
ಮಾಗಡಿ: ನಾಡಪ್ರಭು ಕೆಂಪೇಗೌಡ ಕಾಲದ ಕೆರೆಗಳಿಗೆ ಈಗ ಮತ್ತೆ ಜೀವಜಲ ಹರಿದು ಬರಲಿದೆ. ಹಲವು ದಶಕಗಳಿಂದ ನೀರು ಕಾಣದೆ ಬತ್ತಿದ್ದ ಕೆರೆಗಳಿಗೆ ವೈಜಿ ಗುಡ್ಡ ಜಲಾಶಯದಿಂದ ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡುತ್ತಿದ್ದು, ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡುವಂತಾಗಿದೆ. ಈ ಯೋಜನೆ ಪೂರ್ಣಗೊಂಡರೆ ಕೃಷಿ ಚಟುವಟಿಕೆಗಳಿಗೆ ಹೊಸ ಸುಗ್ಗಿ ಕಾಲ ಆರಂಭವಾಗಲಿದೆ.
ಹೌದು; ವೈಜಿಗುಡ್ಡ ಜಲಾಶಯದ ಮೂಲಕ ಹಲವು ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡುತ್ತಿದ್ದು, ₹92 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಹಲವು ವರ್ಷಗಳಿಂದ ನೀರು ಕಾಣದ ಕೆರೆಗಳಿಗೆ ಈಗ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನ ನಡೆದಿದೆ. ಇದಕ್ಕೆ ರೈತರು ಸ್ವಾಗತ ಕೋರಿದ್ದಾರೆ. ಎರಡು ವರ್ಷಗಳಲ್ಲಿ ಈ ಭಾಗದ ಕೆರೆಗಳಿಗೆ ನೀರು ತುಂಬಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗು ಕಾಲ ಸಮೀಪದಲ್ಲಿದೆ. ವೈಜಿಗುಡ್ಡ ಜಲಾಶಯದ ಅಕ್ಕಪಕ್ಕದ ಕೆರೆಗಳಿಗೆ ಈಗ ಜೀವಜಲ ಬರಲಿದೆ. ಯೋಜನೆ ಪೂರ್ಣವಾದರೆ ಮತ್ತೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ತೋಟಗಾರಿಕೆ, ತರಕಾರಿ, ರೇಷ್ಮೆ, ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಹೆಚ್ಚು ಅನುಕೂಲವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
₹92 ಕೋಟಿ ವೆಚ್ಚದ ನೀರಾವರಿ ಯೋಜನೆ: ವೈಜಿಗುಡ್ಡ ಜಲಾಶಯದಿಂದ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹92 ಕೋಟಿ ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಪೈಪ್‌ಲೈನ್ ಮೂಲಕ ಆಯ್ದ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದಾಗಿದೆ.
ಯೋಜನೆಯಲ್ಲಿ ಒಳಗೊಂಡ ಕೆರೆಗಳು: ಚಕ್ರಭಾವಿ, ಸೀಗೆಕುಪ್ಪೆ, ಹುಲಿಕಟ್ಟೆ, ಅಗಲಕೋಟೆ, ಮಠದಪಾಳ್ಯ, ಮತ್ತಿಕೆರೆ, ಗಟ್ಟಿಪುರ, ಬೆಳಗವಾಡಿ, ಗೆಜ್ಜೆಗಾರಕುಪ್ಪೆ, ಕೊಟ್ಟಗಾರಹಳ್ಳಿ, ನೇರಲವಾಡಿ, ಮತ್ತು ಸಾದಮಾರನಹಳ್ಳಿ ಸಮೀಪದ ಶ್ರೀರಂಗ ಆಣೆಕಟ್ಟು ಸೇರಿದಂತೆ ಹಲವು ಕೆರೆಗಳನ್ನು ಈ ಯೋಜನೆಯಡಿ ತುಂಬಿಸಲಾಗುತ್ತದೆ. ಈ ಯೋಜನೆಯು ಮಾಗಡಿ ತಾಲ್ಲೂಕು ಸೇರಿ ರಾಮನಗರ ಮತ್ತು ಕುಣಿಗಲ್ ತಾಲ್ಲೂಕಿನ ಕೆಲ ಕೆರೆ ಭಾಗಗಳನ್ನು ಒಳಗೊಂಡಿದೆ. ಮೂರು ತಾಲ್ಲೂಕಿನ ರೈತರಿಗೂ ಅನುಕೂಲವಾಗಲಿದೆ.
