ADVERTISEMENT

ರಾಮನಗರ: ಮೌಲ್ಯವರ್ಧನೆಯಿಂದ ಆರ್ಥಿಕ ಸ್ವಾವಲಂಬನೆ

ಹಲಸಿನ ಹಣ್ಣಿನ ಮೌಲ್ಯವರ್ಧನೆ ತರಬೇತಿ: ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:35 IST
Last Updated 6 ಫೆಬ್ರುವರಿ 2026, 6:35 IST
<div class="paragraphs"><p>ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಬಾರ್ಡ್ ಹಾಗೂ ಕರ್ತವ್ಯ ಫೌಂಡೇಷನ್‌ ಸಹಯೋಗದೊಂದಿಗೆ ನಡೆದ ಹಲಸಿನ ಹಣ್ಣಿನ ಮೌಲ್ಯವರ್ಧನೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.</p></div>

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಬಾರ್ಡ್ ಹಾಗೂ ಕರ್ತವ್ಯ ಫೌಂಡೇಷನ್‌ ಸಹಯೋಗದೊಂದಿಗೆ ನಡೆದ ಹಲಸಿನ ಹಣ್ಣಿನ ಮೌಲ್ಯವರ್ಧನೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.

   

ರಾಮನಗರ: ‘ಫಾಸ್ಟ್‌ಫುಡ್‌ಗಳಿಂದ ಆರೋಗ್ಯ ಸಮಸ್ಯೆಗಳ ಹೆಚ್ಚಾಗುತ್ತಿದೆ. ಜನ ಹಿಂದಿನ ಆಹಾರ ಪದ್ಧತಿಯನ್ನು ಮತ್ತೆ ಅನುಸರಿಸಲು ಮುಂದಾಗುತ್ತಿದ್ದಾರೆ. ಇಂತಹ ಸಂದರ್ಭವನ್ನು ಗ್ರಾಮೀಣ ಕೃಷಿಕ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಹಾಗೂ ಕರ್ತವ್ಯ ಫೌಂಡೇಷನ್‌ ಸಹಯೋಗದೊಂದಿಗೆ ನಡೆದ ಹಲಸಿನ ಹಣ್ಣಿನ ಮೌಲ್ಯವರ್ಧನೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚುತ್ತಿದೆ. ಸಾವಯವ ಮೌಲ್ಯವರ್ಧಿತ ಆಹಾರ ಪದಾರ್ಥಗಳತ್ತ ಜನ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಬೇಡಿಕೆಯೂ ಹೆಚ್ಚಾಗುತ್ತಿದೆ. ದೊಡ್ಡ ಮಾಲ್‌ಗಳಲ್ಲೂ ಇಂತಹ ಆಹಾರ ಪದಾರ್ಥಗಳ ಪ್ರತ್ಯೇಕ ಕೌಂಟರ್‌ಗಳು ತಲೆ ಎತ್ತುತ್ತಿವೆ. ಜನ ಫಾಸ್ಟ್‌ಫುಡ್‌ನಿಂದ ಹಂತ ಹಂತವಾಗಿ ದೂರ ಸರಿಯಲು ಆರಂಭಿಸಿದ್ದಾರೆ’ ಎಂದರು.

‘ಈ ಸಂದರ್ಭವನ್ನು ಗ್ರಾಮೀಣ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಮತ್ತು ಬ್ಯಾಂಕ್‌ಗಳು ನೀಡುವ ತರಬೇತಿ ಜೊತೆಗೆ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಸೂಕ್ತ ಬ್ರಾಂಡಿಂಗ್ ಕೌಶಲ್ಯದೊಂದಿಗೆ ಕೃಷಿ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಟ್ಟಿಕೊಳ್ಳಬೇಕು’ ಎಂದು ತಿಳಿಸಿದರು.

ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಬಿ.ವಿ. ಹರ್ಷಿತ ಮಾತನಾಡಿ, ‘ಮಹಿಳೆಯರು ಆರ್ಥಿಕ ಸ್ವಾವಲಂಬನೆಗೆ ನಬಾರ್ಡ್ ಜೊತೆಗೆ ಅನೇಕ ಸಂಸ್ಥೆಗಳು ಶ್ರಮಿಸುತ್ತಿವೆ. ಸೂಕ್ತ ತರಬೇತಿ ಪಡೆದು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಮೂಲಕ ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಬಹುದು. ಇದಕ್ಕೆ ನಬಾರ್ಡ್‌ನಿಂದ ಸಂಪೂರ್ಣ ಸಹಕಾರ ದೊರೆಯಲಿದೆ’ ಎಂದು ಹೇಳಿದರು.

