ADVERTISEMENT

ರಾಮನಗರ | 3 ವರ್ಷದೊಳಗೆ ವಿ.ವಿ ಸಂಕೀರ್ಣ ನಿರ್ಮಾಣ

ವಿ.ವಿ ನಿರ್ಮಾಣಕ್ಕೆ ಶಾಸಕ ಹುಸೇನ್ ಭೂಮಿಪೂಜೆ; ಕಾಲೇಜು ಇಲ್ಲೇ ಇರುವ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 6:49 IST
Last Updated 29 ಸೆಪ್ಟೆಂಬರ್ 2023, 6:49 IST
ರಾಮನಗರದ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಕೀರ್ಣಕ್ಕೆ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ. ಲಿಂಗಪ್ಪ, ಮಾಜಿ ಶಾಸಕ ಕೆ. ರಾಜು, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಸದಸ್ಯ ಕೆ. ಶೇಷಾದ್ರಿ ಶಶಿ ಹಾಗೂ ಇತರರು ಇದ್ದಾರೆ
ರಾಮನಗರದ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಕೀರ್ಣಕ್ಕೆ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ. ಲಿಂಗಪ್ಪ, ಮಾಜಿ ಶಾಸಕ ಕೆ. ರಾಜು, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಸದಸ್ಯ ಕೆ. ಶೇಷಾದ್ರಿ ಶಶಿ ಹಾಗೂ ಇತರರು ಇದ್ದಾರೆ   

ರಾಮನಗರ: ‘ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜು ಒಳಗೊಂಡ ಸಂಕೀರ್ಣವು 36 ತಿಂಗಳೊಳಗೆ ತಲೆ ಎತ್ತಲಿದೆ. ಜಿಲ್ಲೆಯ ಜನರ ಬಹುದಿನಗಳ ಕನಸಿನ ಯೋಜನೆಯು ನನಸಾಗಲಿದೆ’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ನಗರದ ಹೊರವಲಯದ ಅರ್ಚಕರಹಳ್ಳಿಯಲ್ಲಿರುವ ವಿ.ವಿ ಜಾಗದಲ್ಲಿ ಗುರುವಾರ ವಿ.ವಿ ಸಂಕೀರ್ಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಇದುವರೆಗೆ ಹಲವರು ಬಂದು ಭೂಮಿಪೂಜೆ ಮಾಡಿದ್ದಾರೆ. ನಾವು ಪೂಜೆ ಮಾಡಿ ಬಿಡುವರಲ್ಲ. ಕೆಲಸ ಮಾಡಿ ಮುಗಿಸುವವರು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ವಿ.ವಿ.ಯ ಯೋಜನಾ ಮೊತ್ತ ₹600 ಕೋಟಿ ಪೈಕಿ, ಗುತ್ತಿಗೆದಾರರಿಗೆ ಈಗಾಗಲೇ ₹300 ಕೋಟಿ ಬಿಡುಗಡೆಯಾಗಿದೆ. ಹಿಂದಿನ ನೀಲನಕ್ಷೆ ಪ್ರಕಾರವೇ ಸಂಕೀರ್ಣ ನಿರ್ಮಾಣವಾಗಲಿದೆ. ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಿರುವ ಸ್ಟಾರ್ ಇನ್‌ಫ್ರಾಟೆಕ್‌ ಕಂಪನಿಯವರೇ ಗುತ್ತಿಗೆ ಪಡೆದಿದ್ದಾರೆ. ಇಂದಿನಿಂದಲೇ ಕೆಲಸ ಆರಂಭಿಸಿ, 2026ರ ಫೆಬ್ರುವರಿ ಹೊತ್ತಿಗೆ ಪೂರ್ಣಗೊಳಿಸಲಿದ್ದಾರೆ’ ಎಂದರು.

ADVERTISEMENT
ವೈದ್ಯಕೀಯ ಕಾಲೇಜು ಸ್ಥಳಾಂತರವಾಗಿದೆ ಎಂದು ಬೊಬ್ಬಿಡುತ್ತಿರುವವರು ಜಿಲ್ಲೆಯ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಹೋದಾಗ ಹೋರಾಟ ಮಾಡಬೇಕಿತ್ತು
ಎಚ್‌.ಎ. ಇಕ್ಬಾಲ್ ಹುಸೇನ್, ಶಾಸಕ

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ‌. ಲಿಂಗಪ್ಪ ಮಾತನಾಡಿ, ‘ನಾಳೆಯಿಂದಲೇ ವಿ.ವಿ ನಿರ್ಮಾಣ ಕೆಲಸ ಆರಂಭವಾಗುವ ಆಶಾಭಾವನೆ‌ ಇದೆ. ಇಲ್ಲಿನ ಜಮೀನಿಗೆ ನಿಗದಿಪಡಿಸಿದ್ದ ಪರಿಹಾರದ ಹಣವನ್ನು ಕೆಲವರು ತೆಗೆದುಕೊಂಡರು. ಉಳಿದವರು ಹೆಚ್ಚು ಪರಿಹಾರಕ್ಕೆ ಒತ್ತಾಯಿಸಿ, ಕೋರ್ಟ್ ಮೊರೆ ಹೋಗಿದ್ದಾರೆ. ಅದೇನೇ ಇದ್ದರೂ, ರಾಮನಗರಕ್ಕೆ ಮಂಜೂರಾಗಿರುವ ಕಾಲೇಜು‌ ಇಲ್ಲೇ ನಿರ್ಮಾಣವಾಗಲಿದೆ’ ಎಂದು ಹೇಳಿದರು.

