
ಕನಕಪುರ: ತಾಲ್ಲೂಕಿನ ಬೂದುಗುಪ್ಪೆ ಗ್ರಾಮ ಮತ್ತು ಅಲ್ಲಿನ ಸರ್ಕಾರಿ ಕಾಲೇಜಿನಲ್ಲಿ ಮೂರು ವರ್ಷಗಳಿಂದ ಶುದ್ಧ ನೀರಿಲ್ಲದೆ ಪರದಾಡುವಂತಾಗಿದೆ. 2020-21ರಲ್ಲಿ ಜಿಲ್ಲಾ ಪಂಚಾಯಿತಿ ಯೋಜನೆಯಲ್ಲಿ ನೀರಿನ ಶುದ್ಧೀಕರಣ ಘಟಕ ನಿರ್ಮಿಸಲಾಗಿತ್ತು. ಆರಂಭದಲ್ಲಿ ಘಟಕ ಚೆನ್ನಾಗಿ ಕೆಲಸ ಮಾಡುತ್ತಿತ್ತು. ಎಲ್ಲರೂ ಶುದ್ಧ ನೀರು ಪಡೆಯುತ್ತಿದ್ದರು. ಆದರೆ, ಕಾಲ ಕ್ರಮೇಣ ಘಟಕ ಕೆಟ್ಟು ಹೋಗಿ ಇದುವರೆಗೂ ರಿಪೇರಿ ಮಾಡಿಲ್ಲ.
ಘಟಕದ ನಿರ್ವಹಣೆ ಜವಾಬ್ದಾರಿ ಗ್ರಾಮ ಪಂಚಾಯತ್ ಮತ್ತು ಕಾಲೇಜು ಆಡಳಿತ ಮೇಲೆ ಇದೆ. ಆದರೆ, ಇದು ನಮ್ಮ ಜವಾಬ್ದಾರಿಯಲ್ಲ ಎಂದು ಪರಸ್ಪರರು ಸುಮ್ಮನಾಗಿದ್ದಾರೆ.
ಹಣವಿದ್ದವರು ಸ್ಕೂಟರ್‌ನಲ್ಲಿ ದೂರದ ರೈಸ್ ಮಿಲ್ ಅಥವಾ ಕನಕಪುರ ನಗರಕ್ಕೆ ಹೋಗಿ ಬಾಟಲಿ ನೀರು ಕೊಂಡು ತರುತ್ತಾರೆ. ಸಾಮಾನ್ಯ ಆದಾಯದ ಕುಟುಂಬಗಳು ಬಾಡಿಗೆ ಆಟೊ ತೆಗೆದುಕೊಂಡು ನೀರು ತರುವ ಖರ್ಚನ್ನು ಭರಿಸುತ್ತಿವೆ. ಆದರೆ, ಗ್ರಾಮದ ಬಡವರು ಮಾತ್ರ ಬೇರೆ ದಾರಿಯಿಲ್ಲದೆ ಸ್ಥಳೀಯ ಬೋರ್ವೆಲ್ ಫ್ಲೋರೈಡ್ ಕಲುಷಿತ ನೀರನ್ನೇ ಕುಡಿಯಬೇಕಾಗಿದೆ. ಈ ನೀರು ಆರೋಗ್ಯಕ್ಕೆ ಹಾನಿಕಾರಕ. ಬಡವರಿಗೆ ಬೇರೆ ಆಯ್ಕೆ ಇಲ್ಲದಂತಾಗಿದೆ.
ಒಂದು ಸಣ್ಣ ರಿಪೇರಿ ಮಾಡಿಸುವ ಸರಳ ವಿಷಯವು ಜವಾಬ್ದಾರಿ, ಗೊಂದಲದ ಕಾರಣದಿಂದ ಇಡೀ ಗ್ರಾಮ ಮತ್ತು ನೂರಾರು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಸಮಸ್ಯೆ ಬಗೆಹರಿಸಲು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನೀರಿನ ಘಟಕ ಮತ್ತು ಕಾಲೇಜು ಇರುವ ಪ್ರದೇಶವನ್ನು ಪಂಚಾಯಿತಿಯಿಂದ ನಗರಸಭೆಗೆ ಹಸ್ತಾಂತರಿಸಲಾಗಿದೆ. ಅವರು ಕಂದಾಯವನ್ನು ವಸೂಲಿ ಮಾಡುತ್ತಿದ್ದು ಘಟಕದ ನಿರ್ವಹಣೆ ಮತ್ತು ರಿಪೇರಿಯನ್ನು ಅವರೇ ಮಾಡಬೇಕಿದೆ ಎನ್ನುತ್ತಾರೆ ಬೂದುಗುಪ್ಪೆ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ವೆಂಕರಾಜು.
ಘಟಕದ ನಿರ್ವಹಣೆ ಯಾರಿಗೆ ಸೇರಿದ್ದು ಎಂದು ಗೊತ್ತಾಗುತ್ತಿಲ್ಲ. ಸಾರ್ವಜನಿಕರ ಹಿತ ದೃಷ್ಟಿಯಿಂದ ಇದರ ರಿಪೇರಿ ಮಾಡಿಸಬೇಕು
-ನಾಗರಾಜು ಗ್ರಾಮಸ್ಥರು ಬೂದಿಗುಪ್ಪೆ
ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ರಿಪೇರಿ ಮಾಡಿಸಿಲ್ಲ. ಕುಡಿಯುವ ನೀರಿಗಾಗಿ ಕೊಳವೆಬಾವಿ ಆಶ್ರಯಿಸಬೇಕಾಗಿದೆ
- ಸುನಂದ ಸ್ಥಳೀಯರು
ಕನಕಪುರ ನಗರಕ್ಕೆ ಹೋಗಿ ನೀರು ತರಬೇಕಿದೆ. ಮನೆಯಲ್ಲಿ ಗಂಡಸರು ಮತ್ತು ಸ್ಕೂಟರ್ ಇದ್ದವರು ಮಾತ್ರ ನೀರು ತರುತ್ತಾರೆ
-ಗಂಗಾಧರಯ್ಯ ಬುದಿಗುಪ್ಪೆ ಗ್ರಾಮಸ್ಥ
ಅರ್ಕಾವತಿ ನದಿಯಲ್ಲಿ ಕೊಳಚೆ ನೀರು ಹರಿಯುವುದರಿಂದ ಕಲುಷಿತವಾಗಿದೆ. ಘಟಕ ರಿಪೇರಿ ಮಾಡಿಸಿದರೆ ಅನುಕೂಲ ಆಗುತ್ತದೆ
- ಸಿದ್ದರಾಜು ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.