ADVERTISEMENT

ರಾಮನಗರ| ಟೊಯೋಟಾ ಹಬ್ಬದಲ್ಲಿ ಕನ್ನಡ ಕಲರವ: ಕಣ್ಮನ ಸೆಳೆದ ಕಲಾ ಪ್ರದರ್ಶನ, ಗಾಯನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 2:29 IST
Last Updated 25 ನವೆಂಬರ್ 2025, 2:29 IST
<div class="paragraphs"><p>ರಾಮನಗರ ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ (ಟಿಕೆಎಂ) ಕಂಪನಿಯಲ್ಲಿ ನಡೆದ ‘ನಮ್ಮ ಟೊಯೋಟಾ ಹಬ್ಬ’ದಲ್ಲಿ ವಿವಿಧ ಕ್ಷೇತ್ರಗಳ 8 ಸಾಧಕರಿಗೆ ಗಣ್ಯರು ‘ಟೊಯೋಟಾ ಚೈತನ್ಯ ಪುರಸ್ಕಾರ’ ಪ್ರದಾನ ಮಾಡಿದರು.</p></div>

ರಾಮನಗರ ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ (ಟಿಕೆಎಂ) ಕಂಪನಿಯಲ್ಲಿ ನಡೆದ ‘ನಮ್ಮ ಟೊಯೋಟಾ ಹಬ್ಬ’ದಲ್ಲಿ ವಿವಿಧ ಕ್ಷೇತ್ರಗಳ 8 ಸಾಧಕರಿಗೆ ಗಣ್ಯರು ‘ಟೊಯೋಟಾ ಚೈತನ್ಯ ಪುರಸ್ಕಾರ’ ಪ್ರದಾನ ಮಾಡಿದರು.

   

ರಾಮನಗರ: ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ (ಟಿಕೆಎಂ) ಕಂಪನಿಯಲ್ಲಿ ‘ನಮ್ಮ ಟೊಯೋಟಾ ಹಬ್ಬ– 2025’ ವಿಜೃಂಭಣೆಯಿಂದ ನಡೆಯಿತು. ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ ಹಾಗೂ ಜಾನಪದ ಸಂಸ್ಕೃತಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಹಬ್ಬದ ಭಾಗವಾಗಿ ನಡೆದ ‘ಸಾಂಸ್ಕೃತಿಕ ಸಮ್ಮಿಲನ’ದಲ್ಲಿ ಜಾನಪದ ನೃತ್ಯ ಪ್ರಕಾರಗಳಾದ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ದೇವರ ಕುಣಿತ ಮತ್ತು ಕೀಲುಗೊಂಬೆಗಳ ಪ್ರದರ್ಶನ ನಡೆಯಿತು. ಅಂತರರಾಷ್ಟ್ರೀಯ ಖ್ಯಾತಿಯ ಜಪಾನಿನ ಬ್ಯಾಂಡ್ ಡ್ರಮ್ ಟಾವೊ ಅವರ ಪ್ರದರ್ಶನ ಮನಸೂರೆಗೊಂಡಿತು.

ADVERTISEMENT

ಟಿಕೆಎಂ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರ ಕೌಶಲ ಮತ್ತು ಸೃಜನಶೀಲತೆ ಪ್ರದರ್ಶನಕ್ಕೂ ಹಬ್ಬ ವೇದಿಕೆಯಾಯಿತು. ನೃತ್ಯ, ಕಥೆ ಹೇಳುವುದು ಮತ್ತು ಕಲೆ ಇತ್ಯಾದಿ ಕಲೆಗಳು ರಂಜಿಸಿದವು. ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ನೇತೃತ್ವದ ತಂಡದ ಸಂಗೀತ ಪ್ರದರ್ಶನ ಹಾಗೂ ಚಿತ್ರನಟ ಶರಣ್ ಉಪಸ್ಥಿತಿ ಹಬ್ಬಕ್ಕೆ ಮೆರಗು ತಂದಿತು.

ಈ ವೇಳೆ ಮಾತನಾಡಿದ ಟಿಕೆಎಂ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ. ಶಂಕರ, ‘ನಮ್ಮ ಟೊಯೋಟಾ ಹಬ್ಬವು ಕರ್ನಾಟಕದ ಸಂಸ್ಕೃತಿಯ ಆಚರಣೆಯಾಗಿದೆ. ಸ್ಥಳೀಯ ಕಲಾ ಪ್ರಕಾರಗಳನ್ನು ಪೋಷಿಸುವ ಮೂಲಕ ಮತ್ತು ಜಾಗತಿಕ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಹಬ್ಬವಾಗಿದೆ’ ಎಂದರು.

‘ಟೊಯೋಟಾದಲ್ಲಿ ಸ್ಥಳೀಯ ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೆ ವಿಶೇಷ ಮಾನ್ಯತೆ ಇದೆ. ಭಾರತವನ್ನು ಬೆಳೆಸಿ, ಭಾರತದೊಂದಿಗೆ ಬೆಳೆಯಿರಿ ಎಂಬ ನಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಹಬ್ಬ ಆಯೋಜಿಸಲಾಗಿದೆ. ಆ ಮೂಲಕ ಕರ್ನಾಟಕದ ಈ ಶ್ರೇಷ್ಠ ಪರಂಪರೆಯನ್ನು ಕಂಪನಿಯಿಂದ ಗೌರವ ಕೆಲಸವಾಗಿದೆ’ ಎಂದು ಹೇಳಿದರು.

ಟಿಕೆಎಂ ಉಪ ವ್ಯವಸ್ಥಾಪಕ ನಿರ್ದೇಶಕರಾದ ತದಾಶಿ ಅಸಾಜುಮಾ, ಸ್ವಪ್ನೇಶ್ ಆರ್. ಮಾರು, ಟಿಕೆಎಂ ನೌಕರರ ಒಕ್ಕೂಟದ ಅಧ್ಯಕ್ಷ ದೀಪಕ್ ಎಸ್.ಆರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಇತರರು ಇದ್ದರು.

‘ಟೊಯೋಟಾ ಚೈತನ್ಯ ಪುರಸ್ಕಾರ’

ಪ್ರದಾನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಎಂಟು ಮಂದಿಗೆ ಗಣ್ಯರು ‘ಟೊಯೋಟಾ ಚೈತನ್ಯ ಪುರಸ್ಕಾರ’ ಪ್ರದಾನ ಮಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಡಾ. ಎಂ. ಬೈರೇಗೌಡ ಕೃಷಿಯಲ್ಲಿ ಶಾಂತಮ್ಮ ವೈ.ಸಿ ಶಿಕ್ಷಣದಲ್ಲಿ ರಾಮಚಂದ್ರಪ್ಪ ಎಚ್‌.ಎಂ.ಜಿ ಪರಿಸರದಲ್ಲಿ ಸಾಲುಮರದ ನಿಂಗಣ್ಣ ಕಲೆ ಮತ್ತು ಸಂಸ್ಕೃತಿಯಲ್ಲಿ ಗೋವಿಂದಯ್ಯ ಕ್ರೀಡೆಯಲ್ಲಿ ಸಾನ್ವಿ ಸತೀಶ್ ರಂಗಭೂಮಿಯಲ್ಲಿ ಸೀಬನಹಳ್ಳಿ ಪಿ. ಸ್ವಾಮಿ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಆಶಾ ವಿ. ಸ್ವಾಮಿ ಅವರಿಗೆ ಪುರಸ್ಕಾರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.