‘ಸರ್ಕಾರ ಬೇಕಿದ್ದರೆ ಕನಕಪುರ, ಕೊಳ್ಳೆಗಾಲ, ಮಳವಳ್ಳಿ ಸೇರಿದಂತೆ ಎಲ್ಲಿ ಬೇಕಾದರೂ ಕಾಲೇಜು ಮಾಡಲಿ. ನಮಗೆ ಆಸ್ಪತ್ರೆ ಸೌಲಭ್ಯವಿರುವ ವೈದ್ಯಕೀಯ ಕಾಲೇಜು ನಿರ್ಮಾಣವಾಗಬೇಕಷ್ಟೆ. ಕಾಲೇಜಿನಲ್ಲಿ ಸ್ಥಳೀಯರಿಗೇ ಸೀಟು ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ನೀಟ್ ಪರೀಕ್ಷೆ ಆಧರಿಸಿ ಸೀಟು‌ ಹಂಚಿಕೆ ನಡೆಯಲಿದೆ’ ಎಂದರು.

ವಿಶ್ವವಿದ್ಯಾಲಯವಿಲ್ಲದೆ ಕಾಲೇಜು ಇರಲು ಸಾಧ್ಯವಿಲ್ಲ. ಹಾಗಾಗಿ ಎರಡೂ ಒಟ್ಟಿಗೆ ಇರಲಿವೆ. ಈ ವಿಷಯದಲ್ಲಿ ನಾವೆಲ್ಲರೂ ಆಶಾವಾದಿಗಳಾಗಿರೋಣ
ಸಿ.ಎಂ. ಲಿಂಗಪ್ಪ, ವಿಧಾನ ಪರಿಷತ್ ಮಾಜಿ

ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸೋಮಶೇಖರ್ ಮಣಿ, ನಗರಸಭೆ ಸದಸ್ಯ ಕೆ. ಶೇಷಾದ್ರಿ ಶಶಿ, ಕಾಂಗ್ರೆಸ್ ಮುಖಂಡರಾದ ಜಿಯಾವುಲ್ಲಾ‌ ಖಾನ್, ಕೆ. ರಮೇಶ್, ನಗರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು‌ ಇದ್ದರು.

ರಾಮನಗರದ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಭೂಮಿ ನೀಡಿದ ರೈತರನ್ನು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಸನ್ಮಾನಿಸಿದರು 
ರಾಮನಗರದ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಭೂಮಿ ನೀಡಿದ ರೈತರಿಗೆ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಸನ್ಮಾನ ಮಾಡಿದ್ದಕ್ಕೆ ಗ್ರಾಮದ ಕೆಲ ರೈತರು ಆಕ್ಷೇಪ ವ್ಯಕ್ತಪಡಿಸಿದರು

ಸನ್ಮಾನಕ್ಕೆ ಆಕ್ರೋಶ; ಸಮಾಧಾನಪಡಿಸಿದ ಶಾಸಕ

ವಿ.ವಿ.ಗೆ ಜಮೀನು ಕೊಟ್ಟ ಕೆಲ ರೈತರಿಗೆ ಶಾಸಕ ಇಕ್ಬಾಲ್ ಹುಸೇನ್ ಅವರು ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ‘ಜಮೀನಿನ ಪರಿಹಾರದ ಕುರಿತು ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಅದಿನ್ನೂ ಬಗೆಹರಿದಿಲ್ಲ. ಆದರೂ ಎಲ್ಲವೂ ಸರಿಹೋಗಿದೆ ಎಂದು ಕೆಲವರನ್ನು ಕರೆದು ಸನ್ಮಾನಿಸಿದರೆ ಹೇಗೆ?’ ಎಂದು ವೇದಿಕೆ ಬಳಿ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ರೈತರ ನಡುವೆಯೇ ಪರಸ್ಪರ ಮಾತಿನ ಚಕಮಕಿ ನಡೆದು ತಳ್ಳಾಟವೂ ನಡೆಯಿತು. ಪೊಲೀಸರನ್ನು ಕೂಡಲೇ ಅವರನ್ನು ಸುತ್ತುವರಿದು ಪರಿಸ್ಥಿತಿ ಕೈ ಮೀರದಂತೆ ನೋಡಿಕೊಂಡರು. ನಂತರ ಅವರೊಂದಿಗೆ ಶಾಸಕರು ‘ಸರ್ಕಾರದ ಮಟ್ಟದಲ್ಲಿ ನಿಮ್ಮ ಬೇಡಿಕೆಗಳನ್ನು ಬಗೆಹರಿಸುವೆ. ಕೋರ್ಟ್ ಹೋರಾಟಕ್ಕೂ ನನ್ನ ಬೆಂಬಲವಿದ್ದು ಅಲ್ಲಿನ ಆದೇಶದಂತೆ ನಿಮಗೆ ಪರಿಹಾರ ಒದಗಿಸಲಾಗುವುದು’ ಎಂದು ಸಮಾಧಾನಪಡಿಸಿದರು.

