ಹಾರೋಹಳ್ಳಿ: ಪಟ್ಟಣದಲ್ಲಿ ಮಂಗಳವಾರ ಸಂಜೆ ಮಳೆ–ಬಿರುಗಾಳಿಗೆ ಮರವೊಂದು ವಿದ್ಯುತ್ ಕಂಬ ಹಾಗೂ ಮನೆಯ ಮೇಲೆ ಉರುಳಿ ಬಿದ್ದಿದ್ದು, ಹಾನಿ ಸಂಭವಿಸಿದೆ.
ಪಟ್ಟಣದ ಬಿ.ಕೆ. ಮುಖ್ಯರಸ್ತೆಯಲ್ಲಿ ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯ ಆವರಣದಲ್ಲಿ ಇದ್ದ ಮರವು ಸಂಜೆ 5.45ರ ಸುಮಾರಿಗೆ ಬಿರುಗಾಳಿಯಿಂದಾಗಿ ಧರೆಗೆ ಉರುಳಿತು. ಈ ಸಂದರ್ಭ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ಮುರಿದವು. ನಾಗೇಶ್ ಎಂಬುವರ ಮನೆಯ ಸಜ್ಜದ ಮೇಲೆ ಮರದ ಕೊಂಬೆಗಳು ಬಿದ್ದ ಕಾರಣ ಸಜ್ಜಾ ಮುರಿದಿದ್ದು, ಗೋಡೆಗಳೂ ಬಿರುಕು ಬಿಟ್ಟವು. ಇದರಿಂದ ಮನೆಯಲ್ಲಿದ್ದ ಮಂದಿ ಗಾಬರಿಯಿಂದ ಹೊರಗೆ ಓಡಿ ಬಂದರು.
‘ಮರವು ಸಾಕಷ್ಟು ಹಳೆಯದಾಗಿದ್ದು, ಅದನ್ನು ತೆರವುಗೊಳಿಸುವಂತೆ ಕೋರಿ ತರಬೇತಿ ಸಂಸ್ಥೆಯ ವ್ಯವಸ್ಥಾಪಕಿ ಸುಮಾ ಗಾಂವ್ಕರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೆವು. ಆದರೆ ಅವರು ಕ್ರಮಕ್ಕೆ ಮುಂದಾಗಲಿಲ್ಲ. ನಿರ್ಲಕ್ಷ್ಯದ ಕಾರಣದಿಂದ ಇಂದು ವಿದ್ಯುತ್ ತಂತಿಗಳು ತುಂಡಾಗಿ, ನಮ್ಮ ಮನೆಗೂ ಲಕ್ಷಾಂತರ ರೂಪಾಯಿಯಷ್ಟು ಹಾನಿ ಸಂಭವಿಸಿದೆ’ ಎಂದು ಮನೆಯ ಮಾಲೀಕ ನಾಗೇಶ್ ಹೇಳಿದರು.
ಹಾರೋಹಳ್ಳಿ ಸುತ್ತಮುತ್ತ ಸಂಜೆ ಭಾರಿ ಬಿರುಗಾಳಿ ಬೀಸಿದ್ದು, ನಂತರದಲ್ಲಿ ಜೋರು ಮಳೆಯಾಯಿತು. ಇದರಿಂದ ಅಲ್ಲಲ್ಲಿ ಮರ ಉರುಳಿದ್ದು, ಜನರಿಗೆ ತೊಂದರೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.