ಯೋಜನೆಯ ಕಾಲಮಿತಿ: ಯೋಜನೆಯನ್ನು ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿದೆ. ಪೈಪ್‌ಲೈನ್ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಯ ಮಾದರಿಯಲ್ಲೇ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ.
ರೈತರಿಗೆ ಹೆಚ್ಚು ಅನುಕೂಲ; ಕೃಷಿ ಚಟುವಟಿಕೆಗೆ ಆದ್ಯತೆ: ಈ ಯೋಜನೆ ಅನುಷ್ಠಾನವಾದರೆ ರೈತರಿಗೆ ವರದಾನವಾಗಲಿದೆ. ಅಂತರ್ಜಲ ವೃದ್ಧಿ, ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕವಾಗಲಿದೆ. ಮಳೆಯನ್ನೇ ಆಧರಿಸಿ ಹೆಚ್ಚಿನ ರೈತರು ರಾಗಿ ಬೆಳೆಯನ್ನೇ ನಂಬಿಕೊಂಡಿದ್ದು, ಕೆರೆಗಳಿಗೆ ನೀರು ಬಂದರೆ ರಾಗಿ ಜೊತೆಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ. ಪ್ರಸ್ತುತ ರೈತರು ವರ್ಷಕ್ಕೆ ಒಂದು ಬೆಳೆಯನ್ನು ಮಾತ್ರ ಬೆಳೆಯಲು ಅವಕಾಶವಿದೆ. ಕೆರೆಗಳಿಗೆ ನೀರು ಬಂದರೆ ವರ್ಷಕ್ಕೆ ಮೂರು ಬೆಳೆ ಬೆಳೆಯುವ ನಿರೀಕ್ಷೆ ಮಾಡಬಹುದು. ಇದರಿಂದ ಕೃಷಿಯಲ್ಲಿ ಆದಾಯದ ಜೊತೆಗೆ ರೈತರಿಗೆ ವರ್ಷವಿಡೀ ಕೆಲಸ ಸಿಗುವಂತಾಗಲಿದೆ. ರೈತರ ಪಾಲಿಗೆ ಈ ಯೋಜನೆ ವರದಾನವಾಗಲಿದೆ.
ಅಂತರ್ಜಲ ಹೆಚ್ಚಳದ ಲಾಭ: ಕೆರೆಗಳಿಗೆ ನೀರು ತುಂಬಿಸುವುದರಿಂದ ಬೋರ್‌ವೆಲ್‌ಗಳು ಮರುಪೂರಣಗೊಳ್ಳುತ್ತವೆ. ಹಿಂದೆ 1200-1400 ಅಡಿ ಆಳಕ್ಕೆ ಹೋಗಿದ್ದ ನೀರು, ಈಗ 300-400 ಅಡಿಗಳಿಗೆ ಲಭ್ಯವಾಗುವ ನಿರೀಕ್ಷೆಯಿದೆ. ನೀರು ಸಿಕ್ಕರೆ ರೈತರು ಸೋಮಾರಿಯಾಗದೆ ಕೃಷಿಯಲ್ಲಿ ತೊಡಗುತ್ತಾರೆ ಮತ್ತು ಹಳ್ಳಿಗಳಲ್ಲೇ ಪಟ್ಟಣದ ಮಟ್ಟದ ಜೀವನ ಮಟ್ಟ ಸುಧಾರಿಸಲಿದೆ.
ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು 'ಆಧುನಿಕ ಭಗೀರಥ' ಎಂದು ಬಣ್ಣಿಸಲಾಗಿದೆ. ಚುನಾವಣೆಯಲ್ಲಿ ಸೋತರೂ ಎದೆಗುಂದದೆ ಅಧಿಕಾರಿಗಳೊಂದಿಗೆ ಸತತ ಚರ್ಚೆ ನಡೆಸಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಹೈನುಗಾರಿಕೆಗೆ ಹೆಚ್ಚು ಅನುಕೂಲವಾಗಲಿದೆ. ಒಂದು ಲಕ್ಷ ಹೆಚ್ಚುವರಿ ಹಾಲು ಉತ್ಪಾದನೆ ಮಾಡಲು ಈ ಯೋಜನೆ ಸಾಕಷ್ಟು ಅನುಕೂಲವಾಗುತ್ತದೆ. ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಲಾಭವಾಗಲಿದೆ. ರೈತರು ವರ್ಷಕ್ಕೆ ಮೂರು ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಒಣಗುತ್ತಿರುವ ಅಡಿಕೆ, ಬಾಳೆ, ತೆಂಗು, ಸಪೋಟ ತೋಟಗಳಿಗೆ ಜೀವಜಲ ಸಿಗಲಿದೆ. ರೇಷ್ಮೆ ಬೆಳೆದು ರೈತರು ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಎನ್ನುತ್ತಾರೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಶೋಕ್.
ಕಾಂಗ್ರೆಸ್ ಸರ್ಕಾರದ ಯೋಜನೆಯಿಂದ ರೈತರಿಗೆ ಅನುಕೂಲ: ‘ಕಾಂಗ್ರೆಸ್ ಸರ್ಕಾರದ ಯೋಜನೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಮಾಡಬಾಳು ಕಸಬಾ ಹೋಬಳಿಯ ಎಲ್ಲ ಕೆರೆಗಳಿಗೂ ನೀರು ಬರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಗ್ಯಾರಂಟಿ ಜೊತೆ ಜೊತೆಗೆ ರೈತರಿಗೆ ಅನುಕೂಲವಾಗುವ ಕೆಲಸಗಳಾಗುತ್ತಿವೆ. ಚನ್ನಪಟ್ಟಣ ರೀತಿಯಲ್ಲೇ ಮಾಗಡಿ ತಾಲ್ಲೂಕಿನಲ್ಲೂ ಕೆರೆಗಳು ತುಂಬಲಿದೆ. ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ’ ಎನ್ನುತ್ತಾರೆ ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ.
ಮಾ.4ರಂದು ಶಂಕುಸ್ಥಾಪನೆ
ಮಾರ್ಚ್ 4ರಂದು ಬೆಳಗ್ಗೆ 10:30ಕ್ಕೆ ತಾಲ್ಲೂಕಿನ ಚಕ್ರಭಾವಿ ಸರ್ಕಾರಿ ಶಾಲಾ ಆವರಣದಲ್ಲಿ ಕೆರೆಗಳಿಗೆ ನೀರು ತುಂಬಿಸುವ ವೈಜಿಗುಡ್ಡ ಯೋಜನೆಯ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೆರವೇರಿಸಲಿದ್ದಾರೆ.
ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ರಾಜ್ಯ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಎಚ್.ಎಂ.ರೇವಣ್ಣ ಅಧ್ಯಕ್ಷತೆಯನ್ನು ಶಾಸಕ ಬಾಲಕೃಷ್ಣ ವಹಿಸಿಕೊಂಡಿದ್ದಾರೆ. ಕುಣಿಗಲ್ ಶಾಸಕ ರಂಗನಾಥ್ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಎಂಎಲ್‌ಸಿ ಎಸ್.ರವಿ ಪುಟ್ಟಣ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು 6 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಬಹು ವರ್ಷಗಳ ನಂತರ ರೈತರಿಗೆ ವರದಾನವಾಗಲಿರುವ ಈ ಮಹತ್ವಾಕಾಂಕ್ಷಿ ಯೋಜನೆ ಶಂಕುಸ್ಥಾಪನೆ ಮೂಲಕ ಹೋಬಳಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ರೈತರಿಗೆ ವರದಾನ
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಶ್ರಮದಿಂದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದರಿಂದ ರೈತರು ತರಕಾರಿ ಅಡಿಕೆ ತೆಂಗು ಮಾವು ಬೆಳೆ ಉಳಿಸಿಕೊಳ್ಳಲು ಸಾಕಷ್ಟು ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟ ಹೆಚ್ಚಾಗುವುದರಿಂದ ರೈತರಿಗೆ ಈ ಯೋಜನೆ ಬಹಳಷ್ಟು ಪ್ರಯೋಜನವಾಗಲಿದೆ. ಎಚ್.ಸಿ.ಬಾಲಕೃಷ್ಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.