ADVERTISEMENT

ರಾಮನಗರ: ಸಮಾಜಕ್ಕೆ ಕನ್ನಡಿ ಹಿಡಿಯುವ ರಾಮಾಯಣ ಪಾತ್ರಗಳು

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಯ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 2:03 IST
Last Updated 9 ಅಕ್ಟೋಬರ್ 2025, 2:03 IST
ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌. ಚಂದ್ರಯ್ಯ ಉದ್ಘಾಟಿಸಿದರು. ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಹಾಗೂ ಇತರರು ಇದ್ದಾರೆ
ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌. ಚಂದ್ರಯ್ಯ ಉದ್ಘಾಟಿಸಿದರು. ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಹಾಗೂ ಇತರರು ಇದ್ದಾರೆ   

ರಾಮನಗರ: ‘ವಾಲ್ಮೀಕಿ ಅವರು ರಚಿಸಿರುವ ರಾಮಾಯಣದಲ್ಲಿ ಬರುವ ಪ್ರತಿ ಪಾತ್ರಗಳು ನಮ್ಮ ಸಮಾಜಕ್ಕೆ ಕನ್ನಡಿ ಹಿಡಿಯುತ್ತವೆ. ಸಮಾಜದ ಪ್ರತಿಯೊಬ್ಬರ ನಡವಳಿಕೆಗಳನ್ನು ಆ ಪಾತ್ರಗಳು ತೋರಿಸುತ್ತವೆ. ರಾಮ, ಸೀತೆ, ರಾವಣ, ಲಕ್ಷ್ಮಣ, ಹನುಮಂತನಂತಹ ಮಹಾನ್ ಪಾತ್ರಗಳನ್ನು ಸೃಷ್ಟಿಸಿದ ಕಾರಣಕ್ಕೆ ವಾಲ್ಮಿಕಿ ಅವರು ಮಹರ್ಷಿಗಳಾದರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌. ಚಂದ್ರಯ್ಯ ಅಭಿಪ್ರಾಯಪಟ್ಟರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ‌ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದ ಅವರು, ‘ಲಿಪಿ ಇರುವ ವಿಶ್ವದ ಎಲ್ಲಾ ಭಾಷೆಗಳಿಗೂ ರಾಮಾಯಣ ಅನುವಾದಗೊಂಡಿದೆ’ ಎಂದರು.

‘ರಾಮಾಯಣ ಮತ್ತು ಮಹಾಭಾರತ ಈ ದೇಶದ ಎರಡು ಮಹಾಕಾವ್ಯಗಳು. ಇವೆರಡೂ ನಮ್ಮ ಸಂಸ್ಕೃತಿ, ಆಚರಣೆ ಹಾಗೂ ಪರಂಪರೆಯಲ್ಲಿ ಬೆರೆತು ಹೋಗಿವೆ. ಜನ ಜೀವನದ ಮೇಲೆ ರಾಮಾಯಣದ ಪ್ರಭಾವ ಗಾಢವಾಗಿದೆ. ಅದಕ್ಕೆ ವಾಲ್ಮೀಕಿ ಅವರು ರಾಮನ ಪಾತ್ರವನ್ನು ಅಷ್ಟೊಂದು ಅದ್ಭುತವಾಗಿ ಕಟ್ಟಿ ಕೊಟ್ಟಿರುವುದೇ ಕಾರಣ’ ಎಂದು ಹೇಳಿದರು.

ADVERTISEMENT

ವಾಲ್ಮೀಕಿ ಅವರ ಕುರಿತು ಉಪನ್ಯಾಸ ನೀಡಿದ ದಾವಣಗೆರೆ ಜಿಲ್ಲೆ ಚನ್ನಗಿರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಎಚ್. ಷಣ್ಮುಖ, ‘ರತ್ನಾಕರನ ಆತ್ಮವಿಕಾಸದ ಪ್ರತಿಫಲನವೇ ವಾಲ್ಮೀಕಿ. ಈ ದೇಶದ ಮೊದಲ ಮಹಾಕಾವ್ಯವಾದ ರಾಮಾಯಣ ರಚಿಸಿದ ಮಹಾಪುರುಷ. ಬೇಟೆಯಾಡುತ್ತಿದ್ದ ರತ್ನಾಕರನಿಗೆ ಬೇಟೆಯಿಂದ ದೈಹಿಕ ಹಸಿವು ಮಾತ್ರ ನೀಗುತ್ತದೆ ಎಂಬ ಅರಿವಾಗಿ, ತಪಸ್ಸು ಮಾಡಿ ಸ್ವಯಂ ಪ್ರತಿಭೆಯಿಂದ ಶ್ರೇಷ್ಠ ವಿದ್ವಾಂಸನಾದ’ ಎಂದು ತಿಳಿಸಿದರು.

‘ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅವರು ಇಡೀ ಮನುಕುಲದ ಆಸ್ತಿ. ಅವರು ರಚಿಸಿರುವ ರಾಮಾಯಣವನ್ನು ಪ್ರತಿಯೊಬ್ಬರೂ ಓದಬೇಕು. ಅಲ್ಲಿರುವ ಜೀವನ ಮೌಲ್ಯಗಳು ಹಾಗೂ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮಾತನಾಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಚೆಲುವರಾಜು, ಸಿಡಿಪಿಐ ಸ್ವಾಮಿ, ಕೆಡಿಪಿ ಸದಸ್ಯ ಗುರುಮೂರ್ತಿ, ರಾಜ್ಯ ಪೌರ ನೌಕರರ ಸಂಘದ ಉಪಾಧ್ಯಕ್ಷ ಆರ್. ನಾಗರಾಜು, ಎಸ್‌ಸಿ–ಎಸ್‌ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಯಪ್ರಕಾಶ್, ದಲಿತ ಮುಖಂಡ ಶಿವಕುಮಾರ ಸ್ವಾಮಿ, ರಾಮಕೃಷ್ಣ ಹಾಗೂ ಇತರರು ಇದ್ದರು.

ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಸ್ವಾಗತಿಸಿದರು. ಹಳ್ಳಿಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸತೀಶ್ ವಂದಿಸಿದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಅಂಬೇಡ್ಕರ್ ಭವನದವರೆಗೆ ವಾಲ್ಮೀಕಿ ಅವರ ಚಿತ್ರವನ್ನು ಬೆಳ್ಳಿರಥದಲ್ಲಿಟ್ಟು ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ತಳ ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರ ತಮ್ಮ ಅಭಿವೃದ್ಧಿಗಾಗಿ ಒದಗಿಸಿರುವ ಸೌಲಭ್ಯಗಳ ಕುರಿತು ಜಾಗೃತರಾಗಿ ಅವುಗಳ ಪ್ರಯೋಜನ ಪಡೆದು ಪ್ರಗತಿ ಕಾಣಬೇಕು
– ಆರ್. ಚಂದ್ರಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.