ಚನ್ನಪಟ್ಟಣ: ಮೈಸೂರು ದಸರಾಕ್ಕೂ ಚನ್ನಪಟ್ಟಣಕ್ಕೂ ಅವಿನಾಭಾವ ಸಂಬಂಧವಿದೆ. ದಸರಾ ಗೊಂಬೆ ಪ್ರದರ್ಶನದಲ್ಲಿ ಚನ್ನಪಟ್ಟಣದ ಗೊಂಬೆಗಳು ಗಮನ ಸೆಳೆದರೆ, ಜಂಬೂಸವಾರಿ ಆರಂಭಕ್ಕೂ ಮೊದಲು ನಡೆಯುವ ವಜ್ರಮುಷ್ಠಿ ಕಾಳಗದಲ್ಲಿ ಪ್ರತಿವರ್ಷ ಚನ್ನಪಟ್ಟಣದ ಜಟ್ಟಿಯೊಬ್ಬರು ಭಾಗವಹಿಸುವ ಮೂಲಕ ಗಮನ ಸೆಳೆಯುತ್ತಾರೆ.
ಈ ವರ್ಷ ಚನ್ನಪಟ್ಟಣದ ಜಗ್ಗ ಹಾಗೂ ಸರೋಜಾ ದಂಪತಿ ಪುತ್ರ ರಾಘವೇಂದ್ರ ಜಟ್ಟಿ ವಜ್ರಮುಷ್ಠಿ ಕಾಳಗ ನಡೆಸಲು ಸಿದ್ಧರಾಗಿದ್ದಾರೆ.
ವಜ್ರಮುಷ್ಠಿ ಕಾಳಗದಲ್ಲಿ ಜಟ್ಟಿಗಳ ತಲೆಯಿಂದ ಚಿಮ್ಮುವ ರಕ್ತವನ್ನು ಮಹಾರಾಜರ ಖಡ್ಗಕ್ಕೆ ಅರ್ಪಿಸಿ ಪೂಜೆ ಸಲ್ಲಿಸಿದ ನಂತರ ಮೈಸೂರು ಜಂಬೂಸವಾರಿ ಹೊರಡುವುದು ಪದ್ಧತಿ. ವಜ್ರಮುಷ್ಠಿ ಕಾಳಗ ಮುಗಿಯುವವರೆಗೂ ಜಂಬೂಸವಾರಿ ಹೊರಡುವುದಿಲ್ಲ ಎನ್ನುವುದು ವಿಶೇಷ. ಇಂತಹ ವಜ್ರಮುಷ್ಠಿ ಕಾಳಗದಲ್ಲಿ ಪ್ರತಿವರ್ಷ ಚನ್ನಪಟ್ಟಣದ ಜಟ್ಟಿಯೊಬ್ಬರು ಭಾಗವಹಿಸುವುದು ಚನ್ನಪಟ್ಟಣದ ಗರಿಮೆ.
ವಜ್ರಮುಷ್ಠಿ ಕಾಳಗದಲ್ಲಿ ಚನ್ನಪಟ್ಟಣ, ಮೈಸೂರು, ಚಾಮರಾಜನಗರ, ಬೆಂಗಳೂರಿನ ಜಟ್ಟಿಗಳು ಮಾತ್ರ ಪಾಲ್ಗೊಂಡು ತಮ್ಮ ಶಕ್ತಿ ಪ್ರದರ್ಶಿಸುವುದು ವಾಡಿಕೆ. ಇಲ್ಲಿ ಮಾತ್ರ ಗರಡಿಮನೆಗಳಿದ್ದು, ಇಲ್ಲಿ ತಯಾರಾಗುವ ಜಟ್ಟಿಗಳು ಮಾತ್ರವೇ ಪ್ರತಿವರ್ಷದ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.
ನಗರದ ಜಟ್ಟಿಗರ ಬೀದಿಯಲ್ಲಿರುವ ಗರಡಿಮನೆಯಲ್ಲಿ ಜಟ್ಟಿಗಳ ತಯಾರಿ ನಡೆಯುತ್ತದೆ. ಪ್ರತಿವರ್ಷ ಒಬ್ಬರನ್ನು ಮಾತ್ರ ಕಾಳಗಕ್ಕೆ ಕಳುಹಿಸುವ ಅವಕಾಶವಿದೆ. ಈ ಬಾರಿ ರಾಘವೇಂದ್ರ ಜಟ್ಟಿ ಅವರಿಗೆ ಈ ಅವಕಾಶ ಲಭಿಸಿದೆ. ಜಟ್ಟಿಗಳ ತಂತ್ರಗಳ ಆಧಾರದ ಮೇಲೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ ಎಂದು ಗರಡಿಮನೆಯ ಮುಖ್ಯಸ್ಥ ಉಸ್ತಾದ್ ಪುರುಷೋತ್ತಮ ಜಟ್ಟಿ ತಿಳಿಸಿದರು.
