ADVERTISEMENT

ಯುಜಿಡಿ ಕಾಮಗಾರಿ ವಿಳಂಬ: ಅಧಿಕಾರಿಗಳಿಗೆ ಶಾಸಕ ಸಿ.ಪಿ. ಯೋಗೇಶ್ವರ್ ತರಾಟೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 5:14 IST
Last Updated 28 ಜನವರಿ 2025, 5:14 IST
ಚನ್ನಪಟ್ಟಣದ ನಗರಸಭೆಯ ಸಭಾಂಗಣದಲ್ಲಿ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಶಾಸಕ ಸಿ.ಪಿ. ಯೋಗೇಶ್ವರ್ ಮಾತನಾಡಿದರು. ಅಧ್ಯಕ್ಷ ವಾಸಿಲ್ ಆಲಿಖಾನ್, ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಪೌರಾಯುಕ್ತ ಮಹೇಂದ್ರ ಇದ್ದರು
ಚನ್ನಪಟ್ಟಣದ ನಗರಸಭೆಯ ಸಭಾಂಗಣದಲ್ಲಿ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಶಾಸಕ ಸಿ.ಪಿ. ಯೋಗೇಶ್ವರ್ ಮಾತನಾಡಿದರು. ಅಧ್ಯಕ್ಷ ವಾಸಿಲ್ ಆಲಿಖಾನ್, ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಪೌರಾಯುಕ್ತ ಮಹೇಂದ್ರ ಇದ್ದರು   

ಚನ್ನಪಟ್ಟಣ: ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ನಗರದ ಒಳಚರಂಡಿ ಯೋಜನೆ (ಯುಜಿಡಿ) ಕಾಮಗಾರಿ ಇಷ್ಟು ವರ್ಷ ವಿಳಂಬವಾಗಲು ಕಾರಣವೇನು ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಸೋಮವಾರ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಮಗಾರಿ ಆರಂಭಿಸಿ ಹಲವಾರು ವರ್ಷಗಳಾಗಿವೆ. ಶೀಘ್ರ ಕಾಮಗಾರಿ ಮುಗಿಸಿ ಎಂದು ತಾಕೀತು ಮಾಡಿದರು.

ನಗರದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಮುಂದೆ ಬೇಸಿಗೆ ಬಂದಾಗ ಸಮಸ್ಯೆ ಎದುರಾಗಬಹುದು. ಅದಕ್ಕೆ ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ಈಗಾಗಲೇ ನಗರಕ್ಕೆ 26 ಎಂಎಲ್ ಡಿ ನೀರು ಅವಶ್ಯಕವಾಗಿದೆ ಎಂದು ಜಲಮಂಡಳಿಗೆ ಪತ್ರ ಬರೆಯಲಾಗಿದೆ. ಆದರೆ ಇಲ್ಲಿಯವರೆಗೆ ಅದು ಕಾರ್ಯಗತವಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಜಲಜೀವನ್ ಯೋಜನೆ ಕಾಮಗಾರಿಗಳಿಂದ ರಸ್ತೆ ಹಾಳಾಗಿವೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಣುತ್ತಿಲ್ಲ. ನಗರದ ರಾಜಕಾಲುವೆಯಲ್ಲಿ ಹೂಳು ತುಂಬಿ ನಿಂತಿದೆ. ಇದರ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂಪರ್ಕ ರಸ್ತೆಗಳಲ್ಲಿ ಕಸ ತುಂಬಿದೆ ಎಂದು ಕೆಲವು ಸದಸ್ಯರು ಆರೋಪಿಸಿದರು.

ಪಾದಚಾರಿ ರಸ್ತೆಗಳಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇವುಗಳನ್ನು ಬೀದಿ ಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ ಎಂದು ಕೆಲವು ಸದಸ್ಯರು ಆರೋಪಿಸಿದರು.  

ನಗರದಲ್ಲಿ ಕುಡಿಯುವ ನೀರು, ಕಸದ ಸಮಸ್ಯೆ, ಉದ್ಯಾನವನ ನಿರ್ವಹಣೆ, ಇ–ಖಾತೆ ಸಮಸ್ಯೆ ಸೇರಿದಂತ ಹಲವು ವಿಚಾರ  ಚರ್ಚೆಯಾದವು.

ಅಧ್ಯಕ್ಷ ವಾಸಿಲ್ ಆಲಿಖಾನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶೀನಿವಾಸಮೂರ್ತಿ, ಪೌರಾಯುಕ್ತ ಮಹೇಂದ್ರ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT