ರಾಮನಗರ ತಾಲ್ಲೂಕಿನ ಪಾದರಹಳ್ಳಿಯಲ್ಲಿ ಡಾ. ಬಂಜಗೆರೆ ಜಯಪ್ರಕಾಶ್ ಬಳಗವು ಮಂಗಳವಾರ ಹಮ್ಮಿಕೊಂಡಿದ್ದ ‘ಜನಪರ ಜೇಪಿ–60’ ಕಾರ್ಯಕ್ರಮದಲ್ಲಿ ಗಣ್ಯರು ಬಂಜಗೆರೆ ಕುರಿತ ಗಂಧಕುಟಿ ವೆಬ್‌ಸೈಟ್ ಅನಾವರಣ ಮಾಡಿದರು.
ರಾಮನಗರ: ‘ಲೇಖಕ ಸಾಮಾಜಿಕವಾಗಿ ಕ್ರಿಯಾಶೀಲನಾಗಿದ್ದರೆ ಮಾತ್ರ ಆತನಿಂದ ಸತ್ವಯುತ ಸಾಹಿತ್ಯ ಬರಲು ಸಾಧ್ಯ. ಸಾಹಿತ್ಯವು ಸಾಮಾಜಿಕ ಒಡನಾಟದಿಂದ ರೂಪುಗೊಂಡಷ್ಟೂ ಅದರ ಸತ್ವ ಸಮಕಾಲೀನವಾಗಿರುತ್ತದೆ’ ಎಂದು ಲೇಖಕ ಹಾಗೂ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಪಾದರಹಳ್ಳಿಯ ಶಿಲ್ಹಾಂದರ ರೆಸಾರ್ಟ್‌ನಲ್ಲಿ ಬಂಜಗೆರೆ ಜಯಪ್ರಕಾಶ್ ಬಳಗವು ಮಂಗಳವಾರ ಹಮ್ಮಿಕೊಂಡಿದ್ದ ‘ಜನಪರ ಜೇಪಿ–60’ ಹಾಗೂ ಗಂಧಕುಟಿ ವೆಬ್‌ಸೈಟ್ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸುಂದರ ಸಾಹಿತ್ಯ ಬರೆಯುವುದಕ್ಕಾಗಿ ಸಾಹಿತಿಗಳು ದಂತಗೋಪುರದಲ್ಲಿ ಇರಬೇಕೆನ್ನುವ ಭ್ರಮೆ ಯಾರಿಗಾದರೂ ಇದ್ದರೆ, ಬಿಟ್ಟು ಬಿಡುವುದು ಒಳ್ಳೆಯದು’ ಎಂದರು.
‘ಸಾರ್ವಕಾಲಿಕ ಮಾನ್ಯತೆ ಪಡೆದಿರುವ ಬಹುಪಾಲು ಲೇಖಕ–ಲೇಖಕಿಯರು ಸಾಮಾಜಿಕ ಕ್ರಿಯಾಶೀಲತೆ ಮತ್ತು ಸಾಹಿತ್ಯದ ಕ್ರಿಯಾಶೀಲತೆ ಎರಡನ್ನೂ ಹೊಂದಿದವರೇ ಆಗಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರಿಂದಿಡಿದು ಮಹಾ ಶ್ವೇತಾದೇವಿ, ಅರುಂಧತಿ ರಾಯ್, ಬಾನು ಮುಷ್ತಾಕ್ ಸೇರಿದಂತೆ ಹಲವರು ಕೇವಲ ಸಾಹಿತ್ಯ ಕ್ರಿಯೆಯ ಮೂಲಕ ದೊಡ್ಡವರಾದವರಲ್ಲ’ ಎಂದು ಹೇಳಿದರು.
‘ಬೂಕರ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಬಾನು ಅವರು ಕನ್ನಡದ ಒಳ್ಳೆಯ ಕಥೆಗಾರ್ತಿ ಮಾತ್ರವಲ್ಲ, ಮಹಿಳಾ ಚಳವಳಿ ಭಾಗವಾಗಿ ಮತ್ತು ಪತ್ರಕರ್ತರಾಗಿ ಅನ್ಯಾಯದ ವಿರುದ್ಧ ದನಿ ಎತ್ತಿಕೊಂಡು ಬಂದವರು. ಅತ್ತ ಇಸ್ಲಾಂ ಧರ್ಮದ ಮೂಲಭೂತವಾದಿಗಳೊಂದಿಗೆ, ಇತ್ತ ಹಿಂದೂ ಧರ್ಮದ ಸನಾತನವಾದಿಗಳೊಂದಿಗೆ ಸಂಘರ್ಷದಲ್ಲಿದ್ದವರು. ಹಾಗಾಗಿ, ಅವರ ಕಥೆಗಳಿಗೆ ವಿಶಿಷ್ಟ ಅರ್ಥವಂತಿಕೆ ಇದೆ. ಅದನ್ನೇ ಅಂತರರಾಷ್ಟ್ರೀಯ ಸಮುದಾಯ ಗುರುತಿಸಿ ಅವರ ಕೃತಿಗೆ ಬೂಕರ್ ಪ್ರಶಸ್ತಿಯ ಮನ್ನಣೆ ನೀಡಿದೆ’ ಎಂದು ಹೇಳಿದರು.
