ADVERTISEMENT

ಸಂಚಾರ ನಿಯಮ ಉಲ್ಲಂಘನೆ: ಹಳ್ಳಿ ಮಂದಿಗೆ ಬೆಂಗಳೂರು ಪೊಲೀಸರಿಂದ ₹5 ಲಕ್ಷ ದಂಡ!

ಬೆಂಗಳೂರು ನಗರ ಪೊಲೀಸರ ದಂಡದ ಕ್ರಮಕ್ಕೆ ಅವಾಕ್ಕಾದ ಗ್ರಾಮಸ್ಥರು; ಊರಿನ ಎಂಜಿನಿಯರ್ ಕೃತ್ಯಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 7:15 IST
Last Updated 5 ಡಿಸೆಂಬರ್ 2023, 7:15 IST
ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದ ಕೆರಳಾಳುಸಂದ್ರ ಗ್ರಾಮಸ್ಥರು
ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದ ಕೆರಳಾಳುಸಂದ್ರ ಗ್ರಾಮಸ್ಥರು   

ಕನಕಪುರ: ಪಟ್ಟಣದಿಂದ ದೂರವಿರುವ ಆ ಗ್ರಾಮದ ನಿವಾಸಿಗಳು ತಮ್ಮ ದೈನಂದಿನ ಓಡಾಟಕ್ಕಾಗಿ ದ್ವಿಚಕ್ರ ವಾಹನ ಸೇರಿದಂತೆ ಇತರ ವಾಹನಗಳನ್ನು ಇಟ್ಟುಕೊಂಡಿದ್ದಾರೆ. ಊರು–ಮನೆ ಓಡಾಡುವ ಜನರು ಸಂಚಾರ ನಿಯಮಗಳು ಲೆಕ್ಕಕ್ಕಿಲ್ಲ. ಆದರೆ, ದ್ವಿಚಕ್ರ ಮತ್ತು ಕಾರು ಹೊಂದಿರುವ ಈ ಊರಿನ ಸುಮಾರು 60 ಮಂದಿಗೆ ಬೆಂಗಳೂರು ನಗರ ಪೊಲೀಸರು ಬರೋಬ್ಬರಿ ₹5 ಲಕ್ಷದಷ್ಟು ದಂಡ ವಿಧಿಸಿದ್ದಾರೆ.

ರಾಜಧಾನಿ ಪೊಲೀಸರು ಹಳ್ಳಿ ಜನರ ವಾಹನಗಳಿಗೆ ಸಂಚಾರ ನಿಯಮ ಉಲ್ಲಂಘನೆ ಆರೋಪದ ಮೇಲೆ ಅದೇಗೆ ದಂಡ ವಿಧಿಸಲು ಸಾಧ್ಯ...? ಅಸಾಧ್ಯವೆನಿಸಿದ್ದನ್ನು ಇಲ್ಲೊಬ್ಬ ಭೂಪ ಸಾಧ್ಯವಾಗಿಸಿ, ತನ್ನೂರಿನವರೆಲ್ಲರೂ ದಿಗ್ಬ್ರಮೆಯಾಗುವಂತೆ ಮಾಡಿದ್ದಾನೆ. ಆತನ ಈ ಕೃತ್ಯಕ್ಕೆ ಊರಿನವರ ಮೇಲಿನ ದ್ವೇಷದ ಕಾರಣವಂತೆ. ತಾಲ್ಲೂಕಿನ ಕೆರಳಾಳುಸಂದ್ರದಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ.

ಸಾವಿರಾರು ರೂಪಾಯಿಯ ಮಾರುದ್ದದ ಬಿಲ್‌ ನೋಡಿ ದಂಗಾಗಿರುವ ಗ್ರಾಮಸ್ಥರು, ದಂಡದ ಕುರಿತು ಪರಿಶೀಲನೆ ನಡೆಸಿದಾಗ ಬೆಂಗಳೂರು ಪೊಲೀಸರು ವಿಧಿಸಿರುವುದು ಗೊತ್ತಾಗಿದೆ. ಅಲ್ಲದೆ, ಇದರ ಹಿಂದಿರುವುದು ಊರಿನ ಲೋಕೇಶ್ ಎಂಬ ವಿಷಯ ಗೊತ್ತಾಗುತ್ತಿದ್ದಂತೆ, ಸೋಮವಾರ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಊರ ಹುಡುಗನ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ, ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ADVERTISEMENT

