ಹಾರೋಹಳ್ಳಿ: ಬೆಂಗಳೂರಿನಿಂದ ದಿಂಡಿಗಲ್‌ವರೆಗೆ ನಿರ್ಮಿಸಿರುವ ರಸ್ತೆ ಸಂಪೂರ್ಣ ಅವೈಜ್ಞಾನಿಕ ಮತ್ತು ಕಳಪೆ ಗುಣಮಟ್ಟದಿಂದ ಕೂಡಿದೆ. ಸುರಕ್ಷತೆಯೇ ಇಲ್ಲದ ರಸ್ತೆ ಟೋಲ್ ಏಕೆ ಕಟ್ಟಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮನಹಳ್ಳಿಯಲ್ಲಿ ಟೋಲ್ ನಿರ್ಮಿಸಿ ಹೆದ್ದಾರಿ ಪ್ರಧಿಕಾರ ಜನರ ಬಳಿ ಸುಲಿಗೆ ನಡೆಸುತ್ತಿದೆ. ಕನಕಪುರ ಹರೋಹಳ್ಳಿ ಭಾಗದವರಿಗೆ ಟೋಲ್ ವಿನಾಯಿತಿ ನೀಡಬೇಕು. ರಾಷ್ಟ್ರೀಯ ಹೆದ್ದಾರಿಗೆ ಹಾರೋಹಳ್ಳಿ, ಕನಕಪುರ ಭಾಗದ ರೈತರು ಜಮೀನು ಬಿಟ್ಟುಕೊಟ್ಟಿದ್ದಾರೆ ಎಂದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಬೆಂಗಳೂರು ದಿಂಡಿಗಲ್ ರಸ್ತೆಯನ್ನು ತರಾತುರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ. ಇಲ್ಲಿ ಹೆದ್ದಾರಿಯ ಲಕ್ಷಣಗಳೇ ಇಲ್ಲವಾಗಿದೆ. ಸರ್ವಿಸ್ ರಸ್ತೆ ನಿರ್ಮಿಸದೆಯೇ ಟೋಲ್ ನಿರ್ಮಿಸಿದ್ದಾರೆ. ಇದು ಯಾವ ನ್ಯಾಯ? ಜಿಲ್ಲಾಧಿಕಾರಿ ಕೂಡಲೇ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಟೋಲ್‌ನಲ್ಲಿ ಕನಕಪುರ, ಹಾರೋಹಳ್ಳಿ ರೈತರಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ನಿತ್ಯ ನಾವು ಬೆಳೆದ ಬೆಳೆಗಳನ್ನು ಬೆಂಗಳೂರಿಗೆ ಸಾಗಿಸಬೇಕಿದೆ. ಹೀಗಿರುವಾಗ ಟೋಲ್ ಕಟ್ಟಿ ನಾವು ಉಳಿಸುವುದಾದರೂ ಏನು? ಹಾರೋಹಳ್ಳಿ, ಕನಕಪುರದ ರೈತರು ರೈತರಲ್ಲವೇ? ಕೂಡಲೇ ಜಿಲ್ಲಾಧಿಕಾರಿ ಸಭೆ ನಡೆಸಿ ಸರ್ವೀಸ್ ರಸ್ತೆ ನಿರ್ಮಿಸುವವರೆಗೂ ಟೋಲ್ ಮುಚ್ಚಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಮುಖಂಡ ಹರೀಶ್ ಮಾತನಾಡಿ, ದಿನನಿತ್ಯ ಬೆಳೆದ ಬೆಳೆಗಳನ್ನು ಬೆಂಗಳೂರಿಗೆ ಸಾಗಿಸುತ್ತೇವೆ. ಆದರೆ ₹170 ಪಾವತಿಸಬೇಕು ಹೀಗಾದರೆ ರೈತರು ಏನು ಮಾಡುವುದು. ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ರಾಮನಗರ ಕ್ಷೇತ್ರದ ಶಾಸಕರು ತುಟಿ ಬಿಚ್ಚುತ್ತಿಲ್ಲ ಎಂದರು.
ರೈತ ಸಂಘದ ಹಿರಿಯ ಮುಖಂಡ ದೇವರಾಜು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 209 ಅನ್ನು 948 ಎಂದು ಬದಲಿಸಿರುವುದರ ಗುಟ್ಟನ್ನು ಅಧಿಕಾರಿಗಳು ರಟ್ಟು ಮಾಡಬೇಕು. ತರಾತುರಿಯಲ್ಲಿ ರಸ್ತೆ ನಿರ್ಮಿಸಿ ಏನು ಸಾಧಿಸಿದ್ದೀರಿ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ಬಿ.ಎಂ. ಪ್ರಕಾಶ್, ಅನಂತ್ ರಾಮ್ ಪ್ರಸಾದ್, ರಾಜಣ್ಣ, ಕುಮಾರ್, ಆನಂದ್ ರಾವ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.