ADVERTISEMENT

ರಾಮನಗರ: ಶತಕದ ಗಡಿ ದಾಟಿದ ಬೀನ್ಸ್‌, ಕ್ಯಾರೆಟ್‌: ಈರುಳ್ಳಿ-ಬೆಳ್ಳುಳ್ಳಿಯೂ ತುಟ್ಟಿ

ಅಮಾವಾಸ್ಯೆ ಕಳೆದರೂ ತರಕಾರಿ ದುಬಾರಿ!

ಆರ್.ಜಿತೇಂದ್ರ
Published 18 ಸೆಪ್ಟೆಂಬರ್ 2020, 19:30 IST
Last Updated 18 ಸೆಪ್ಟೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಮಹಾಲಯ ಅಮಾವಾಸ್ಯೆ ಕಳೆದರೂ ತರಕಾರಿಗಳ ಬೆಲೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ದಿನಬಳಕೆಯ ಬಹುತೇಕ ತರಕಾರಿಗಳು ದುಬಾರಿ ಆಗಿದ್ದು. ಗ್ರಾಹಕರು ಕಣ್ಣೀರು ಹಾಕುವಂತಾಗಿದೆ.

ಅಮಾವಾಸ್ಯೆ- ಪಿತೃ ಪಕ್ಷದ ಆಚರಣೆಯ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದಲೂ ತರಕಾರಿಗಳು ತುಟ್ಟಿಯಾಗಿವೆ. ಗುರುವಾರವೇ ಅಮಾವಾಸ್ಯೆ ಮುಗಿದಿದೆ. ಆದಾಗ್ಯೂ ಗ್ರಾಹಕರು ಖರೀದಿಗೆ ಮುಗಿಬಿದ್ದ ಕಾರಣ ಶುಕ್ರವಾರದ ಮಾರುಕಟ್ಟೆಯಲ್ಲೂ ಧಾರಣೆ ಹೆಚ್ಚಾಗಿತ್ತು.

ಬೀನ್ಸ್‌ ಹಾಗೂ ಕ್ಯಾರೆ‌ಟ್‌ ಎರಡಕ್ಕೂ ಸದ್ಯ ಉತ್ತಮ ಬೇಡಿಕೆ ಇದೆ. ಆದರೆ ಮಳೆಯ ಕಾರಣಕ್ಕೆ ನಿರೀಕ್ಷೆಯಷ್ಟು ಉತ್ಪನ್ನ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಈ ಎರಡೂ ತರಕಾರಿಗಳು ₹100ರ ಗಡಿ ದಾಟಿವೆ. ಗುರುವಾರ ₹150ರವರೆಗೂ ತಲುಪಿದ್ದ ಬೀನ್ಸ್‌ ಅರ್ಥಾತ್ ಹುರುಳಿಕಾಯಿಯ ಧಾರಣೆ ಶುಕ್ರವಾರ ಕೊಂಚ ತಗ್ಗಿದ ಕಾರಣ ಗ್ರಾಹಕರು ನಿಟ್ಟಿಸಿರು ಬಿಡುವಂತಾಗಿದೆ. ಕಳೆದ ತಿಂಗಳಿಂದ ಇಳಿಕೆ ಕಂಡಿದ್ದ ಟೊಮ್ಯಾಟೊ ಸಹ ಏರುಗತಿಯಲ್ಲಿದೆ. ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಮೊದಲಾದವುಗಳ ಬೆಲೆಯೂ ಏರುಮುಖವಾಗಿಯೇ ಇದೆ.

ADVERTISEMENT

ಈರುಳ್ಳಿ ದುಬಾರಿ: ಕಳೆದ ಐದಾರು ತಿಂಗಳಿಂದಲೂ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಆಗುತ್ತಿದ್ದ ಈರುಳ್ಳಿಯ ಬೆಲೆ ಇದೀಗ ಏರುಮುಖವಾಗಿದೆ. ಕಳೆದ ಹದಿನೈದು ದಿನದಿಂದ ಇದರ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಈ ವರ್ಷವೂ ಪ್ರವಾಹ ಪರಿಸ್ಥಿತಿ ಇದ್ದು, ಈರುಳ್ಳಿ ಬೆಲೆಗೆ ಹಾನಿಯಾಗಿದೆ. ಹೀಗಾಗಿ ಈ ವರ್ಷವೂ ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ತರಬಹುದು ಎನ್ನುವುದು ವರ್ತಕರ ಅಂದಾಜು. ಶುಕ್ರವಾರ ರಾಮನಗರ ಎಪಿಎಂಸಿಯಲ್ಲಿ ದಪ್ಪನೆಯ ಈರುಳ್ಳಿ ಎರಡೂವರೆ ಕೆ.ಜಿ.ಗೆ ₨100 ಹಾಗೂ ಮಧ್ಯಮ, ಸಣ್ಣ ಗಾತ್ರದ ಈರುಳ್ಳಿ ₨100ಕ್ಕೆ ಮೂರು-ಮೂರುವರೆ ಕೆ.ಜಿ.ಯಂತೆ ಮಾರಾಟ ನಡೆದಿತ್ತು.

