ADVERTISEMENT

ರಾಮನಗರ| 50 ಎಕರೆ ವಕ್ಫ್‌ ಆಸ್ತಿ ಕಬಳಿಸಲು ಯತ್ನ: ನಾಲ್ವರ ವಿರುದ್ಧ ಪ್ರಕರಣ

ವಕ್ಫ್ ಅಧಿಕಾರಿ ಸೀಲ್, ಸಹಿ ನಕಲು ಮಾಡಿ ಸುಳ್ಳು ದಾಖಲೆ ಸೃಷ್ಟಿಸಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:00 IST
Last Updated 1 ಫೆಬ್ರುವರಿ 2026, 6:00 IST
   

ರಾಮನಗರ: ವಂಚಕರ ಜಾಲವೊಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಕ್ಫ್ ಮಂಡಳಿಗೆ ಸೇರಿದ ತಾಲ್ಲೂಕಿನ ಬಿಳಗುಂಬ ಗ್ರಾಮದಲ್ಲಿರುವ ವಕ್ಫ್‌ಗೆ ಸೇರಿದ ಸುಮಾರು ₹100 ಕೋಟಿ ಮೌಲ್ಯದ 50 ಎಕರೆ 14 ಗುಂಟೆ ಜಮೀನು ಕಬಳಿಸಲು ಯತ್ನಿಸಿದೆ. ಈ ಕುರಿತು, ವಕ್ಫ್ ಮಂಡಳಿಯ ಜಿಲ್ಲಾ ಅಧಿಕಾರಿ ಮದೀಹಾ ಇಲಿಯಾಸ್ ನೀಡಿದ ದೂರಿನ ಮೇರೆಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಮನಗರದ ಮಸ್ಜಿದ್ ಮೊಹಲ್ಲಾದ ರಸೂಲ್ ಖಾನ್ ಪುತ್ರರಾದ ಅಜ್ಮತ್ ಉಲ್ಲಾ ಖಾನ್, ಅಮ್ಜದ್ ಉಲ್ಲಾ ಖಾನ್, ಆಸೀಫ್ ಉಲ್ಲಾ ಖಾನ್ ಹಾಗೂ ಫಾರೂಖ್ ಉಲ್ಲಾ ಖಾನ್ ಆರೋಪಿಗಳು. ವಿಷಯ ಬೆಳಕಿಗೆ ಬಂದು ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಸೇರಿದಂತೆ ಇವರೊಂದಿಗೆ ಜಮೀನು ಖರೀದಿಗೆ ಕರಾರು ಮಾಡಿಕೊಂಡಿದ್ದ ಬೆಂಗಳೂರಿನ ಯಲಹಂಕದ ಮಹಮ್ಮದ್ ನಯೀಂ ತಲೆ ಮರೆಸಿಕೊಂಡಿದ್ದಾನೆ.

ದಾನದ ಜಮೀನು: ಗ್ರಾಮದ ಸರ್ವೆ ನಂ. 231, 284, 285, 286, 74/14, 74/15, 74/16ರಲ್ಲಿರುವ 50 ಎಕರೆ 14 ಗುಂಟೆ ಜಮೀನನ್ನು ಸಾಹುಕಾರ್ ಅಬ್ದುಲ್ ನಬೀಬ್ ಸಾಬ್ ಅವರು 1944ರಲ್ಲಿ ಅಂಜುಮನ್ ಇಮಾಯತ್ ಇಸ್ಲಾಂ ಕಮಿಟಿಗೆ ನೋಂದಾಯಿತ ದಾನಪತ್ರ ಮಾಡಿಕೊಟ್ಟಿದ್ದಾರೆ. ಅದರಂತೆ, ಕಮಿಟಿ ತನ್ನ ಹೆಸರಿಗೆ ಖಾತೆ ಮಾಡಿಕೊಂಡು ಸ್ವಾಧೀನ ಹೊಂದಿದೆ.

