ADVERTISEMENT

ಸಂಪ್ರದಾಯ, ಸಂಸ್ಕೃತಿ ಮುಂದುವರಿಸಿ

ಚನ್ನಪಟ್ಟಣ: ಯುಗಾದಿ ಕವಿಗೋಷ್ಠಿ, ಸಂವಾದದಲ್ಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 10:17 IST
Last Updated 24 ಮಾರ್ಚ್ 2020, 10:17 IST
ಚನ್ನಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಡೆದ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮವನ್ನು ಸಿಂ.ಲಿಂ.ನಾಗರಾಜು ಉದ್ಘಾಟಿಸಿದರು
ಚನ್ನಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಡೆದ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮವನ್ನು ಸಿಂ.ಲಿಂ.ನಾಗರಾಜು ಉದ್ಘಾಟಿಸಿದರು   

ಚನ್ನಪಟ್ಟಣ: ನಮ್ಮ ಪೂರ್ವಿಕರ ಕಾಲದಿಂದ ಆಚರಿಸಿಕೊಂಡು ಬಂದ ಸಂಪ್ರದಾಯ, ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು ಅಭಿಪ್ರಾಯಪಟ್ಟರು.

ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಕಸಾಪ ತಾಲ್ಲೂಕು ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಯುಗಾದಿ ಕವಿಗೋಷ್ಠಿ ಮತ್ತು ಹಿಂದಿನ ಯುಗಾದಿ-ಇಂದಿನ ಯುಗಾದಿ ಸಂವಾದ ಹಾಗೂ ಗೀತಗಾಯನ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

‘ಕಷ್ಟ-ಸುಖಗಳನ್ನು ನಮ್ಮ ಬದುಕಿನಲ್ಲಿ ಬೇವು-ಬೆಲ್ಲದಂತೆ ಸಮನಾಗಿ ಸ್ವೀಕರಿಸಬೇಕು. ಜೀವನವನ್ನು ದುಸ್ತರ ಮಾಡಿಕೊಳ್ಳದೆ ಆತ್ಮಸ್ಥೈರ್ಯದಿಂದ ಎದುರಿಸಬೇಕು’ ಎಂದರು.

ADVERTISEMENT

ಹಿಂದಿನ ಯುಗಾದಿ-ಇಂದಿನ ಯುಗಾದಿ ಸಂವಾದ ಕುರಿತು ಮಾತನಾಡಿದ ಸಾಹಿತಿ ‘ದೇ.ನಾರಾಯಣಸ್ವಾಮಿ, ಒಟ್ಟು ಕುಟುಂಬದಲ್ಲಿ ಸಡಗರದಿಂದ, ಉತ್ಸಾಹದಿಂದ ಆಚರಿಸುತ್ತಿದ್ದ ಯುಗಾದಿ ಇಂದು ಕಣ್ಮರೆಯಾಗಿದೆ. ಪ್ರೀತಿ, ವಿಶ್ವಾಸ, ಸಮನ್ವಯದ ಕೊರತೆಯಿಂದಾಗಿ ಸಮಾಜದಲ್ಲಿ ವಿಕೃತ ಮನಸ್ಸುಗಳು ಹೆಚ್ಚಾಗಿವೆ. ರಾಜಕಾರಣದ ಆತಂಕಕಾರಿ ಬೆಳವಣಿಗೆಯಿಂದಾಗಿ ಸಂಬಂಧಗಳು ದೂರವಾಗುತ್ತಿವೆ. ಮಾನವೀಯ ಮೌಲ್ಯಗಳ ಕೊರತೆ, ಸಹಕಾರ, ಸಹಬಾಳ್ವೆ ಕೊರತೆಯಿಂದಾಗಿ ರಕ್ತ ಸಂಬಂಧಗಳು ಒಡೆದುಹೋಗಿವೆ. ಹಳ್ಳಿಗಳಲ್ಲಿ ಆಚರಿಸುತ್ತಿದ್ದ ದೇಸಿ ಸಂಸ್ಕೃತಿಗಳಾದ ಹಬ್ಬ, ಹರಿದಿನಗಳು ದೂರ ಸರಿದಿವೆ’ ಎಂದರು.

ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ‘ಸಮೃದ್ಧವಾದ, ಸಂತೋಷದಿಂದ ಆಚರಿಸುತ್ತಿದ್ದ ಯುಗಾದಿ ಕಣ್ಮರೆಯಾಗಿದೆ. ಸಂಪ್ರಾದಾಯ, ಸಂಸ್ಕೃತಿಗೆ ಮೇಟಿ ಇಲ್ಲದಂತಾಗಿ ದಿಕ್ಕು ತಪ್ಪುತ್ತಿದೆ. ಸ್ವಯಂಕೃತ ಅಪರಾಧದಿಂದ ಮೂಲ ಸಂಸ್ಕೃತಿಯನ್ನು ಬಲಿ ತೆಗೆದುಕೊಳ್ಳುತ್ತಿದ್ದೇವೆ. ಅವಿಭಕ್ತ ಕುಟುಂಬಗಳ ಆಚರಣೆಯಿಂದ ದೂರ ಉಳಿದು ವಿಭಕ್ತ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದೇವೆ. ಒತ್ತಡದ ಬದುಕಿಗೆ ಒತ್ತುಕೊಟ್ಟು ಸ್ನೇಹ, ಸಂಬಂಧಗಳಿಂದಕಳಚಿಕೊಳ್ಳಲು ಯತ್ನಿಸುತ್ತಿದ್ದೇವೆ’ ಎಂದು ವಿಷಾದಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಮತ್ತೀಕೆರೆ ಬಿ.ಚೆಲುವರಾಜು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪ ಪ್ರಾಂಶುಪಾಲ ಚ.ಶಿ.ವೆಂಕಟೇಗೌಡ, ಪ್ರಗತಿಪರ ರೈತ ಮೊಗೇನಹಳ್ಳಿ ಪುಟ್ಟಸ್ವಾಮಿಗೌಡ, ಗಾಯಕ ಬೇವೂರು ರಾಮಯ್ಯ, ತಾಲ್ಲೂಕು ಕಸಾಪ ಕಾರ್ಯದರ್ಶಿ ಮಂಜೇಶ್ ಬಾಬು, ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ ಇದ್ದರು.

ಕವಿಗೋಷ್ಠಿಯಲ್ಲಿ ಎಲೆಕೇರಿ ಶಿವರಾಂ, ಚೌ.ಪು.ಸ್ವಾಮಿ, ಸೀಬನಹಳ್ಳಿ ಪಿ.ಸ್ವಾಮಿ, ಎಂ.ಟಿ.ನಾಗರಾಜು, ಮಂಗಾಡಹಳ್ಳಿ ಗೋಪಾಲ್, ವಿ.ಪಿ.ವರದರಾಜು, ಸಿ.ಎಸ್.ಸಿದ್ದಲಿಂಗಯ್ಯ, ಅಬ್ಬೂರು ಶ್ರೀನಿವಾಸ್ ಕವಿತೆ ವಾಚಿಸಿದರು. ಗಾಯಕರಾದ ಗೋವಿಂದಹಳ್ಳಿ ಶಿವಣ್ಣ, ಎಚ್.ಪುಟ್ಟರಾಜು, ಕೆ.ಎಚ್.ಕುಮಾರ್, ಜಾಗೃತಿ ಪುಟ್ಟಸ್ವಾಮಿ ಗೀತಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.