ಸಚಿವರು ಸಂಸದರ ಗೈರು ಭೂಮಿ ಪೂಜೆ ಕಾರ್ಯಕ್ರಮಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸಂಸದ ಡಿ.ಕೆ. ಸುರೇಶ್ ಭಾಗವಹಿಸಲಿದ್ದಾರೆ ಎಂದು ಶಾಸಕರು ಹೇಳಿದ್ದರು. ಸಚಿವರಿಗೆ ಸ್ವಾಗತ ಕೋರಿ ನಗರದಲ್ಲಿ ಹಲವೆಡೆ ಫ್ಲೆಕ್ಸ್ ಕೂಡ ಹಾಕಲಾಗಿತ್ತು. ಆದರೆ ಎಲ್ಲರೂ ಗೈರಾಗಿದ್ದರು. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಅನುಪಸ್ಥಿತಿ ಜಿಲ್ಲಾಡಳಿತವೂ ಕಾರ್ಯಕ್ರಮದಿಂದ ದೂರ ಉಳಿದಿರುವುದಕ್ಕೆ ಸಾಕ್ಷಿಯಾಗಿತ್ತು. ವಿ.ವಿ ಪ್ರತಿನಿಧಿಗಳು ಸಹ ಇರಲಿಲ್ಲ. ವೇದಿಕೆಯಲ್ಲಿ ಶಾಸಕರ ಜೊತೆಗೆ ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಕಾಂಗ್ರೆಸ್ ಮುಖಂಡರು ಇದ್ದರು. ಕಾರ್ಯಕ್ರಮಕ್ಕೆ ಆಹ್ವಾನಪತ್ರಿಕೆ ಕೂಡ ಮಾಡಿಸಿರಲಿಲ್ಲ.

ನಿವೇಶನ ಉದ್ಯೋಗಕ್ಕೆ ಒತ್ತಾಯ ಜಮೀನು ಕೊಟ್ಟಿರುವವರಿಗೆ ವಿ.ವಿ.ಯಲ್ಲಿ ಉದ್ಯೋಗ ಕೊಡಬೇಕು ಶೇ 50:50 ಅನುಪಾತದಲ್ಲಿ ನಿವೇಶನ ನೀಡಬೇಕು ಅರ್ಚಕರಹಳ್ಳಿ ಶಾಲೆ ಮತ್ತು ಕ್ರೀಡಾಂಗಣಕ್ಕೆ ಐದು ಎಕರೆ ಜಮೀನು ಕೊಡಬೇಕು ವೀರಶೈವ ರುದ್ರಭೂಮಿಗೆ ಜಮೀನು ಕಳೆದುಕೊಂಡವರಿಗೆ ಬದಲಿ ನಿವೇಶನ ಹಂಚಬೇಕು ಗ್ರಾಮದ ಮಲ್ಲೇಶ್ವರ ದೇವಸ್ಥಾನ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಕ್ಕೆ 2 ಎಕರೆ ಹಾಗೂ ಬಸವಶ್ರೀ ಗೋಶಾಲೆ ಮತ್ತು ಮಠ ನಿರ್ಮಿಸಲು 5 ಎಕರೆ ಒದಗಿಸಬೇಕು ಎಂದು ಅರ್ಚಕರಹಳ್ಳಿ ಗ್ರಾಮಭಿವೃದ್ಧಿ ಸಂಸ್ಥೆಯವರು ಶಾಸಕರಿಗೆ ಮನವಿ ಸಲ್ಲಿಸಿದರು.  ಅದಕ್ಕೂ ಮುಂಚೆ ಗ್ರಾಮದ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕರೊಂದಿಗೆ ರೈತರು ತಮ್ಮ ಅಹವಾಲು ತೋಡಿಕೊಂಡರು. 

ಅದಕ್ಕೆ ಪ್ರತಿಕ್ರಿಯಿಸಿದ ಹುಸೇನ್ ಅವರು ‘ಮುಂದಿನ ವಾರ ಗ್ರಾಮಕ್ಕೆ ಬಂದು ಜಮೀನು ಕಳೆದುಕೊಂಡವರ ಜೊತೆ ಮಾತುಕತೆ ನಡೆಸುವೆ. ಸರ್ಕಾರದ ಮಟ್ಟದಲ್ಲಿ ಆಗಬಹುದಾದ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಡುವೆ. ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಮಾತು‌ ಕೊಟ್ಟಿರುವೆ’ ಎಂದ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.