ADVERTISEMENT

ಹೋರಾಟ ಮುಂದುವರಿಕೆ: ಲಾಕೌಟ್‌ ಹಿಂಪಡೆದ ಟೊಯೊಟಾ ಕಾರ್ಖಾನೆ

ಕಾರ್ಮಿಕ ಸಂಘದ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 12:38 IST
Last Updated 12 ಜನವರಿ 2021, 12:38 IST
ಮಂಗಳವಾರ ಕಾರ್ಖಾನೆ ಎದುರು ನಡೆದ ಪ್ರತಿಭಟನೆಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್‌ ಚಕ್ಕೆರೆ ಮಾತನಾಡಿದರು
ಮಂಗಳವಾರ ಕಾರ್ಖಾನೆ ಎದುರು ನಡೆದ ಪ್ರತಿಭಟನೆಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್‌ ಚಕ್ಕೆರೆ ಮಾತನಾಡಿದರು   

ರಾಮನಗರ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ ಕಂಪನಿಯು ಕಾರ್ಖಾನೆಯ ಲಾಕೌಟ್‌ ಆದೇಶವನ್ನು ಅಧಿಕೃತವಾಗಿ ಹಿಂಪಡೆದಿದೆ. ಆದಾಗ್ಯೂ ಕಾರ್ಮಿಕಸಂಘವು ಹೋರಾಟ ಮುಂದುವರಿಸಿದೆ.

‘ಮಂಗಳವಾರ ಎರಡನೇ ಪಾಳಿಯಿಂದಲೇ ಕಾರ್ಖಾನೆಯಲ್ಲಿ ಉತ್ಪಾದನಾ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭ ಆಗಿವೆ. ಕೆಲಸಕ್ಕೆ ಮರಳುವ ನೌಕರರು ಕಾರ್ಖಾನೆಯ ಒಳಗೆ ಉತ್ತಮ ನಡವಳಿಕೆತೋರುವ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಬೇಕಿದೆ. ಕಂಪನಿಯ ಕಾರ್ಮಿಕರು ಮತ್ತು ಅವರ ಕುಟುಂಬಗಳ ಹಿತದೃಷ್ಟಿಯಿಂದ ಲಾಕೌಟ್‌ ಹಿಂಪಡೆಯಲಾಗಿದೆ’ ಎಂದು ಟಿಕೆಎಂ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿತಿಳಿಸಿದೆ. ಆದರೆ 66 ನೌಕರರ ಅಮಾನತು ಆದೇಶ ಮುಂದುವರಿಯಲಿದೆ. ಅವರ ವಿರುದ್ಧದ ಆರೋಪಗಳ ಕುರಿತು ನ್ಯಾಯಸಮ್ಮತ ತನಿಖೆ ಮುಂದುವರಿಯಲಿದೆ ಎಂದು ಕಂಪನಿಯು ಹೇಳಿದೆ.

ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟಿನಿಂದಾಗಿ 2020ರ ನವೆಂಬರ್‌ 18ರಂದು ಟೊಯೊಟಾ ಲಾಕೌಟ್‌ ಘೋಷಿಸಿತ್ತು. ಸರ್ಕಾರದ ಮಧ್ಯಸ್ಥಿಕೆಯಿಂದ ಮತ್ತೆ ಕಾರ್ಖಾನೆ ಬಾಗಿಲು ತೆರೆಯಿತಾದರೂ ಯೂನಿಯನ್ ಬಿಗಿಪಟ್ಟಿನ ಕಾರಣ ನ.23ರಂದು ಎರಡನೇ ಬಾರಿಗೆ ಲೌಕೌಟ್ ಘೋಷಣೆ ಮಾಡಿತ್ತು. ಈ ನಡುವೆಯೂ ಕಂಪನಿಯ ಷರತ್ತುಗಳನ್ನು ಒಪ್ಪಿ ಬರುವವರಿಗೆ ಕೆಲಸಕ್ಕೆ ಅವಕಾಶ ನೀಡಿದ್ದು, ಸುಮಾರು 1200 ಕಾರ್ಮಿಕರೊಂದಿಗೆ ಅಲ್ಪ ಪ್ರಮಾಣದಲ್ಲಿ ಉತ್ಪಾದನೆ ಮುಂದುವರಿಸಿತ್ತು.

ADVERTISEMENT

ಯೂನಿಯನ್ ಪ್ರತಿಕ್ರಿಯೆ
ಲಾಕೌಟ್‌ ತೆರವು ಬಗ್ಗೆ ಟಿಕೆಎಂ ಕಾರ್ಮಿಕರ ಸಂಘವು ಪ್ರತಿಕ್ರಿಯಿಸಿದ್ದು ‘ಒಂದೆಡೆ ಲಾಕೌಟ್‌ ತೆರವು ಎನ್ನುವ ಕಾರ್ಖಾನೆಯು ಮತ್ತೊಂದು ಕಡೆ ಮುಚ್ಚಳಿಕೆ ಬರೆದುಕೊಟ್ಟು ಒಳಗೆ ಬನ್ನಿ ಎಂದು ಷರತ್ತು ವಿಧಿಸಿರುವುದುಕಾನೂನುಬಾಹಿರವಾಗಿದೆ’ ಎಂದು ಟೀಕಿಸಿದೆ.

‘ಲಾಕೌಟ್‌ ಅವಧಿಯಲ್ಲಿನ ಸಂಪೂರ್ಣ ಸಂಬಳವನ್ನು ಕಾರ್ಮಿಕರಿಗೆ ನೀಡಬೇಕು. ಈ ಅವಧಿಯಲ್ಲಿ ಹೊರಡಿಸಲಾದ ಎಲ್ಲ ಅಮಾನತು ಹಾಗೂ ಶಿಕ್ಷೆ ಆದೇಶಗಳನ್ನು ಹಿಂಪಡೆಯಬೇಕು. ಅಲ್ಲಿಯವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ’ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಚಕ್ಕೆರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.