ಕರ್ತವ್ಯ ಫೌಂಡೇಷನ್‌ ಸಂಸ್ಥಾಪಕ ರಾಜಶೇಖರ್ ಮಾತನಾಡಿ, ‘ಕೀಟನಾಶಕ, ರಸಗೊಬ್ಬರದಿಂದ ಮುಕ್ತವಾಗಿರುವ ಏಕೈಕ ಹಣ್ಣು ಎಂದರೆ ಅದು ಹಲಸಿನ ಹಣ್ಣು. ಇದು ಸಿಹಿಯಾದ ಹಣ್ಣು. ಪ್ರಸ್ತುತ ಸಮಾಜದಲ್ಲಿ ಮಧುಮೇಹ ಸಮಸ್ಯೆ ಹೆಚ್ಚಾಗುತ್ತಿರುವ ಕಾರಣ, ಇದನ್ನು ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದರು.

‘ಹಲಸಿನ ಕಾಯಿಯಿಂದ ಮಾಡುವ ಹತ್ತಾರು ಮೌಲ್ಯವರ್ಧಿತ ಉತ್ಪನ್ನಗಳು ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತಿವೆ. ಹಲಸಿನ ಪೌಡರ್‌ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಗ್ರಿಮೆಂಟ್ ಮಾಡಿಸಿಕೊಂಡು ಅನೇಕ ಸಂಸ್ಥೆಗಳು ಹಲಸಿನ ಹಣ್ಣನ್ನು ರೈತರಿಂದ ಬೆಳೆಸಿ ನಿಗದಿತ ಬೆಲೆಗೆ ಖರೀದಿ ಮಾಡಿ, ಅದನ್ನು ಹೊರದೇಶಗಳಿಗೆ ರಫ್ತು ಮಾಡುತ್ತಿವೆ. ಇದನ್ನು ರೈತರೇ ಮಾಡಬಹುದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ತವ್ಯ ಖಾದ್ಯ ಎಂಬ ನೂತನ ಬ್ರಾಂಡ್ ಉದ್ಘಾಟಿಸಲಾಯಿತು. ಹಲಸಿನ ವಿವಿಧ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಮೋಹನ್ ಕುಮಾರ್, ಎನ್‌ಆರ್‌ಎಲ್‌ಎಂ ವಿನೋದ್ ಕುಮಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಸಹಾಯಕ ಕಾಯದರ್ಶಿ ಶಿವಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್, ಸಂಸ್ಥೆಯ ಪ್ರತಿನಿಧಿ ಸುಕನ್ಯ, ಭಾಗ್ಯಲಕ್ಷ್ಮಿ, ಕಲಾವತಿ, ರುಡ್‌ಸೆಟ್ ಸಂಸ್ಥೆ ನೇತ್ರಾ ಹಾಗೂ ಇತರರು ಇದ್ದರು.

ಹಲಸಿನಿಂದ ಬಹು ಪದಾರ್ಥ

‘ಹಲಸಿನ ಕಾಯಿಯಿಂದ ಬಿರಿಯಾನಿ ಫಲಾವ್ ಉಪ್ಪಿನಕಾಯಿ ಹಪ್ಪಳ ಜಾಮ್ ಸೇರಿದಂತೆ ವಿವಿಧ ಬಗೆಯ ಮೌಲ್ಯವರ್ಧಿತ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಇವುಗಳ ತರಬೇತಿಯನ್ನು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ನೀಡುವುದರಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ಈ ಯೋಜನೆಯಡಿ ಕರ್ತವ್ಯ ಫೌಂಡೇಷನ್ ಎಲ್ಲಾ ರೀತಿಯ ಮಾರುಕಟ್ಟೆ ಬ್ರಾಂಡಿಂಗ್ ತಂತ್ರಜ್ಞಾನ ಕೌಶಲ್ಯ ಸಹಕಾರವನ್ನು ಎರಡು ವರ್ಷ ನೀಡಲಿದೆ’ ಎಂದು ಕರ್ತವ್ಯ ಫೌಂಡೇಷನ್‌ ಸಂಸ್ಥಾಪಕ ರಾಜಶೇಖರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.