ADVERTISEMENT

ಸಾಧನೆಗೆ ಸಮಯಪಾಲನೆ, ಛಲ ಮುಖ್ಯ: ಸಾಹಿತಿ ವಿಜಯ್ ರಾಂಪುರ

ಕರಾಟೆಪಟುವಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 13:37 IST
Last Updated 1 ಜನವರಿ 2020, 13:37 IST
ಚನ್ನಪಟ್ಟಣದ ಸುಣ್ಣಘಟ್ಟ ಗ್ರಾಮದಲ್ಲಿ ಕರಾಟೆ ಪಟು ಡಿ. ನಿಖಿಲ್ ಅವರನ್ನು ಅಭಿನಂದಿಸಲಾಯಿತು
ಚನ್ನಪಟ್ಟಣದ ಸುಣ್ಣಘಟ್ಟ ಗ್ರಾಮದಲ್ಲಿ ಕರಾಟೆ ಪಟು ಡಿ. ನಿಖಿಲ್ ಅವರನ್ನು ಅಭಿನಂದಿಸಲಾಯಿತು   

ಚನ್ನಪಟ್ಟಣ: ‘ಶಿಸ್ತು, ಶ್ರದ್ಧೆ, ಸಮಯಪಾಲನೆ ಮತ್ತು ಛಲವನ್ನು ಯುವಜನಾಂಗವು ರೂಢಿಸಿಕೊಂಡರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು’ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.

ಶ್ರೀಲಂಕಾ ದೇಶದಲ್ಲಿ ನಡೆದ ಇಂಟರ್‌ನ್ಯಾಷನಲ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲ್ಲೂಕಿಗೆ ಕೀರ್ತಿ ತಂದ ಸುಣ್ಣಘಟ್ಟ ಗ್ರಾಮದ ಕರಾಟೆ ಪಟು ಡಿ. ನಿಖಿಲ್ ಅವರನ್ನು ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬುಧವಾರ ಅಭಿನಂದಿಸಿ ಮಾತನಾಡಿದರು.

‘ಯುವ ಸಮೂಹ ಕೆಟ್ಟಚಟಗಳ ದಾಸರಾಗುವ ಬದಲು ಇಂತಹ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ಪೋಷಕರಿಗೂ ಕೀರ್ತಿ ತಂದಂತಾಗುತ್ತದೆ. ಯುವ ಸಮುದಾಯಕ್ಕೆ ಪ್ರೇರಣೆಯಾಗಿರುವ ನಿಖಿಲ್ ಅವರ ಸಾಧನೆ ಎಲ್ಲರಿಗೂ ಮಾದರಿಯಾದುದು. ಇವರ ಭವಿಷ್ಯದ ಬದುಕು ಉಜ್ವಲವಾಗಲಿ’ ಎಂದು ಹಾರೈಸಿದರು.

ADVERTISEMENT

ಟ್ರಸ್ಟ್ ಅಧ್ಯಕ್ಷ ಸುಣ್ಣಘಟ್ಟ ಅಶ್ವತ್ಥ್ ಮಾತನಾಡಿ, ‘ಗ್ರಾಮೀಣ ಪ್ರದೇಶದ ಪ್ರತಿಭೆ ನಿಖಿಲ್ ವಿದ್ಯಾರ್ಥಿ ದೆಸೆಯಲ್ಲಿಯೆ ಕರಾಟೆ ಕಲೆಯನ್ನು ಮೈಗೂಡಿಸಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಪಡೆದು ನಮ್ಮ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂಬುದಕ್ಕೆ ನಿಖಿಲ್ ರವರ ಸಾಧನೆಯೆ ಸಾಕ್ಷಿ’ ಎಂದರು.

ಕಾರ್ಯಕ್ರಮದಲ್ಲಿ ನೀಲಸಂದ್ರ ಗ್ರಾಮ ಪಂಚಾಯಿತಿ ಸದಸ್ಯ ಉದಯ್ ಕುಮಾರ್, ಶಿಕ್ಷಕ ಎಸ್.ಎಂ. ನಾಗೇಶ್, ಮುಖಂಡರಾದ ಎಸ್.ಪಿ.ಉಮೇಶ್, ಎಸ್.ಟಿ.ನಾಗೇಶ್, ಭಾಗ್ಯಮ್ಮ, ರಾಣಿ, ನವ್ಯಶ್ರೀ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.