‘ನಮ್ಮ ಕುಲದವರು ತಲೆಮಾರುಗಳಿಂದ ವಜ್ರಮುಷ್ಠಿ ಕಾಳಗದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಮೈಸೂರು ಮಹಾರಾಜರು ಈ ಕಲೆಯನ್ನು ಬೆಳೆಸಿದ್ದಾರೆ. ತಾತ ಮೈಸೂರು ಮಹಾರಾಜರ ಜೊತೆ ಅವಿನಾಭಾವ ಒಡನಾಟ ಇಟ್ಟುಕೊಂಡಿದ್ದರು. ಮಹಾರಾಜರು ಈ ಕಲೆಯನ್ನು ಬೆಳೆಸಲು ಬೇಕಾದ ಪ್ರೋತ್ಸಾಹ ನೀಡುತ್ತಿದ್ದರು. ಈಗ ರಾಜಮಾತೆ ಪ್ರಮೋದಾದೇವಿ, ಯದುವೀರ್ ಒಡೆಯರ್ ಪ್ರೋತ್ಸಾಹ ಮುಂದುವರೆಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.
ವಜ್ರಮುಷ್ಠಿ ಕಾಳಗದ ವೈಶಿಷ್ಟ್ಯತೆ: ವಜ್ರಮುಷ್ಠಿ ಕಾಳಗ ಒಂದು ವೈಶಿಷ್ಟ್ಯಪೂರ್ಣ ಕಾಳಗ. ಜಂಬೂಸವಾರಿ ಆರಂಭಕ್ಕೂ ಮೊದಲು ಈ ಕಾಳಗ ನಡೆಯುತ್ತದೆ. ಎಲ್ಲಾ ಸ್ಪರ್ಧೆಗಳು ಮೈಸೂರು ಅರಮನೆಯ ಹೊರಗೆ ನಡೆದರೆ, ಈ ಕಾಳಗ ಮಾತ್ರ ಅರಮನೆಯ ಒಳಾಂಗಣದ ಕರಿಕಲ್ಲು ತೊಟ್ಟಿ ಮೈದಾನದಲ್ಲಿ ನಡೆಯುತ್ತದೆ.
ವಜ್ರಮುಷ್ಠಿ ಕಾಳಗದಲ್ಲಿ ಚನ್ನಪಟ್ಟಣ, ಮೈಸೂರು, ಚಾಮರಾಜನಗರ, ಬೆಂಗಳೂರಿನ ಜಟ್ಟಿಗಳು ಮಾತ್ರ ಪಾಲ್ಗೊಳ್ಳುತ್ತಾರೆ. ವಜ್ರನಖ ಎಂಬ ಆಯುಧವನ್ನು ಕೈಯಲ್ಲಿ ಧರಿಸಿ ಅಖಾಡಕ್ಕಿಳಿಯುವ ಜಟ್ಟಿಗಳಲ್ಲಿ ಮೊದಲು ಯಾವ ಜಟ್ಟಿ ಎದುರಾಳಿಯ ತಲೆಗೆ ಆಯುಧದಿಂದ ಹೊಡೆದು ರಕ್ತ ಚಿಮ್ಮಿಸುತ್ತಾರೋ ಆವರು ಗೆದ್ದಂತೆ. ರಕ್ತ ಚಿಮ್ಮಿಸುವ ವರೆಗೂ ಕಾಳಗ ಮುಂದುವರೆಯುತ್ತದೆ. ವಜ್ರನಖ ಆಯುಧದಿಂದ ತಲೆಗೆ ಹೊಡೆಸಿಕೊಳ್ಳದಂತೆ ತಪ್ಪಿಸಿಕೊಳ್ಳುವುದೇ ಈ ಕಾಳಗದ ತಂತ್ರ. ವಜ್ರಮುಷ್ಠಿ ಕಾಳಗ ಪ್ರಾಣಾಪಾಯವನ್ನು ತಂದೊಡ್ಡುವ ಕಾಳಗ ಎನ್ನುವುದು ಜಟ್ಟಿಗರ ಅಭಿಪ್ರಾಯವಾಗಿದೆ.
ರಾಘವೇಂದ್ರ ಜಟ್ಟಿ ಅವರು ಉಸ್ತಾದ್ ಪುರುಷೊತ್ತಮ ಜಟ್ಟಿ, ಮಾಜಿ ಜಟ್ಟಿ ಚಂದ್ರಶೇಖರ್, ಮನೋಜ್ ಜೆಟ್ಟಿ ಮಾರ್ಗದರ್ಶನದಲ್ಲಿ ಎದುರಾಳಿಯ ರಕ್ತ ಚಿಮ್ಮಿಸಲು ಬೇಕಾದ ತಂತ್ರಗಳನ್ನು ಕಲಿತಿದ್ದಾರೆ.
ಮೈಸೂರು ದಸರಾದ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ. ತರಬೇತಿ ವೇಳೆ ಹಿರಿಯ ಜಟ್ಟಿಗಳು ಹೇಳಿಕೊಟ್ಟಿರುವ ತಂತ್ರ ಬಳಸಿ ಗೆಲುವು ಸಾಧಿಸುವುದು ನನ್ನ ಗುರಿರಾಘವೇಂದ್ರ ಜಟ್ಟಿ ವಜ್ರಮುಷ್ಠಿ ಕಾಳಗದ ಸ್ಪರ್ಧಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.