ADVERTISEMENT

ಬಿಡದಿ ಟೌನ್‌ಶಿಪ್‌: ಎಚ್‌ಡಿಕೆ ಸವಾಲಿಗೆ ಡಿಸಿಎಂ ಡಿಕೆಶಿ ಪ್ರತಿ ಸವಾಲು

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 3:13 IST
Last Updated 26 ಜನವರಿ 2026, 3:13 IST
ಕನಕಪುರ ತಾಲ್ಲೂಕಿನ ತಮ್ಮ ಸ್ವಗ್ರಾಮವಾದ ದೊಡ್ಡ ಆಲಹಳ್ಳಿಯಲ್ಲಿ ಭಾನುವಾರ ನಡೆದ ನೂತನ ರಾಮ ಮಂದಿರ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಂಡರು 
ಕನಕಪುರ ತಾಲ್ಲೂಕಿನ ತಮ್ಮ ಸ್ವಗ್ರಾಮವಾದ ದೊಡ್ಡ ಆಲಹಳ್ಳಿಯಲ್ಲಿ ಭಾನುವಾರ ನಡೆದ ನೂತನ ರಾಮ ಮಂದಿರ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಂಡರು    

ಕನಕಪುರ: ‘ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ. ಅವರು ಮುಖ್ಯಮಂತ್ರಿಯಾಗಿದ್ದಾಲೇ ಸವಾಲು ಸ್ವೀಕರಿಸಿದ್ದೇನೆ. ಈಗಲೂ ನಮ್ರತೆಯಿಂದ ಸವಾಲು ಸ್ವೀಕರಿಸುವೆ. ಅವರು ದಿನಾಂಕ ನಿಗದಿಪಡಿಸಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿ ಸವಾಲು ಹಾಕಿದರು.

ಟೌನ್‌ಶಿಪ್‌ ವಿರುದ್ಧ ಬಿಡದಿಯ ಭೈರಮಂಗಲದಲ್ಲಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾನುವಾರ ಪಾಲ್ಗೊಂಡ ಎಚ್‌ಡಿಕೆ ‘ಯೋಜನೆ ಕುರಿತು ಅಣ್ಣ–ತಮ್ಮ ಚರ್ಚೆ ಬರಲಿ’ ಎಂದು ಹಾಕಿದ ಸವಾಲಿಗೆ, ತಾಲ್ಲೂಕಿನ ದೊಡ್ಡ ಆಲಹಳ್ಳಿಯಲ್ಲಿ ಮಾಧ್ಯಮದವರಿಗೆ ಡಿಕೆಶಿ ಪ್ರತಿಕ್ರಿಯಿಸಿದರು.

‘ಕುಮಾರಸ್ವಾಮಿ ಅವರು ಯಾವತ್ತು ಚರ್ಚೆಗೆ ಸಿದ್ಧ ಎನ್ನುವರೊ ಅಂದೇ ಚರ್ಚಿಸಲು ತಯಾರಿದ್ದೇನೆ. ಮಾಧ್ಯಮಗಳೇ ದಿನಾಂಕ ನಿಗದಿಪಡಿಸಲಿ. ರಾಮಮಂದಿರದ ಮುಂದೆ ಈ ಪ್ರಶ್ನೆ ಕೇಳಿದ್ದೀರಿ. ಈ ಸನ್ನಿಧಿಯಲ್ಲಿ ನುಡಿದಂತೆ ನಡೆಯುತ್ತೇನೆ. ಚರ್ಚೆ ದಿನಾಂಕವನ್ನು ಮೂರು ದಿನ ಮುಂಚಿತವಾಗಿ ತಿಳಿಸಲಿ’ ಎಂದರು.

