ರಾಮನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸೋಮವಾರ ಭೇಟಿ ನೀಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಅವರು, ಸಮಿತಿಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಿದರು.
ರಾಮನಗರ: ‘2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಮಹಾರಾಷ್ಟ್ರದಲ್ಲಿ ಮತ ಕಳ್ಳತನ ಮಾಡಿರುವಂತೆ, ರಾಜ್ಯದಲ್ಲಿ ಡಿ.ಕೆ. ಸುರೇಶ್ ಅವರ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರದಲ್ಲೂ ಮತ ಕಳ್ಳತನ ನಡೆಸಿರುವ ಅನುಮಾನ ಇದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಆರೋಪಿಸಿದರು.
‘ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ಕ್ಷೇತ್ರದಲ್ಲಿ ಮತ ಕಳ್ಳತನ ನಡೆದಿರುವ ಮಾದರಿಯಲ್ಲಿ ಇಲ್ಲೂ ನಡೆದಿದೆ ಎಂದು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೂತ್ ಮಟ್ಟದಿಂದ ಮತದಾರರ ಪಟ್ಟಿ ಸಂಗ್ರಹಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಒಂದು ವೇಳೆ ಚುನಾವಣಾ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು. ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರನ್ನು ಅಣಿಗೊಳಿಸಲಾಗುವುದು’ ಎಂದರು.
‘ಅಕ್ರಮಕ್ಕೆ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳನ್ನು (ಆರ್.ಒ) ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಹಲವು ಕ್ಷೇತ್ರಗಳಲ್ಲಿ ಐದಾರು ವರ್ಷಗಳಿಂದ ಆರ್.ಒ.ಗಳು ಬದಲಾಗದೆ ಮುಂದುವರಿದುಕೊಂಡು ಬಂದಿದ್ದಾರೆ. ಹಾಗಾಗಿ ಅವರನ್ನೇ ಬಳಸಿಕೊಂಡು ಬಿಜೆಪಿಯವರು ಮತ ಕಳ್ಳತನ ನಡೆಸಿದ್ದಾರೆ’ ಎಂದು ದೂರಿದರು.
ವರ್ಷವಿಡೀ ಸಕ್ರಿಯ: ‘ಪ್ರಚಾರ ಸಮಿತಿ ಚುನಾವಣೆ ಸಂದರ್ಭಕ್ಕೆ ಮಾತ್ರವಲ್ಲ. ಅದು ವರ್ಷವಿಡೀ ಪಕ್ಷ ಸಂಘಟನೆ ಹಾಗೂ ಸರ್ಕಾರದ ಕಾರ್ಯಕ್ರಮಗಳ ಪ್ರಚಾರದಲ್ಲಿ ಸಕ್ರಿಯವಾಗಿರಬೇಕು ಎಂದು ಪಕ್ಷದ ರಾಷ್ಟ್ರೀಯ ನಾಯಕರು ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಜಿಲ್ಲೆ, ತಾಲ್ಲೂಕು, ಹೋಬಳಿ, ಪಂಚಾಯಿತಿ ಹಾಗೂ 58 ಸಾವಿರ ಬೂತ್ ಮಟ್ಟದವರೆಗೆ ಸಮಿತಿ ತಲುಪಲು ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.
‘ಈಗಾಗಲೇ ಹಾಸನ, ಚಿಕ್ಕಮಗಳೂರು ಸೇರಿದಂತೆ ಒಂಬತ್ತು ಜಿಲ್ಲೆಗಳಿಗೆ ಪ್ರವಾಸ ಮಾಡಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಡಿಜಿಟಲ್ ಯೂತ್ ಸಮಿತಿ ರಚಿಸುವಂತೆ ಸೂಚಿಸಿದ್ದಾರೆ. ಆನ್‌ಲೈನ್ ಮೂಲಕವೂ ಪಕ್ಷದಲ್ಲಿ ನೋಂದಣಿ ಮಾಡಿ, ಸಂಘಟಿಸಲಾಗುವುದು’ ಎಂದು ತಿಳಿಸಿದರು.
ಸಮಿತಿಯ ಉಪಾಧ್ಯಕ್ಷ ಮುನೀರ್, ಕೆಪಿಸಿಸಿ ಮಾನವ ಹಕ್ಕುಗಳು ಮತ್ತು ಮಾಹಿತಿ ಕಾಯ್ದೆ ಕಾರ್ಯಾಧ್ಯಕ್ಷ ಸೂರ್ಯ ಮುಕುಂದರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ. ರಾಜು, ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ಬೆಂಗಳೂರು ದಕ್ಷಿಣ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಡಿ.ಕೆ. ಕಾಂತರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ಮುಖಂಡರಾದ ಸಿಎನ್‌ಆರ್ ವೆಂಕಟೇಶ್, ಮಲ್ಲವೇಗೌಡ, ರಮೇಶ್, ಸುನೀಲ್ ಹಾಗೂ ಇತರರು ಇದ್ದರು.
ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನವೇ ನಮ್ಮ ಪಕ್ಷದ ಸಿದ್ಧಾಂತ. ಆ ಸಿದ್ಧಾಂತದ ಜೊತೆಗೆ ಆರ್ಥಿಕ ಸ್ವಾವಲಂಬನೆಗೆ ಕಾರಣವಾಗಿರುವ ಗ್ಯಾರಂಟಿ ಯೋಜನೆಗಳು ಮತ್ತು ಪಕ್ಷದ ಕಾರ್ಯಕ್ರಮಗಳನ್ನು ಪ್ರಚಾರ ಸಮಿತಿ ಜನರಿಗೆ ತಲುಪಿಸಲಿದೆವಿನಯಕುಮಾರ್ ಸೊರಕೆ ಅಧ್ಯಕ್ಷ ಕೆಪಿಸಿಸಿ ಪ್ರಚಾರ ಸಮಿತಿ
‘ಸಂತೋಷ್–ಪ್ರಭಾಕರ ಭಟ್ ಹಗ್ಗಜಗ್ಗಾಟ ಕಾರಣ’
‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಎಸ್‌ಐಟಿ ತನಿಖೆ ಸುತ್ತ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಆ ಪಕ್ಷದ ರಾಷ್ಟ್ರೀಯ ನಾಯಕ ಬಿ.ಎಲ್. ಸಂತೋಷ್ ಮತ್ತು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ನಡುವಣ ಹಗ್ಗಜಗ್ಗಾಟ ಕಾರಣ. ಅಲ್ಲಿನ ಪ್ರಕರಣಗಳ ಬಗ್ಗೆ ಧ್ವನಿ ಎತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಆರ್‌ಎಸ್‌ಎಸ್ ಮೂಲದವರು. ಅವರನ್ನು ಪ್ರಚೋದಿಸುತ್ತಿರುವವರು ಯಾರು? ಧರ್ಮಸ್ಥಳ ಪ್ರಕರಣದಲ್ಲಿ ಒಂದು ಕಡೆ ಚಿವುಟುವ ಇನ್ನೊಂದು ಕಡೆ ತೂಗುವ ಕೆಲಸವನ್ನು ಪ್ರಭಾಕರ ಭಟ್ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಸಂತೋಷ್ ಮಾರ್ಗದರ್ಶನದಲ್ಲಿ ಬಿಜೆಪಿಯು ಪ್ರತಿಭಟನೆ ಮತ್ತು ಧರ್ಮಯಾತ್ರೆ ನಡೆಸುತ್ತಿದೆ’ ಎಂದು ವಿನಯಕುಮಾರ್ ಸೊರಕೆ ಆರೋಪಿಸಿದರು.
‘ಧರ್ಮಸ್ಥಳ ವಿಷಯದಲ್ಲಿ ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿಯವರಿಗೆ ಯಾವುದೇ ಹಿತಾಸಕ್ತಿ ಇಲ್ಲ. ಸಾಕ್ಷಿದಾರ ಕೋರ್ಟ್ ಎದುರು ನೀಡಿದ ಹೇಳಿಕೆ ಆಧರಿಸಿ ಕೋರ್ಟ್ ಆದೇಶದ ಮೇರೆಗೆ ಎಸ್‌ಐಟಿ ರಚನೆಯಾಗಿ ತನಿಖೆ ನಡೆಯುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೂ ಎಸ್‌ಐಟಿ ತನಿಖೆ ಸ್ವಾಗತಿಸಿದ್ದಾರೆ. ಎಸ್‌ಐಟಿ ತನಿಖೆಯಿಂದ ವಾಸ್ತವಾಂಶ ಹೊರಬರಲಿದೆ. ಪ್ರಕರಣದ ವಿಷಯದಲ್ಲಿ ರಾಜ್ಯ ಸರ್ಕಾರವನ್ನು ದೂಷಿಸುವ ಇದೇ ಬಿಜೆಪಿಯವರ ಅವಧಿಯಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದಿದೆ. ಆಗ ಮುಖ್ಯಮಂತ್ರಿಯಾಗಿದ್ದವರು ಡಿ.ವಿ. ಸದಾನಂದ ಗೌಡ ಮತ್ತು ಗೃಹ ಸಚಿವರಾಗಿದ್ದವರು ಆರ್. ಅಶೋಕ. ಆದರೆ ಆಕೆಯ ಸಾವಿಗೆ ಇಬ್ಬರೂ ನ್ಯಾಯ ಕೊಡಿಸಲಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.