ರಾಮನಗರ: ವರ ಮಹಾಲಕ್ಷ್ಮಿ ಹಬ್ಬವನ್ನು ನಗರದಲ್ಲಿ ಶುಕ್ರವಾರ ಭಕ್ತಿ–ಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಗೆ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ವಿಶೇಷ ಪೂಜೆಗಳು ಜರುಗಿದವು. ಹಬ್ಬದ ಪ್ರಯುಕ್ತ ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮಹಾಲಕ್ಷ್ಮಿಯನ್ನು ಪೂಜಿಸಿದರೆ ಕುಟುಂಬದಲ್ಲಿ ಸುಖ– ಶಾಂತಿ ಜೊತೆಗೆ ಸಂಪತ್ತು ಸಿಗುತ್ತದೆ ಎಂಬುದು ಜನರ ನಂಬಿಕೆ. ಹಾಗಾಗಿಯೇ, ಈ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಹಬ್ಬದ ಪ್ರಯುಕ್ತ ಮನೆಯನ್ನು ಬಾಳೆ ಕಂದು, ಮಾವಿನ ಸೊಪ್ಪು, ಕಬ್ಬಿನ ಪೈರು ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಮನೆ ಮುಂಭಾಗದ ಬಣ್ಣ ಬಣ್ಣದ ರಂಗೋಲಿಗಳು ರಾರಾಜಿಸಿದವು. ಬೆಳಿಗ್ಗೆಯಿಂದಲೇ ಉಪವಾಸವಿದ್ದ ಮಹಿಳೆಯರು ಹೊಸ ಬಟ್ಟೆ ಧರಿಸಿ, ಮನೆಯೊಳಗೆ ಮಹಾಲಕ್ಷ್ಮಿ ಮೂರ್ತಿಯನ್ನು ಸ್ಥಾಪಿಸಿ ವಿಶೇಷ ಪೂಜೆ ನೆರವೇರಿಸಿದರು. ಮೂರ್ತಿಗೆ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಮನೆಯಲ್ಲಿರುವ ಚಿನ್ನಾಭರಣ ಹಾಗೂ ನಗದನ್ನು ಮೂರ್ತಿಯ ಎದುರಿಗಿಟ್ಟು ಪೂಜೆ ಮಾಡಿದರು.
ತಮಗೆ ಸುಖ–ಸಂಪತ್ತು ಸಿಗಲೆಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಸಂಬಂಧಿಕರು ಹಾಗೂ ನೆರೆಹೊರೆಯ ಮಹಿಳೆಯರನ್ನು ಕರೆದು ಅರಿಶಿನ–ಕಂಕುಮ ನೀಡಿ ಹಬ್ಬದ ಸಂಭ್ರಮ ಹಂಚಿಕೊಂಡರು. ಮನೆಗಳಲ್ಲಿ ಹಬ್ಬದ ವಿಶೇಷ ಭೋಜನ ಮಾಡಲಾಗಿತ್ತು. ಹೋಳಿಗೆ, ಪಾಯಸ, ಚಕ್ಕುಲಿ, ಕೋಡುಬಳೆ ಸೇರಿದಂತೆ ವಿವಿಧ ರೀತಿಯ ತಿನಿಸುಗಳನ್ನು ಮಹಾಲಕ್ಷ್ಮಿಗೆ ಅರ್ಪಿಸಿದ ಬಳಿಕ ಕುಟುಂಬದವರೆಲ್ಲರೂ ಸವಿದರು.
ನಗರದ ಚಾಮುಂಡೇಶ್ವರಿ ದೇವಾಲಯ, ಬಂಡಿ ಮಹಾಂಕಾಳಮ್ಮ, ಕನ್ನಿಕಾ ಪರಮೇಶ್ವರಿ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಮಹಿಳೆಯರು ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ದರ್ಶನ ಪಡೆದರು. ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಬೇಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.