ADVERTISEMENT

ಕಾರ್ಮಿಕ ನ್ಯಾಯಾಲಯದಲ್ಲಿ ಟೊಯೊಟಾ ವಿವಾದ ಇತ್ಯರ್ಥಕ್ಕೆ ಡಿಸಿಎಂ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 13:54 IST
Last Updated 18 ಡಿಸೆಂಬರ್ 2020, 13:54 IST
ಸಿ.ಎನ್. ಅಶ್ವತ್ಥನಾರಾಯಣ
ಸಿ.ಎನ್. ಅಶ್ವತ್ಥನಾರಾಯಣ   

ಬಿಡದಿ (ರಾಮನಗರ): ‘ಟೊಯೊಟಾ ಕಿರ್ಲೋಸ್ಕರ್‌ ಕಂಪನಿಯಲ್ಲಿ ತಲೆದೋರಿರುವ ಸಮಸ್ಯೆಯನ್ನು ಅಲ್ಲಿನ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಸಂಘವು ಕಾರ್ಮಿಕ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವುದು ಒಳಿತು’ ಎಂದು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಸಂದರ್ಭ ಶುಕ್ರವಾರ ಅವರು ಪತ್ರಕರ್ತರ ಜೊತೆ ಮಾತನಾಡಿದರು. ‘ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಬಾರಿ ಮಧ್ಯಸ್ಥಿಕೆ ವಹಿಸಿ ಮಾತನಾಡಿದೆ.
ಆದರೆ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಒಕ್ಕೂಟದವರು ಇಬ್ಬರೂ ಸ್ಪಂದಿಸಿಲ್ಲ. ಈ ಇಬ್ಬರು ತಮ್ಮ ಉಗ್ರ ನಿಲುವಿನಿಂದ ಹೊರ ಬಂದು ನ್ಯಾಯಾಲಯ ಇಲ್ಲವೇ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

‘ಟೊಯೊಟಾ ಹಾಗೂ ಕೋಲಾರದ ವಿಸ್ಟ್ರಾನ್‌ ಕಂಪನಿಯಲ್ಲಿನ ಘಟನೆಗಳು ವಿಷಾದನೀಯ. ಇದರಿಂದ ರಾಜ್ಯದ ಬಗ್ಗೆ ಕೆಟ್ಟ ಸಂದೇಶ ಹೋಗುತ್ತಿದೆ. ಆದಷ್ಟೂ ಶೀಘ್ರ ಈ ಎಲ್ಲ ಸಮಸ್ಯೆಗಳು ಬಗೆಹರಿಯಬೇಕಿದೆ’ ಎಂದರು.

ADVERTISEMENT

ಮೈತ್ರಿ ಇಲ್ಲ: ಬಿಜೆಪಿ–ಜೆಡಿಎಸ್‌ ಮೈತ್ರಿ ಮಾತುಕತೆ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು ‘ಸರ್ಕಾರ ಎಂದ ಮೇಲೆ ಎಲ್ಲವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುತ್ತಿದ್ದೇವೆ. ಆದರೆ ಯಾರೊಂದಿಗೂ ಮೈತ್ರಿ ಮಾತುಕತೆ ನಡೆದಿಲ್ಲ. ಎಲ್ಲವೂ ಬರೀ ಊಹಾಪೋಹ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.