
ಬಿಡದಿ (ರಾಮನಗರ): ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಿ ಆಟೊಮೊಬೈಲ್ ಸೇರಿದಂತೆ ಉತ್ಪಾದನಾ ಕ್ಷೇತ್ರಗಳಿಗೆ ಅವರನ್ನು ಈಗಿನಿಂದಲೇ ಅಣಿಗೊಳಿಸುವ ನಿಟ್ಟಿನಲ್ಲಿ ಟೊಯೊಟಾ ವತಿಯಿಂದ ಆಯ್ದ ಸರ್ಕಾರಿ ಶಾಲೆಗಳಲ್ಲಿ ಕೌಶಲ ತರಬೇತಿ ಆರಂಭಿಸಲಾಗಿದೆ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂ) ಕಂಪನಿಯ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ. ಶಂಕರ ಹೇಳಿದರು.
ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆಯಿಂದ (ಟಿಟಿಟಿಐ) ಪ್ರಾಯೋಗಿಕವಾಗಿ ಜಿಲ್ಲೆಯ ಬಿಡದಿ ಶಾಲೆ ಸೇರಿದಂತೆ ವಿವಿಧೆಡೆ ಆರಂಭಿಸಲಾಗಿದೆ. ನಂತರ ಕಂಪನಿಯು ಅಭಿವೃದ್ಧಿಪಡಿಸಿರುವ ರಾಮನಗರ, ಮಂಡ್ಯ ಹಾಗೂ ಮೈಸೂರು ಭಾಗದ ಒಟ್ಟು 22 ಶಾಲೆಗಳಿಗೆ ವಿಸ್ತರಿಸಲಾಗುವುದು ಎಂದರು.
ಭಾರತವನ್ನು ಬೆಳೆಸೋಣ. ಭಾರತದೊಂದಿಗೆ ಬೆಳೆಯೋಣ’ ಎಂಬ ಧ್ಯೇಯವಾಕ್ಯದ ಭಾಗವಾಗಿ ಈ ತರಬೇತಿ ಆರಂಭಿಸಲಾಗಿದೆ. ಶಿಸ್ತು, ಸಂವಹನ, ಆಟೊಮೊಬೈಲ್ ಕೌಶಲವು ಈ ತರಬೇತಿಯ ಮುಖ್ಯ ಉದ್ದೇಶ. ಇದನ್ನು ಶಾಲಾ ಚಟುವಟಿಕೆಯ ಒಂದು ಭಾಗವಾಗಿ ಆರಂಭಿಸುವಂತೆ ಕಂಪನಿಯು ಸರ್ಕಾರಕ್ಕೂ ಒತ್ತಾಯಿಸಿದೆ ಎಂದು ತಿಳಿಸಿದರು.
‘ಕಂಪನಿಯು ಈಗಾಗಲೇ ರಾಜ್ಯದಾದ್ಯಂತ ಇರುವ 106 ಸರ್ಕಾರಿ ಐಟಿಐ ಕಾಲೇಜುಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಅಲ್ಲಿಯೂ ಆಟೊಮೊಬೈಲ್ ತರಬೇತಿ ಆರಂಭಿಸಿದೆ. ನಮ್ಮ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಅಲ್ಲಿ ತರಬೇತಿ ನೀಡುತ್ತಾರೆ. ಮುಂದುವರಿದು ಆಟೊಮೊಬೈಲ್ ಜೊತೆಗೆ ಸಾಫ್ಟ್‌ವೇರ್ ಕೌಶಲ ಸಹ ನೀಡಲಾಗುತ್ತಿದೆ’ ಎಂದು ಹೇಳಿದರು.
‘ಆಟೊಮೊಬೈಲ್ ಮತ್ತು ಸಾಫ್ಟ್‌ವೇರ್ ಒಳಗೊಂಡ ಸ್ನಾತಕೋತ್ತರ ಕೋರ್ಸ್ ಅನ್ನು ಟೊಯೊಟಾ ರೂಪಿಸಿದೆ. ಪ್ರೆಸಿಡೆನ್ಸಿ ಡೀಮ್ಡ್ ವಿವಿ ಜೊತೆ ಒಡಂಬಡಿಕೆ ಮಾಡಿಕೊಂಡು ಪ್ರಾಯೋಗಿಕವಾಗಿ ಅಲ್ಲಿ ಕೋರ್ಸ್ ಆರಂಭಿಸಿದೆ. ಮುಂದೆ ಅದರ ಸಾಧಕ–ಬಾಧಕ ನೋಡಿಕೊಂಡು ಕೋರ್ಸ್ ಅನ್ನು ಎಂಜಿನಿಯರಿಂಗ್ ಮಟ್ಟದಲ್ಲಿ ಅಧಿಕೃತಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುವುದು’ ಎಂದರು.
ಮುಂದಿನ ವರ್ಷಾಂತ್ಯಕ್ಕೆ 3ನೇ ಘಟಕ:
‘ವರ್ಷದಿಂದ ವರ್ಷಕ್ಕೆ ಟೊಯೊಟಾ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ, ಬಿಡದಿ ಕ್ಯಾಂಪಸ್‌ನಲ್ಲೇ 3ನೇ ಉತ್ಪಾದನಾ ಘಟಕ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 2026ರ ಅಂತ್ಯಕ್ಕೆ ಕಾರ್ಯಾಚರಣೆ ಆರಂಭಿಸಲಿದೆ. ಆಗ ಉದ್ಯೋಗಿಗಳ ಸಂಖ್ಯೆಯು ದುಪ್ಪಟ್ಟಾಗಲಿದೆ. ಗ್ರಾಹಕರು ಕಾರು ಬುಕ್ ಮಾಡಿದ ಒಂದೆರಡು ದಿನದಲ್ಲಿ ಕಾರು ಡೆಲಿವರಿ ನೀಡಲಾಗುವುದು’ ಎಂದು ತಿಳಿಸಿದರು.
‘ಕಂಪನಿಯು ತನ್ನ ಉದ್ಯೋಗಿಗಳಿಗೆ ವೃತ್ತಿ ಕೌಶಲವನ್ನು ಉನ್ನತೀಕರಿಸುವ ಸಲುವಾಗಿ 100 ಮಂದಿಯನ್ನು ಇತ್ತೀಚೆಗೆ ಜಪಾನ್‌ಗೆ ಒಂದು ವರ್ಷದ ತರಬೇತಿಗೆ ಕಳಿಸಿತ್ತು. ಅಲ್ಲಿ ಜಾಗತಿಕ ಮಟ್ಟದ ಉತ್ಪಾದನಾ ತರಬೇತಿಯನ್ನು ಪಡೆದು ಬಂದಿದ್ದಾರೆ. ಮುಂದೆಯೂ ಮತ್ತೊಂದು ತಂಡವನ್ನು ಕಳಿಸಲಾಗುವುದು’ ಎಂದು ಹೇಳಿದರು.
ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ ಪ್ರಾಂಶುಪಾಲ ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.