ಎಂಜಿನಿಯರ್ ಆಟ: ಬೆಂಗಳೂರಿನಲ್ಲಿ ಎಂಜಿನಿಯರ್‌ ಆಗಿರುವ ಗ್ರಾಮದ ಲೋಕೇಶ್‌ ಎಂಬಾತ, ಸಂಚಾರ ನಿಯಮ ಉಲ್ಲಂಘನೆ ಹೆಸರಿನಲ್ಲಿ ಬೆಂಗಳೂರು ಪೊಲೀಸರಿಂದ ದಂಡ ಹಾಕಿಸಿದಾತ. ಈತನಿಂದಾಗಿ ಗಿರೀಶ್‌, ಶಿವಸ್ವಾಮಿ, ಮಾದೇಗೌಡ, ಆನಂದ, ನಾಗೇಶ್‌, ಮುನಿಯಪ್ಪ, ರವಿ, ಏಲಕ್ಕಿಗೌಡ, ನಾಗರಾಜು ಸೇರಿದಂತೆ ಗ್ರಾಮದಲ್ಲಿ 60 ಮಂದಿಗೆ ಚಾಲನೆ ವೇಳೆ ಮೊಬೈಲ್ ಬಳಸಿದ್ದಕ್ಕೆ, ಬೈಕ್ ಸವಾರರು ಹೆಲ್ಮೆಟ್ ಮತ್ತು ಕಾರು ಚಾಲಕರು ಸೀಲ್ಟ್ ಬೆಲ್ಟ್ ಹಾಕದಿರುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗೆ ಕಳೆದ ನಾಲ್ಕು ತಿಂಗಳಿಂದ ಸುಮಾರು ₹5 ಲಕ್ಷ ದಂಡ ವಿಧಿಸಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ಮನೆ ಬಳಿ ಸಿಸಿಟಿವಿ ಕ್ಯಾಮೆರಾ ಹಾಕಿಸಿಕೊಂಡಿರುವ ಲೋಕೇಶ್, ಮನೆ ಮುಂದೆ ಸಾಗುವ ವಾಹನಗಳ ಚಿತ್ರಗಳನ್ನು ಸೆರೆಹಿಡಿದಿದ್ದಾನೆ. ನಂತರ, ಅವುಗಳನ್ನು ಬೆಂಗಳೂರು ನಗರ ಪೊಲೀಸರ ಬಿಸಿಪಿ ಆ್ಯಪ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆ ದೂರಿನಡಿ ಅಪ್ಲೋಡ್ ಮಾಡಿದ್ದಾನೆ. ಅಲ್ಲಿ ಫೋಟೊ ಅಪ್ಲೋಡ್ ಆಗುತ್ತಿದ್ದಂತೆ ಪೊಲೀಸರು, ಎಲ್ಲಿ ಆಗಿದೆ ಎಂಬುದರ ಅರಿವಿಲ್ಲದೆ ಉಲ್ಲಂಘನೆ ಆಧರಿಸಿ ದಂಡವನ್ನು ವಿಧಿಸಿದ್ದಾರೆ ಎಂದು ದೂರಿದ್ದಾರೆ.

ಗ್ರಾಮದಲ್ಲಿ ಹಾಲು ಹಾಕುವವರು, ರೇಷ್ಮೆ ಸೊಪ್ಪು ತರಲು ಓಡಾಡುವರು, ಮಕ್ಕಳನ್ನು ಶಾಲಾ–ಕಾಲೇಜಿಗೆ ಕರೆದುಕೊಂಡು ಹೋಗುವವರು ಸೇರಿದಂತೆ ಹಲವರ ವಾಹನಗಳಿಗೆ ದಂಡ ಬಂದಿದೆ. ಕೆಲವರಿಗೆ ₹40 ಸಾವಿರ ಬಂದಿದೆ. ಇಷ್ಟೊಂದು ಹಣವನನ್ನು ಎಲ್ಲಿಂದ ತರುವುದು? ಲೋಕೇಶ್‌ ಮಾಡಿದ ತಪ್ಪಿಗೆ ನಾವ್ಯಾಕೆ ದಂಡ ತೆರಬೇಕು? ಆತ ಜಮೀನಿನ ವಿಷಯವಾಗಿ ಅಕ್ಕಪಕ್ಕದವರಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಕ್ರಮದ ಭರವಸೆ : ಎಂಜಿನಿಯರ್ ಆಗಿರುವ ಗ್ರಾಮದ ಯುವಕನಿಂದಾಗಿ ಬೆಂಗಳೂರು ಪೊಲೀಸರಿಂದ ಸಂಚಾರ ನಿಯಮ ಉಲ್ಲಂಘನೆಯಡಿ ದಂಡ ವಿಧಿಸಿಕೊಂಡಿರುವ ಗ್ರಾಮಸ್ಥರು ಠಾಣೆಗೆ ಬಂದಿದ್ದರು. ಆತನ ವಿರುದ್ಧ ಎಲ್ಲರೂ ದೂರು ಕೊಟ್ಟರೆ, ಎಲ್ಲವನ್ನು ಕ್ರೋಢಿಕರಿಸಿ ಎಫ್‌ಐಆರ್ ದಾಖಲಿಸಲಾಗುವುದು. ದಂಡ ಮನ್ನಾ ಕುರಿತು ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಕೃಷ್ಣ ಲಮಾಣಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

ನೀರಗಂಟಿಗೆ ₹48 ಸಾವಿರ ದಂಡ

ಗ್ರಾಮದಲ್ಲಿ ನೀರಗಂಟಿಯಾಗಿ ಕೆಲಸ ಮಾಡುವ ನಿತಿನ್‌ ಕುಮಾರ್‌ ಎಂಬುವರಿಗೆ ಬರೋಬ್ಬರಿ ₹48 ಸಾವಿರ ದಂಡ ಬಂದಿದೆ. ನಿತ್ಯ ನೀರು ಬಿಡುವುದಕ್ಕಾಗಿ ಓಡಾಡುವ ಅವರು ಹೆಲ್ಮೆಟ್ ಹಾಕದ ಕಾರಣಕ್ಕೆ ಮತ್ತು ಮೊಬೈಲ್ ಬಳಸಿದ್ದಕ್ಕಾಗಿ ಇಷ್ಟು ಮೊತ್ತದ ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.