ADVERTISEMENT

‘ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ’ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರು ಈ ವಿಷಯದಲ್ಲಿ ರಾಜಕಾರಣ ಮಾಡಬೇಕೆಂದು ಮಾಡುತ್ತಿದ್ದಾರೆ. ಯೋಜನೆ ಮಾಡಿದ್ದು ಅವರೇ ಹೊರತು ನಾನಲ್ಲ. ರೈತರಿಗೆ 800 ಅಡಿ ಭೂಮಿ ನೀಡುತ್ತೇನೆ ಎಂದು ಭರವಸೆ ಕೊಟ್ಟಿದ್ದೆ ಎಂದು ಅವರೇ ಹೇಳಿದ್ದಾರೆ. ಅವರು ಹೇಳಿದ್ದನ್ನು ನಾವೀಗ ಮಾಡುತ್ತಿದ್ದೇವೆ ಅಷ್ಟೇ’ ಎಂದು ತಿರುಗೇಟು ನೀಡಿದರು.

‘ಇಲ್ಲಿ ನಾನು ಹಾಗೂ ಕುಮಾರಸ್ವಾಮಿ ಇಬ್ಬರೂ ಶಾಶ್ವತವಲ್ಲ. ಆದರೆ, ನಾವು ತೆಗೆದುಕೊಂಡ ತೀರ್ಮಾನ ಶಾಶ್ವತವಾಗಿ ಉಳಿಯುತ್ತದೆ. ನಾವಿಬ್ಬರು ಇಲ್ಲದಿದ್ದರೂ ಯೋಜನೆಯಿಂದ ಮುಂದಿನ ಪೀಳಿಗೆಗೆ ಅನುಕೂಲವಾಗಲಿದ್ದು, ಮುಂದೆ ನಮ್ಮನ್ನು ನೆನಪಿಸಿಕೊಳ್ಳಲಿದ್ದಾರೆ’ ಎಂದು ಹೇಳಿದರು.

ಉತ್ತಮ ಪರಿಹಾರ: ‘ನನ್ನ‌ ಕ್ಷೇತ್ರದ ರಸ್ತೆಗಳ ಅಗಲೀಕರಣ ಮಾಡಿಸಿದ್ದಕ್ಕೆ ಎಷ್ಟು ಪರಿಹಾರ ಸಿಕ್ಕಿದೆ ಎಂದು ದೊಡ್ಡಆಲಹಳ್ಳಿ, ಸಾತನೂರು, ಕನಕಪುರದವರನ್ನು ಕೇಳಿ ನೋಡಿ. ದೊಡ್ಡ ಆಲಹಳ್ಳಿಯಲ್ಲಿ ಅಡಿಗೆ ₹1,500 ಪರಿಹಾರ ಕೊಡಿಸಿದ್ದೇನೆ. ಈ ಬಗ್ಗೆ ನಾನು ಮಾಧ್ಯಮಗಳಿಗೆ ಉತ್ತರಿಸುವ ಬದಲು ನೇರವಾಗಿ ಕುಮಾರಸ್ವಾಮಿ ಅವರಿಗೇ ಪ್ರತಿಕ್ರಿಯಿಸುವೆ’ ಎಂದರು.

‘ಕ್ಷೇತ್ರದಲ್ಲಿ 500ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಲಾಗಿದೆ. ನಮ್ಮೂರಿನಲ್ಲೇ ಏಳೆಂಟು ನಿರ್ಮಿಸಲಾಗಿದೆ. ಪಟ್ಟಲದಮ್ಮ ದೇವಸ್ಥಾನವನ್ನು ₹2 ಕೋಟಿ ವೆಚ್ಚದಲ್ಲಿ ಕಟ್ಟಲಾಗುತ್ತಿದೆ. ಎಲ್ಲಾ ಧರ್ಮದವರಿಗೂ ನಾವು ಸಹಾಯ ಮಾಡುತ್ತಿದ್ದೇವೆ. ಮುಸ್ಲಿಮರಿಗೆ ಮಸೀದಿ, ಕ್ರೈಸ್ತರಿಗೆ ಚರ್ಚ್ ನಿರ್ಮಾಣಕ್ಕೆ ಸಹಾಯ ಮಾಡಿದ್ದೇವೆ’ ಎಂದರು.

