ADVERTISEMENT

ರಾಮನಗರ: ಊಬರ್ ಚಾಲಕನ ಮೇಲೆ ಹಲ್ಲೆ, ಕಾರಿನೊಂದಿಗೆ ಪರಾರಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 5:51 IST
Last Updated 9 ಜನವರಿ 2023, 5:51 IST
   

ರಾಮನಗರ: ಹಾರೋಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಪ್ರಯಾಣಿಕರ ಸೋಗಿನಲ್ಲಿ ಬಂದ ಏಳು ದುಷ್ಕರ್ಮಿಗಳು ಊಬರ್ ಕಾರ್‌ ಚಾಲಕನನ್ನು ದರೋಡೆ ಮಾಡಿ ಇನೋವಾ ಕಾರ್ ಸಮೇತ ಪರಾರಿಯಾಗಿದ್ದಾರೆ.

ತುಮಕೂರು ಮೂಲದ ದೇವರಾಜು ವಂಚನೆಗೆ ಒಳಗಾದ ಚಾಲಕ. ಶುಕ್ರವಾರ ರಾತ್ರಿ 10:30 ಸಮಯದಲ್ಲಿ ದುಷ್ಕರ್ಮಿಗಳು ಊಬರ್ ಆ್ಯಪ್‌ ಮೂಲಕ ಕಾರ್ ಬುಕ್ ಮಾಡಿದ್ದಾರೆ. ಚಾಲಕ ದೇವರಾಜು ಬೆಂಗಳೂರಿನ ಚಂದಾಪುರದ ಬಳಿ ಏಳು ಮಂದಿಯನ್ನು ಹತ್ತಿಸಿಕೊಂಡು ಡ್ರಾಪ್ ಮಾಡಲು ಹೋಗಿದ್ದಾರೆ. ಬೂದಿಗೆರೆಗೆ ಹೋಗಲು ಸೂಚಿಸಿದ ದುಷ್ಕರ್ಮಿಗಳು ಸರ್ಜಾಪುರ, ವೈಟ್ ಫೀಲ್ಡ್ ಮಾರ್ಗದಲ್ಲಿ ತೆರಳಿ ಬೂದಿಗೆರೆ ಜಂಕ್ಷನ್ ಬಳಿ ರಾತ್ರಿ 11: 40ರಲ್ಲಿ ಕಾರು ನಿಲ್ಲಿಸಿದ ಸಂದರ್ಭದಲ್ಲಿ ಏಕಾಏಕಿ ಚಾಲಕ ಕುತ್ತಿಗೆ
ಬಿಗಿದ್ದಿದ್ದಾರೆ.

ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ದುಷ್ಕರ್ಮಿಗಳು ಆತನ ಕೈಕಾಲು ಕಟ್ಟಿಹಾಕಿ, ಬಾಯಿಗೆ ಟೇಪು ಬಿಗಿದು ಹಿಂಬದಿ ಸೀಟಿನಲ್ಲಿ ಕೂರಿಸಿದ್ದಾರೆ. ನಂತರ ಕಾರು ಚಾಲನೆ ಮಾಡಿದ್ದು, ದೇವರಾಜು ಬಳಿ ಇದ್ದ ₹5 ಸಾವಿರ ನಗದು, ನಾಲ್ಕು ಡೆಬಿಟ್ ಕಾರ್ಡ್, ಎರಡು ಕ್ರೆಡಿಟ್ ಕಾರ್ಡ್ ಹಾಗೂ ಎರಡು ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ.

ADVERTISEMENT

ಚಾಲಕನನ್ನು ಬೆದರಿಸಿ ಎಟಿಎಂ ಕಾರ್ಡುಗಳ ಪಾಸ್‌ವರ್ಡ್ ಪಡೆದ ಆರೋಪಿಗಳು ಅದರಿಂದ ₹5 ಸಾವಿರ ನಗದು ಡ್ರಾ ಮಾಡಿಕೊಂಡಿದ್ದಾರೆ. ವಿವಿಧ ಪ್ರದೇಶಗಳಲ್ಲಿ ಸುತ್ತಾಡಿದ ದುಷ್ಕರ್ಮಿಗಳು ರಾಮನಗರದ ಮರಳವಾಡಿ ಬಳಿಯ ಶನಿಮಹಾತ್ಮ ದೇವಾಲಯದ ಬಳಿ ಚಾಲಕನನ್ನು ಕಾರಿನಿಂದ ದೂಕಿದ್ದಾರೆ. ನಂತರ ಜೀವಬೆದರಿಕೆ ಹಾಕಿ ಕಾರ್‌ ಸಮೇತ ಪರಾರಿಯಾಗಿದ್ದಾರೆ.

ಹಲ್ಲೆಗೆ ಒಳಗಾದ ದೇವರಾಜು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪಡೆದು ಶನಿವಾರ ಹಾರೋಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.