ADVERTISEMENT

ರಾಮನಗರ–ಬಿಡದಿ ತ್ಯಾಜ್ಯ ವಿಲೇವಾರಿ ಘಟಕ: ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಶುರು

ಹರಿಸಂದ್ರದಲ್ಲಿ ರಾಮನಗರ–ಬಿಡದಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 5:07 IST
Last Updated 18 ಏಪ್ರಿಲ್ 2025, 5:07 IST
ರಾಮನಗರ ತಾಲ್ಲೂಕಿನ ಹರಿಸಂದ್ರದಲ್ಲಿ ನಗರಸಭೆ ಮತ್ತು ಬಿಡದಿ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡಲಾಯಿತು. ನಗರಸಭೆ ಪೌರಾಯುಕ್ತ ಡಾ. ಜಯಣ್ಣ, ಬಿಡದಿ ಪುರಸಭೆ ಮುಖ್ಯಾಧಿಕಾರಿ ರಮೇಶ್ ಹಾಗೂ ಅಧಿಕಾರಿಗಳು ಕಾಮಗಾರಿ ಪರಿಶೀಲಿಸಿದರು 
ರಾಮನಗರ ತಾಲ್ಲೂಕಿನ ಹರಿಸಂದ್ರದಲ್ಲಿ ನಗರಸಭೆ ಮತ್ತು ಬಿಡದಿ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡಲಾಯಿತು. ನಗರಸಭೆ ಪೌರಾಯುಕ್ತ ಡಾ. ಜಯಣ್ಣ, ಬಿಡದಿ ಪುರಸಭೆ ಮುಖ್ಯಾಧಿಕಾರಿ ರಮೇಶ್ ಹಾಗೂ ಅಧಿಕಾರಿಗಳು ಕಾಮಗಾರಿ ಪರಿಶೀಲಿಸಿದರು    

ರಾಮನಗರ: ನಗರದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ತಾಲ್ಲೂಕಿನ ಹರಿಸಂದ್ರದಲ್ಲಿ ಗುರುತಿಸಿರುವ ಜಾಗದಲ್ಲಿ ರಾಮನಗರ ನಗರಸಭೆ ಮತ್ತು ಬಿಡದಿ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ನಗರಸಭೆ ಮತ್ತು ಪುರಸಭೆ ಅಧಿಕಾರಿಗಳು, ಪೊಲೀಸ್ ಬಂದೋಬಸ್ತ್‌ನಲ್ಲಿ ಗುರುವಾರ ಬೆಳಿಗ್ಗೆ ಚಾಲನೆ ನೀಡಿದರು.

ಯಾವುದೇ ಮುನ್ಸೂಚನೆ ಇಲ್ಲದೆ ಬೆಳಿಗ್ಗೆ ಅಧಿಕಾರಿಗಳು 100ಕ್ಕೂ ಹೆಚ್ಚು ಪೊಲೀಸರು ಹಾಗೂ 5 ಜೆಸಿಬಿಗಳೊಂದಿಗೆ ಘಟಕದ ಸ್ಥಳಕ್ಕೆ ಬಂದರು. ಸ್ಥಳೀಯರು ಕಾಮಗಾರಿಗೆ ಅಡ್ಡಿಪಡಿಸದಂತೆ ಪೊಲೀಸರು ಅಲ್ಲಲ್ಲಿ ನಾಕಾಬಂದಿ ಹಾಕಿ ಕಾವಲು ನಿಂತರು. ಜೆಸಿಬಿ ಮೂಲಕ ಸ್ಥಳವನ್ನು ಸಮತಟ್ಟುಗೊಳಿಸುವ ಕೆಲಸ ಶುರುವಾಯಿತು.

