ADVERTISEMENT

ಸಿದ್ದರಾಮಯ್ಯ ಬದಲಾವಣೆ ಸುಲಭವಲ್ಲ: ವಾಟಾಳ್ ಆಕ್ರೋಶ

ಬೆಳಗಾವಿ ಅಧಿವೇಶನದ ಆಶಯ ವಿಫಲ, ಡಿನ್ನರ್ ಸಭೆಗೆ ಮೀಸಲಾದ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 7:57 IST
Last Updated 20 ಡಿಸೆಂಬರ್ 2025, 7:57 IST
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಕನ್ನಡ ವಿರೋಧಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಪೋಸ್ಟರ್ ಪ್ರದರ್ಶಿಸಿದರು
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಕನ್ನಡ ವಿರೋಧಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಪೋಸ್ಟರ್ ಪ್ರದರ್ಶಿಸಿದರು   

ರಾಮನಗರ: ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸುವುದು ಅಷ್ಟು ಸುಲಭವಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಂತಹ ಸಾಹಸಕ್ಕೆ ಕೈ ಹಾಕಬಾರದು. ಒಂದು ವೇಳೆ ಅವರನ್ನು ಕೆಳಕ್ಕಿಳಿಸಿದರೆ ಭಾರೀ ಹೋರಾಟಗಳು ನಡೆಯುತ್ತವೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹೇಳಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ವಿಫಲವಾಗಿದೆ ಎಂದು ನಗರದ ಐಜೂರು ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರಂತಹ ಮತ್ತೊಬ್ಬ ನಾಯಕ ಸ್ವತಃ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲೂ ಇಲ್ಲ. ಅವರನ್ನು ಹುದ್ದೆಯಿಂದ ಕೆಳಕ್ಕಿಳಿಸಿದರೆ, ಒಬ್ಬ ಪ್ರಬುದ್ಧ ರಾಜಕಾರಣಿ. ಎಲ್ಲರನ್ನೂ ಒಳಗೊಳ್ಳುವ ಮುತ್ಸದ್ದಿ ರಾಜಕಾರಣಿಯಾದ ಅವರನ್ನು ಅಧಿಕಾರದಲ್ಲಿ ಮುಂದುವರಿಸಬೇಕು’ ಎಂದರು.

ADVERTISEMENT

ಡಿನ್ನರ್‌ ಸಭೆಗೆ ಮೀಸಲು: ‘ಬೆಳಗಾವಿಯ ಸುರ್ವಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ ಸಿದ್ದರಾಮಯ್ಯ ಪರ ಮತ್ತು ವಿರುದ್ಧದ ಡಿನ್ನರ್ ಸಭೆಗಳಿಗೆ ಸೀಮಿತವಾಗಿದೆ. ಉತ್ತರ ಕರ್ನಾಟಕ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿವೇಶನ ವಿಫಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಎಲ್ಲರೂ ಭಾಷಣ ಮಾಡುತ್ತಾರೆ. ಅದರೆ, ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸಿಲ್ಲ. ಆ ಭಾಗದ ಸಮಗ್ರ ಅಭಿವೃದ್ಧಿಗೆ ಬೇಕಾದ ಯಾವ ಕೆಲಸಗಳನ್ನೂ ಸರ್ಕಾರ ಮಾಡುತ್ತಿಲ್ಲ. ವಿರೋಧ ಪಕ್ಷಗಳಿಗೂ ಆ ಬಗ್ಗೆ ಇಚ್ಛಾಶಕ್ತಿ ಇಲ್ಲ’ ಎಂದು ಟೀಕಿಸಿದರು.

‘ಅಧಿವೇಶನದ ಆರಂಭದಲ್ಲಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಬೇಕಿತ್ತು. ನೀರಾವರಿ, ಶಿಕ್ಷಣ, ಮೂಲಸೌಕರ್ಯ, ಸಾರಿಗೆ, ಗಡಿ ವಿವಾದ ಸೇರಿದಂತೆ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ಆಗಬೇಕಿತ್ತು. ಚರ್ಚೆ ನಂತರ ನಿಗದಿತ ಕಾಲಮಿತಿಯಲ್ಲಿ ಅನುದಾನ ಬಿಡುಗಡೆ ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು’ ಎಂದರು.

ಇದೇ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಕನ್ನಡ ವಿರೋಧಿ ಧೋರಣೆ ಹೊಂದಿರುವ ಎಂಇಎಸ್ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿದ ವಾಟಾಳ್ ಮತ್ತು ಇತರರು, ಪೋಸ್ಟರ್ ಪ್ರದರ್ಶಿಸಿದರು.

ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ. ಜಗದೀಶ್, ಉಸ್ತುವಾರಿ ಗಂಗಾಧರ್ ವಿ.ಎನ್, ಜಿಲ್ಲಾಧ್ಯಕ್ಷ ಸಿ.ಎಸ್. ಜಯಕುಮಾರ್, ಪದಾಧಿಕಾರಿಗಳಾದ ಲಕ್ಷ್ಮಿ, ಭಾಗ್ಯ, ಸುಧಾ ನೂರಿನ್ ತಾಜ್, ಜಯರಾಮು, ವಿಜಯಕುಮಾರ್, ಕುಮಾರ್, ಪ್ರಸನ್ನ, ಶಿವಮೂರ್ತಿ, ಕೆಂಪರಾಜು , ಹೇಮಂತ್, ಗಿರೀಶ್ ಗೌಡ ಇದ್ದರು.

ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ತಡೆ ಮಸೂದೆಯು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಇದೇನಾದರು ಕಾಯ್ದೆಯಾದರೆ ಮುಂದೆ ಆಡಳಿತ ಪಕ್ಷಗಳು ದುರುಪಯೋಗ ಮಾಡಿಕೊಳ್ಳಲಿವೆ.
– ವಾಟಾಳ್ ನಾಗರಾಜ್, ಅಧ್ಯಕ್ಷ ಕನ್ನಡ ಚಳವಳಿ ವಾಟಾಳ್ ಪಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.