ರಾಮನಗರ: ಸಂಪತ್ತಿನ ಅಧಿದೇವತೆ ವರ ಮಹಾಲಕ್ಷ್ಮಿಯ ಹಬ್ಬದ ಅಂಗವಾಗಿ, ಗುರುವಾರ ನಗರದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು. ಶುಭ ಶುಕ್ರವಾರದಂದು ನಡೆಯಲಿರುವ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಜನ ಮುಗಿಬಿದ್ದು ಖರೀದಿಸಿದರು. ನಗರದ ಹಳೇ ಬಸ್ ನಿಲ್ದಾಣದ ಆವರಣ, ಹೂವಿನ ಮಾರುಕಟ್ಟೆ, ಮುಖ್ಯರಸ್ತೆಗಳ ಬದಿ ಹಬ್ಬಕ್ಕೆ ಸಂಬಂಧಿಸಿದ ಸಾಮಗ್ರಿಗಳ ಮಾರಾಟ ಜೋರಾಗಿತ್ತು.
ಬೆಳಿಗ್ಗೆಯಿಂದ ಸಂಜೆಯವರೆಗೆ ಜನರು ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಹೂವು ಮತ್ತು ಹಣ್ಣಿನ ದರ ದುಬಾರಿಯಾಗಿದ್ದರೂ, ಜನ ಪೂಜೆಗೆ ಅಗತ್ಯವಿರುವಷ್ಟು ಖರೀದಿಸಿದರು. ಪೂಜಾ ಸಾಮಾನು ಅಂಗಡಿಗಳಲ್ಲಿ ಸಹ ಸಾಮಗ್ರಿ ಖರೀದಿ ಭರಾಟೆ ಜೋರಾಗಿತ್ತು.
ದೇವರ ಮಂಟಪ ಅಲಂಕರಿಸಲು ಲಕ್ಷ್ಮಿಯ ಮೂರ್ತಿ, ಮನೆ ಮುಂದೆ ತೋರಣ ಕಟ್ಟಲು ರಸ್ತೆ ಬದಿ ಬಾಳೆದಿಂಡು, ಮಾವಿನ ಸೊಪ್ಪು, ಹೂವು ಹಾಗೂ ಹಣ್ಣುಗಳನ್ನು ಖರೀದಿಸಲು ಜನರು ಮುಗಿಬಿದ್ದರು. ಬಾಳೆಕಂದು ₹25– ₹50ರವರೆಗೆ ಮತ್ತು ಮಾವಿನ ಸೊಪ್ಪುಗಳ ಕಟ್ಟಿಗೆ ₹10–₹20ರವರೆಗೆ ಮಾರಾಟವಾಯಿತು.
‘ಈ ಸಲವೂ ಹೂವು ಮತ್ತು ಹಣ್ಣಿನ ದರ ಗಗನಕ್ಕೇರಿದೆ. ಪ್ರತಿ ಸಲವೂ ಇದು ಮಾಮೂಲಿಯಾಗಿದೆ. ದರ ಏರಿಕೆಯಾಗಿದೆ ಎಂದು ಹಬ್ಬ ಆಚರಿಸುವುದನ್ನು ಬಿಡುವುದಕ್ಕೆ ಆಗುವುದಿಲ್ಲ. ಆದರೂ, ಹಬ್ಬಕ್ಕೆ ಎಷ್ಟು ಬೇಕೊ ಅಷ್ಟನ್ನು ಖರೀದಿಸಲೇಬೇಕಿದೆ’ ಎಂದು ನಗರದ ಅರ್ಕಾವತಿ ಬಡಾವಣೆಯ ಲಕ್ಷ್ಮಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಬ್ಬ ಬಂದರೆ ಹೂ–ಹಣ್ಣುಗಳ ದರದಲ್ಲಿ ಏರಿಕೆಯಾಗುವುದು ಸಾಮಾನ್ಯ. ಹಬ್ಬದ ನೆಪದಲ್ಲಿ ಖರೀದಿಸುತ್ತಾರೆ. ವಿವಿಧ ಕಾರಣಗಳಿಗಾಗಿ ವರ್ಷದ ಬೇರೆ ಸಂದರ್ಭದಲ್ಲಿ ಕೈ ಸುಟ್ಟುಕೊಳ್ಳುವ ರೈತರಿಗೆ ಹಬ್ಬದ ನೆಪದಲ್ಲಿ ಒಂದಿಷ್ಟು ಲಾಭವಾಗುತ್ತದೆ. ಹಬ್ಬ ಮುಗಿದ ಎರಡ್ಮೂರು ದಿನದಲ್ಲಿ ದರ ಇಳಿಕೆಯಾಗಲಿದೆ’ ಎಂದು ವ್ಯಾಪಾರಿ ಕುಮಾರ್ ಹೇಳಿದರು.
ಹಬ್ಬದಂದು ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನೆರವೇರುತ್ತವೆ. ಅದಕ್ಕಾಗಿ, ದೇವಸ್ಥಾನಗಳಲ್ಲಿ ಪೂಜೆಗೆ ತಯಾರಿ ನಡೆಯಿತು. ಭಕ್ತರು ಮನೆಯಲ್ಲಿ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದರ ಜೊತೆಗೆ ಹೊಸ ಬಟ್ಟೆಗಳನ್ನು ಧರಿಸಿ ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಬೇಡಿಕೆ ಈಡೇರಿಸುವಂತೆ ಪ್ರಾರ್ಥಿಸುತ್ತಾರೆ.
ಕನಕಾಂಬರ ಕೆ.ಜಿ.ಗೆ ₹3 ಸಾವಿರ!:
ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂವುಗಳ ಖರೀದಿ ಭರಾಟೆ ಜೊತೆಗೆ ಬೆಲೆಯೂ ಅಷ್ಟೇ ಏರಿಕೆಯಾಗಿತ್ತು. ವಾರದ ಹಿಂದೆಕೆ.ಜಿ. ಗೆ ₹1500 ಇದ್ದ ಕನಕಾಂಬರ ಇಂದು ₹3 ಸಾವಿರಕ್ಕೆ ಏರಿಕೆಯಾಗಿದೆ. ಮಲ್ಲಿಗೆ ₹2 ಸಾವಿರ ಗುಲಾಬಿ ₹250 ಸೇವಂತಿಗೆ ₹280 ಹಾಗೂ ಮಲ್ಲಿಗೆ ಮತ್ತು ತಾವರೆ ಮಿಶ್ರಿತ ಹಾರ ₹1 ಸಾವಿರದಿಂದ ₹1500ರವರೆಗೆ ಮಾರಾಟವಾದವು. ಹೂವಿನ ಜೊತೆಗೆ ಹಣ್ಣುಗಳ ದರದಲ್ಲೂ ಸ್ವಲ್ಪ ಏರಿಕೆ ಕಂಡುಬಂತು. ಸೇಬು ಪ್ರತಿ ಕೆ.ಜಿ.ಗೆ ₹280 ದಾಳಿಂಬೆ ₹300 ದ್ರಾಕ್ಷಿ ₹150 ಮರಸೇಬು ₹200 ಏಲಕ್ಕಿ ಬಾಳೆಹಣ್ಣು ₹170 ಪಚ್ಚಬಾಳೆ ₹60 ಮೂಸಂಬಿ ₹90–100 ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.