ಪೊಲೀಸ್ ಭದ್ರತೆಯಲ್ಲಿ ಘಟಕದ ಕಾಮಗಾರಿ ನಡೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ಮಹಿಳೆಯರು ಸೇರಿದಂತೆ ಸ್ಥಳೀಯರು ಸ್ಥಳಕ್ಕೆ ಬಂದು ಕಾಮಗಾರಿಗೆ ಅಡ್ಡಿಪಡಿಸಲು ಯತ್ನಿಸಿದರು. ಆಗ ಪೊಲೀಸರು ಅವರನ್ನು ತಡೆದರು. ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದ ಸ್ಥಳೀಯರು ಮನವೊಲಿಕೆಗೆ ಬಗ್ಗದಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದು, ನಂತರ ಬಿಟ್ಟು ಕಳಿಸಿದರು.

ADVERTISEMENT

ರದ್ದಾಗಿದ್ದ ಕಾರ್ಯಕ್ರಮ: ಗ್ರಾಮದಲ್ಲಿ ತಲಾ 9 ಎಕರೆ ಜಾಗದಲ್ಲಿ ನಗರಸಭೆ ಮತ್ತು ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಕಳೆದ ಮಾರ್ಚ್ 5ರಂದು ಸ್ಥಳದಲ್ಲಿ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ ನಿಗದಿಯಾಗಿತ್ತು.

ವಿಷಯ ತಿಳಿದ ಸ್ಥಳೀಯರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶಾಸಕರನ್ನು ಮುತ್ತಿಕೊಂಡು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿ, ಭೂಮಿಪೂಜೆಗೆ ಅಡ್ಡಿಪಡಿಸಿದ್ದರು. ಪ್ರತಿಭಟನಾಕಾರರು ಮನವೊಲಿಕೆಗೆ ಬಗ್ಗಿದ್ದರಿಂದ ಶಾಸಕರು ಕಾರ್ಯಕ್ರಮ ರದ್ದುಪಡಿಸಿ ಹಿಂದಿರುಗಿದ್ದರು.

ಹಿಂದಿನ ಕಹಿ ಘಟನೆಯಿಂದಾಗಿ ಈ ಸಲ ಕಾಮಗಾರಿಗೆ ಚಾಲನೆ ನೀಡುವ ವಿಷಯವನ್ನು ಬಹಿರಂಗಪಡಿಸದೆ ಅಧಿಕಾರಿಗಳ ತಂಡವೇ, ಪೊಲೀಸ್ ಬಂದೋಬಸ್ತ್‌ನಲ್ಲಿ ಜೆಸಿಬಿ ಸೇರಿದಂತೆ ಇತರ ವಾಹನಗಳನ್ನು ಕರೆಯಿಸಿ ಜಾಗವನ್ನು ಸಮತಟ್ಟುಗೊಳಿಸಿದರು.

ರಾಮನಗರ ತಾಲ್ಲೂಕಿನ ಹರಿಸಂದ್ರದಲ್ಲಿ ಗುರುತಿಸಿರುವ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳವನ್ನು ಜೆಸಿಬಿ ಮೂಲಕ ಸಮತಟ್ಟ ಮಾಡಲಾಯಿತು
ಮೊದಲ ದಿನ ಜಾಗವನ್ನು ಸಮತಟ್ಟ ಮಾಡಲಾಗಿದೆ. ಅಂದಾಜು ₹6.50 ಕೋಟಿ ವೆಚ್ಚದ ಘಟಕವನ್ನು ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಇದೆ
ಡಾ. ಜಯಣ್ಣ ಪೌರಾಯುಕ್ತ ರಾಮನಗರ ನಗರಸಭೆ

