುಗ್ಗಿ ಬಂದು ಹುಂಡಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗಿ ಪಕ್ಕದ ಮಾವಿನ ತೋಟದಲ್ಲಿ ಇಟ್ಟು ಕಬ್ಬಿಣದ ಆಯುಧಗಳಿಂದ ಹುಂಡಿ ಒಡೆದು ಅದರಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.
ಹುಂಡಿಯನ್ನು ಕಳೆದ ನಾಲ್ಕೈದು ತಿಂಗಳಿಂದ ಒಡೆದಿರಲಿಲ್ಲ. ಪ್ರತಿದಿನ ಬರುವ ಭಕ್ತರು ಹುಂಡಿಗೆ ಹಣ ಹಾಕುವುದರಿಂದ ಹೆಚ್ಚಿನ ಪ್ರಮಾಣದ ಹಣ ಸಂಗ್ರಹವಾಗುತ್ತದೆ. ಹಣ ಎಷ್ಟಿತ್ತು ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.

ರೇವಣಸಿದ್ದೇಶ್ವರ ಬೆಟ್ಟ ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಆಗಿಂದಾಗ್ಗೆ ಹುಂಡಿ ಇನ್ನಿತರ ಕಳ್ಳತನ ಪ್ರಕರಣಗಳು ನಡೆಯುತ್ತಿರುತ್ತವೆ. ಪೊಲೀಸಿನವರು ರಾತ್ರಿ ಗಸ್ತು ಮಾಡುವುದರ ಮೂಲಕ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ADVERTISEMENT

ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಬ್‍ ಇನ್‌ಸ್ಪೆಕ್ಟರ್‌ ಲಕ್ಷ್ಮಣ್ ಗೌಡ ಮತ್ತು ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಮತ್ತು ಶ್ವಾನದಳದಿಂದ ಪರಿಶೀಲನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.