ವಿಶ್ವ ಕಿಡ್ನಿ ದಿನಾಚರಣೆ ಪ್ರಯುಕ್ತ ರಾಮನಗರದಲ್ಲಿ ಬುಧವಾರ ಬೆಂಗಳೂರಿನ ಎನ್.ಯು ಆಸ್ಪತ್ರೆ, ರೋಟರಿ ಸಿಲ್ಕ್ ಸಿಟಿ ಹಾಗೂ ಕ್ರೆಸೆಂಟ್ ಚೈಲ್ಡ್ ಕೇರ್ ಮತ್ತು ಪಾಲಿಕ್ಲಿನಿಕ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ವಾಕಾಥಾನ್‌ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಚಾಲನೆ ನೀಡಿದರು.
ರಾಮನಗರ: ವಿಶ್ವ ಕಿಡ್ನಿ ದಿನಾಚರಣೆ ಪ್ರಯುಕ್ತ ನಗರದಲ್ಲಿ ಬುಧವಾರ ಬೆಂಗಳೂರಿನ ಎನ್.ಯು ಆಸ್ಪತ್ರೆ, ರೋಟರಿ ಸಿಲ್ಕ್ ಸಿಟಿ ಹಾಗೂ ಕ್ರೆಸೆಂಟ್ ಚೈಲ್ಡ್ ಕೇರ್ ಮತ್ತು ಪಾಲಿಕ್ಲಿನಿಕ್ ಸಹಭಾಗಿತ್ವದಲ್ಲಿ, ‘ನಿಮ್ಮ ಕಿಡ್ನಿಗಳು ಆರೋಗ್ಯವಾಗಿವೆಯೇ? ಬೇಗ ಪರೀಕ್ಷಿಸಿ, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ’ ಎಂಬ ಘೋಷವಾಕ್ಯದೊಂದಿಗೆ ವಾಕಾಥಾನ್ ಜರುಗಿತು.
ಜಿಲ್ಲಾಧಿಕಾರಿ ಕಚೇರಿಯಿಂದ ಶುರುವಾದ ವಾಕಾಥಾನ್‌ನಲ್ಲಿ ವಿದ್ಯಾರ್ಥಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಕ್ಲಬ್, ಸಂಘ–ಸಂಸ್ಥೆಗಳ ಸದಸ್ಯರು ಭಾಗಹಿಸಿದ್ದರು. ಎಸ್.ಪಿ ಕಚೇರಿ ವೃತ್ತ, ಜೂನಿಯರ್ ಕಾಲೇಜು ರಸ್ತೆ, ವಾಟರ್ ಟ್ಯಾಂಕ್ ವೃತ್ತ, ರೈಲು ನಿಲ್ದಾಣ ರಸ್ತೆ, ಜನಾರ್ದನ ಹೋಟೆಲ್ ಮಾರ್ಗವಾಗಿ ಸಾಗಿದ ವಾಕಾಥಾನ್ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಅಂತ್ಯಗೊಂಡಿತು.
ವಾಕಾಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ‘ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ. ಹಣ, ಅಧಿಕಾರ, ಸಂಪತ್ತು ಇದ್ದು ಆರೋಗ್ಯವಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಹಾಗಾಗಿ ಆರೋಗ್ಯ ಕಾಳಜಿ ಮಾಡಬೇಕು. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಮಾತನಾಡಿ, ‘ನಿಯಮಿತ ವ್ಯಾಯಾಮವು ಆರೋಗ್ಯವವನ್ನು ಉತ್ತಮವಾಗಿಟ್ಟು ಕಾಯಿಲೆಗಳನ್ನು ದೂರ ಮಾಡುತ್ತದೆ. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ತೋರಿ, ನಂತರ ಕೊರಗುವ ಪರಿಸ್ಥಿತಿ ತಂದುಕೊಳ್ಳದೆ ನಿತ್ಯ ವ್ಯಾಯಾಮ ಮಾಡಬೇಕು’ ಎಂದು ಹೇಳಿದರು.
ರೋಟರಿ ಅಧ್ಯಕ್ಷ ಶ್ರೀಧರ್ ಬಿ.ಎನ್, ಕರ್ನಾಟಕ ಐಎಂಎ ಉಪಾಧ್ಯಕ್ಷರಾದ ಡಾ. ಮಳವೇಗೌಡ, ರಾಮನಗರ ಅಧ್ಯಕ್ಷ ಡಾ. ಸಂಪಂಗಿ ರಾಮಯ್ಯ, ಕಾರ್ಯದರ್ಶಿ ಡಾ. ಮಧುಸೂದನ್, ಕ್ರೆಸೆಂಟ್ ಚೈಲ್ಡ್ ಕೇರ್ ಮತ್ತು ಪಾಲಿಕ್ಲಿನಿಕ್‌ನ ಡಾ. ಮಹಮ್ಮದ್ ಸೈಯ್ಯದ್ ಅಹಮದ್, ಬಿಗ್ ಮಾರ್ಟ್‌ನ ಆರ್.ಪಿ. ಪ್ರದೀಪ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.