‘ನನಗೆ ನನ್ನ ಕ್ಷೇತ್ರದ ಜನರೇ ಆಸ್ತಿ. ಅವರಿಗಾಗಿ ನನ್ನ ತಾತ, ಮುತ್ತಾತರ ಕಾಲದ ಆಸ್ತಿಗಳನ್ನು ಶಾಲೆ ಮತ್ತು ಹಾಸ್ಟೆಲ್‌ಗಾಗಿ ದಾನ ಮಾಡಿದ್ದೇನೆ. ಕ್ಷೇತ್ರದ ಜನ ನಮ್ಮನ್ನು ಬೆಳೆಸಿದ್ದಾರೆ. ಹಾಗಾಗಿ,‌ ಅವರುಗಳೇ ಆ ಆಸ್ತಿಗಳನ್ನು ಉಪಯೋಗಿಸಿಕೊಳ್ಳಲಿ’ ಎಂದು ತಿಳಿಸಿದರು.

ಸ್ವಗ್ರಾಮದಲ್ಲಿ ಶ್ರೀ ರಾಮ ಮಂದಿರ ಸೇವಾ ಸಮಿತಿ ನಿರ್ಮಿಸಿರುವ ನೂತನ ರಾಮ ಮಂದಿರ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಕನಕಪುರದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಮೊದಲ ಪ್ರಯಾಣ ಬೆಳೆಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗೆ ಪೂಜೆ ಮಾಡಿ ಪ್ರಯಾಣಕ್ಕೆ ಚಾಲನೆ ನೀಡಿದರು.

ನಾನು ಜೈಲಿಗೆ ಹೋದಾಗ ಕ್ಷೇತ್ರದ ಜನ ಬರಿಗಾಲಲ್ಲಿ ದೆಹಲಿವರೆಗೆ ಬಂದಿದ್ದಾರೆ. ಅವರ ಪ್ರಾರ್ಥನೆಯಿಂದಾಗಿಯೇ 48 ದಿನಗಳಲ್ಲಿ ಜೈಲಿನಿಂದ ಬಿಡುಗಡೆಯಾದೆ‌. ಕ್ಷೇತ್ರದ ಜನರೇ ನನ್ನ ಆಸ್ತಿ. ಅವರಿಗಾಗಿ ಊರಿನ ಅನೇಕ ಆಸ್ತಿಯನ್ನು ಬಿಟ್ಟಿದ್ದೇನೆ –
ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ

ಬರುವವರನ್ನು ಬೇಡ ಎನ್ನಲಾಗುತ್ತದೆಯೇ?

‘ರಾಜ್ಯ ರಾಜಕಾರಣಕ್ಕೆ ಬರುವವರನ್ನು ಬೇಡ ಎನ್ನಲಾಗುತ್ತದೆಯೇ? ಈಗಲೂ ಅವರು ರಾಜಕಾರಣದಲ್ಲಿದ್ದಾರೆ ಅಲ್ಲವೇ. ರಾಷ್ಟ್ರ ರಾಜಕಾರಣವೇನು? ರಾಜ್ಯ ರಾಜಕಾರಣವೇನು? ಎಂದು ನನಗೆ ಗೊತ್ತಿಲ್ಲ. ಅಂತಿಮ ದಿನಗಳನ್ನು ರಾಮನಗರ ಜಿಲ್ಲೆಯಲ್ಲಿಯೇ ನಾನು ಮುಂದುವರೆಸುತ್ತೇನೆ ಎನ್ನುವ ಕುಮಾರಸ್ವಾಮಿ ಅವರಿಗೆ ದೇವರು ಶಕ್ತಿ ಕೊಟ್ಟು ಒಳ್ಳೆಯದು‌ ಮಾಡಲಿ. ಅವರ ಆಸೆ ಏನಿದೆಯೋ ಅದನ್ನು ಕೇಳಿಕೊಳ್ಳಲಿ. ಅವರುಂಟು ಜನರುಂಟು. ಅದರಂತೆ ನಾವುಂಟು ನಮ್ಮ ಜನರುಂಟು’ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.