ADVERTISEMENT

ಈ ಸ್ವತ್ತನ್ನು ವಕ್ಫ್ ಸ್ವತ್ತು ಎಂದು ಸೇರ್ಪಡೆ ಮಾಡಬೇಕೆಂದು ಸಲ್ಲಿಸಿದ ಅರ್ಜಿ ಮೇರೆಗೆ, 1968ರ ಫೆ. 8ರಂದು ಮೈಸೂರು ಗೆಜೆಟ್‌ನಲ್ಲಿ ನಮೂದಾಗಿ ಅದಕ್ಕೆ ಸಂಬಂಧಪಟ್ಟಂತೆ ಗೆಜೆಟ್ ನೋಟಿಫಿಕೇಷನ್ ಕೂಡ ಆಗಿದೆ. ಸುಮಾರು 80 ವರ್ಷಗಳಿಂದಲೂ ಅಂಜುಮನ್ ಇಮಾಯತ್ ಇಸ್ಲಾಂ ಆಸ್ತಿಯಾಗಿ ವಕ್ಫ್ ಸ್ವತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಕಲಿ ಲೆಟರ್‌ಹೆಡ್: 2023ರ ಡಿ. 21ರಂದು ಜಿಲ್ಲಾ ವಕ್ಫ್ ಅಧಿಕಾರಿ ಕಚೇರಿಯ ಲೆಟರ್‌ಹೆಡ್‌ನಲ್ಲಿ ರಾಮನಗರ ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗೆ ಸದರಿ ಜಮೀನನ್ನು ವಕ್ಫ್ ಆಸ್ತಿಗಳ ಕಂದಾಯ ದಾಖಲಾತಿ ಸರಿಪಡಿಸುವ ಹಾಗೂ ವಕ್ಫ್ ಸ್ವತ್ತು ಎಂದು ನಮೂದಿಸಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು.

ಆರೋಪಿಗಳು ವಕ್ಫ್ ಕಚೇರಿಯಿಂದ ತಹಶೀಲ್ದಾರ್ ಕಚೇರಿಗೆ ನೀಡಿದ್ದ ಲೆಟರ್‌ಹೆಡ್, ಸೀಲ್ ಮತ್ತು ಹಾಗೂ ಅಧಿಕಾರಿ ಸಹಿಯನ್ನು ನಕಲು ಮಾಡಿ, ರಸೂಲ್ ಖಾನ್ ಅವರೇ ಜಮೀನು ಮಾಲೀಕ ಎಂಬ ಪ್ರಮಾಣಪತ್ರ ಸೃಜನೆ ಮಾಡಿದ್ದಾರೆ. ಖಾನ್ ಹೆಸರಿನಲ್ಲಿ ವಕ್ಫ್ ಕಚೇರಿಯಿಂದ ಸದರಿ ಸರ್ವೆ ನಂಬರ್‌ಗಳ ಕುರಿತು ಜಿಲ್ಲಾ ವಕ್ಫ್ ಕಚೇರಿ ಯಾವುದೇ ಆಕ್ಷೇಪಣೆ ಹೊಂದಿಲ್ಲ ಎಂದು ಎನ್‌ಒಸಿ ಮತ್ತು ಪ್ರಮಾಣಪತ್ರ ನೀಡಿದಂತೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ.

ವಕ್ಫ್ ಕಚೇರಿಯಿಂದ ಎನ್‌ಒಸಿ ಕೊಟ್ಟಿರುವ ವಿಷಯ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿ ಎಚ್ಚೆತ್ತುಕೊಂಡು ಪರಿಶೀಲಿಸಿದಾಗ, ಅದು ನಕಲಿ ಎನ್‌ಒಸಿ ಎಂಬುದು ಗೊತ್ತಾಗಿದೆ. ನಂತರ, ಅದರ ಜಾಡು ಹಿಡಿದು ಪರಿಶೀಲಿಸಿದಾಗ ಆರೋಪಿಗಳು ಕಚೇರಿಯ ಲೆಟರ್‌ಹೆಡ್, ಸೀಲ್ ಹಾಗೂ ಸಹಿ ನಕಲು ಮಾಡಿ ಸುಳ್ಳು ದಾಖಲೆ ಸೃಷ್ಟಿಸಿ ಮಂಡಳಿಯ ಜಮೀನು ಕಬಳಿಸಲು ಯತ್ನಿಸಿರುವುದು ಗೊತ್ತಾಗಿದೆ. ಬಳಿಕ, ಅಧಿಕಾರಿ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.