ಉಳಿದಂತೆ ಬೆಂಡೆ, ಬದನೆ, ಮೂಲಂಗಿ ಮೊದಲಾದ ನಿತ್ಯ ಬಳಕೆಯ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಮುಂದಿನ ಕೆಲ ದಿನಗಳ ಕಾಲ ಇದೇ ಧಾರಣೆ ಮುಂದುವರಿಯಲಿದೆ ಎನ್ನುತ್ತಾರೆ ರಾಮನಗರ ಎಪಿಎಂಸಿಯಲ್ಲಿನ ತರಕಾರಿ ವರ್ತಕರು.

ಕೊತ್ತಂಬರಿ ಅಗ್ಗ

ಹಬ್ಬ-ಆಚರಣೆಗಳ ದಿನಗಳಲ್ಲಿಯೂ ಕೊತ್ತಂಬರಿ ಸೊಪ್ಪು ಮಾತ್ರ ಅಗ್ಗವಾಗಿದೆ. ಶುಕ್ರವಾರ ನಾಟಿ ಕೊತ್ತಂಬರಿ ದಪ್ಪನೆಯ ಕಟ್ಟು ಕೇವಲ ₹15ಕ್ಕೆ ಹಾಗೂ ಫಾರಂ ಕೊತ್ತಂಬರಿ ₹10ಕ್ಕೆ ಮಾರಾಟವಾಯಿತು. ಉಳಿದ ಸೊಪ್ಪಿನ ಧಾರಣೆಯಲ್ಲೂ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಮೆಂತ್ಯ-₹20, ಸಬ್ಬಸ್ಸಿಗೆ, ಪುದೀನ, ದಂಟು, ಪಾಲಕ್‌, ಕೀರೆ, ಕಿಲ್‌ಕೀರೆ-₹10ರಂತೆ ಮಾರಾಟವಾದವು.

ತರಕಾರಿ ಧಾರಣೆ (ಪ್ರತಿ ಕೆ.ಜಿ.ಗೆ- ₹ಗಳಲ್ಲಿ)

ಬೀನ್ಸ್‌: 100-120
ಕ್ಯಾರೆಟ್: 100
ದಪ್ಪ ಮೆಣಸಿನಕಾಯಿ: 40
ಗೆಡ್ಡೆಕೋಸು: 40
ಎಲೆಕೋಸು: 30
ಮೂಲಂಗಿ: 30
ಬೆಂಡೆಕಾಯಿ: 40
ಈರೇಕಾಯಿ: 50
ಹಸಿ ಮೆಣಸಿನಕಾಯಿ: 60
ಟೊಮ್ಯಾಟೊ: 30
ಈರುಳ್ಳಿ (ದಪ್ಪ): 35-40
ಈರುಳ್ಳಿ (ಮಧ್ಯಮ): 30
ಬೆಳ್ಳುಳ್ಳಿ: 140-160
ಸೌತೆಕಾಯಿ: 20
ಏಲಕ್ಕಿ ಬಾಳೆ: 80-100
ಬದನೆ: 30


ಬೀನ್ಸ್‌ ಬೆಲೆ ಕೇಳಿದ ಮೇಲೆ ಕೊಂಡುಕೊಳ್ಳಲು ಮನಸ್ಸಾಗಲಿಲ್ಲ. ಈರುಳ್ಳಿ ಸಹ ದುಬಾರಿ ಆಗಿದ್ದು, ತರಕಾರಿಗೆ ಹಿಂದಿಗಿಂತ ಹೆಚ್ಚು ಹಣ ವ್ಯಯಿಸಬೇಕಿದೆ
ರುಕ್ಮಿಣಿ, ಗ್ರಾಹಕರು


ಮಹಾಲಯ ಅಮಾವಾಸ್ಯೆ ಕಾರಣ ತರಕಾರಿ ಬೆಲೆ ಏರುಮುಖವಾಗಿದೆ. ಇನ್ನೂ ಕೆಲವು ದಿನ ಇದೇ ಧಾರಣೆ ಇರಲಿದೆ
ಹರೀಶ್‌
ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.