ವೈಜ್ಞಾನಿಕವಾಗಿ ಸಂಸ್ಕರಣೆ; ಆತಂಕ ಬೇಡ

‘ವಿಲೇವಾರಿ ಘಟಕದಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುವುದು. ಘಟಕಕ್ಕೆ ಕೇವಲ ಕಸವನ್ನು ತಂದು ರಾಶಿ ಹಾಕಿಕೊಳ್ಳುವುದಿಲ್ಲ. ರಾಷ್ಟ್ರೀಯ ಹಸಿರು ಮಂಡಳಿ ನಿರ್ದೇಶನದ ಪ್ರಕಾರ ಶೂನ್ಯ ವೇಸ್ಟ್ ಪರಿಕಲ್ಪನೆಯಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ನಡೆಯಲಿದೆ. ನಿತ್ಯ ಬರುವ ಕಸವನ್ನು ಅಂದೇ ವಿಂಗಡಿಸಿ ಹಸಿ ಕಸದಿಂದ ಗೊಬ್ಬರ ತಯಾರಿಸಿ ರೈತರಿಗೆ ಮಾರಲಾಗುವುದು. ಪ್ಲಾಸ್ಟಿಕ್ ಸೇರಿದಂತೆ ಇತರ ಒಣ ಕಸವನ್ನು ಮಾರಾಟ ಮಾಡಲಾಗುವುದು. ಹಾಗಾಗಿ ಸ್ಥಳೀಯರು ಘಟಕದ ಕುರಿತು ಯಾವುದೇ ಆತಂಕಪಡುವ ಅಗತ್ಯವಿಲ್ಲ’ ಎಂದು ರಾಮನಗರ ನಗರಸಭೆ ಪೌರಾಯುಕ್ತ ಹಾಗೂ ಬಿಡದಿ ಪುರಸಭೆಯ ಮುಖ್ಯಾಧಿಕಾರಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ಮುಂದೆ ಹೋರಾಟದ ಎಚ್ಚರಿಕೆ ರಾಮನಗರ ಮತ್ತು ಬಿಡದಿಯ ಕಸವನ್ನು ತಂದು ಗ್ರಾಮದಲ್ಲಿ ವಿಲೇವಾರಿ ಮಾಡುವುದರಿಂದ ಈ ಭಾಗದ ಕೃಷಿ ಹೈನುಗಾರಿಕೆ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಸುತ್ತಮುತ್ತಲಿನ ಪ್ರದೇಶಗಳಿಗೆ ತ್ಯಾಜ್ಯವು ದುರ್ನಾತ ಬೀರಲಿದ್ದು ಸ್ಥಳೀಯರಿಗೆ ಚರ್ಮ ರೋಗ ಸೇರಿದಂತೆ ವಿವಿಧ ಸಮಸ್ಯೆಗಳು ಎದುರಾಗಲಿವೆ. ಅಧಿಕಾರಿಗಳು ಇಂದು ಪೊಲೀಸರ ಭದ್ರತೆಯಲ್ಲಿ ಕಾಮಗಾರಿ ಶುರು ಮಾಡಿರಬಹುದು. ಮುಂದಿನ ದಿನಗಳಲ್ಲಿ ಕಾಮಗಾರಿ ವಿರೋಧಿಸಿ ದೊಡ್ಡ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದರು.

ಖಾಸಗಿ ಜಾಗದಲ್ಲೇ ವಿಲೇವಾರಿ

ಜಿಲ್ಲಾ ಕೇಂದ್ರವಾದ ರಾಮನಗರ ಮತ್ತು ಕೈಗಾರಿಕಾ ಕೇಂದ್ರವಾದ ಬಿಡದಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದಿರುವುದರಿಂದ ಖಾಸಗಿಯವರ ಜಮೀನಿಗೆ ಕಸ ಸುರಿದು ಬಾಡಿಗೆ ಪಾವತಿಸಲಾಗುತ್ತಿದೆ. ಕಸದ ಸಮಸ್ಯೆ ತೀವ್ರಗೊಂಡಾಗ ಹಿಂದಿನ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಾಲ್ಲೂಕಿನ ಹರಿಸಂದ್ರದಲ್ಲಿರುವ ಸರ್ಕಾರಿ ಜಾಗ ಗುರುತಿಸಿ ರಾಮನಗರ ನಗರಸಭೆ ಮತ್ತು ಬಿಡದಿ ಪುರಸಭೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ತಲಾ 9 ಎಕರೆ ನಿಗದಿಪಡಿಸಿದ್ದಾರೆ. ವಿಲೇವಾರಿ ಘಟಕವು ನಿರ್ಮಾಣಗೊಂಡು ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ಶುರುವಾದರೆ ರಾಮನಗರ ಮತ್ತು ಬಿಡದಿಯ ಕಸದ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.