ಸಮಾಜಶಾಸ್ತ್ರಜ್ಞ ಡಾ. ಸಿ.ಜಿ. ಲಕ್ಷ್ಮೀಪತಿ, ‘ಸುರಕ್ಷಿತ ವಲಯ ಬಿಟ್ಟು ಹೋರಾಟದ ಕಲ್ಲು–ಮುಳ್ಳಿನ ಸಾರ್ವಜನಿಕ ಹಾದಿ ಆಯ್ದುಕೊಂಡ ಜೇಪಿಯದ್ದು ಡೋಂಟ್ ಕೇರ್ ವ್ಯಕ್ತಿತ್ವ. ಎಂದಿಗೂ ತನ್ನತನವನ್ನು ಬಿಟ್ಟುಕೊಡದೆ ಬೇರೆಯವರನ್ನು ಪ್ರಭಾವಿಸುತ್ತಲೇ ಬಂದಿದ್ದಾರೆ. ಚಳವಳಿ ಹಾಗೂ ಬಂಡಾಯದ ಸಂಗಾತಿಯಾಗಿ, ಹಿರಿಯರು- ಕಿರಿಯರೆನ್ನದೆ ಎಲ್ಲರ ಪ್ರೀತಿ ಗಳಿಸಿರುವ ವಿಶಾಲ ಹೃದಯಿ’ ಎಂದು ಬಣ್ಣಿಸಿದರು.
ಮೈಸೂರಿನ ರಂಗಾಯಣ ನಿರ್ದೇಶಕ ಸತೀಶ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ಲೇಖಕರಾದ ಯೋಗೇಶ್ ಮಾಸ್ಟರ್, ರಮೇಶ್, ರವಿಕುಮಾರ್ ಬಾಗಿ, ಸ್ವಾಮಿ ಆನಂದ್, ಕೊತ್ತಿಪುರ ಜಿ. ಶಿವಣ್ಣ, ಆರ್. ನಾಗರಾಜು ಹಾಗೂ ಇತರರು ಇದ್ದರು.
ಮನ್ನಣೆ ಕೊಟ್ಟ ಸಾಮಾಜಿಕ ಕ್ರಿಯಾಶೀಲತೆ’:
‘ನನಗೆ ಸಿಕ್ಕಿರುವ ಮನ್ನಣೆ ಕೇವಲ ನನ್ನ ಸಾಹಿತ್ಯದ ಶ್ರೇಷ್ಠತೆಯಿಂದ ದೊರೆತಿದ್ದಲ್ಲ. ಬದಲಿಗೆ ನನ್ನ ಸಾಮಾಜಿಕ ಕ್ರಿಯಾಶೀಲತೆಯ ಹಿನ್ನೆಲೆಯಿಂದ ಸಿಕ್ಕಿದ್ದು. ಇಲ್ಲದಿದ್ದರೆ ನಾನೂ ಎಷ್ಟೋ ಸಾಮಾನ್ಯ ಲೇಖಕರಲ್ಲಿ ಸಾಮಾನ್ಯ ಲೇಖಕನಾಗಿರುತ್ತಿದ್ದೆ. ಸಮಾಜಕ್ಕೆ ಏನನ್ನಾದರೂ ನೀಡಲು ಮುಂದಾಗುವವರನ್ನು ಸಮಾಜ ಮರೆಯುವುದಿಲ್ಲ. ನಾನು ಅತ್ಯಂತ ಸಾಮಾನ್ಯ ಅನಕ್ಷರಸ್ಥ ಕುಟುಂಬದ ಹಿನ್ನೆಲೆಯಿಂದ ಬಂದವನು. ಮೈಸೂರಿನ ಮಹಾರಾಜ ಕಾಲೇಜಿಗೆ ಓದಲು ಹೋದಾಗ ಜಗತ್ತಿನ ಅನುಭವ ವ್ಯಾಪಕವಾಗಿ ಸಿಕ್ಕಿತು. ಅಲ್ಲಿನ ಸಾಂಸ್ಕೃತಿಕ ವಾತಾವರಣ ನನ್ನನ್ನು ಸಾಹಿತಿ ಹೋರಾಟಗಾರ ಹಾಗೂ ನಾಯಕನನ್ನಾಗಿ ರೂಪಿಸಿತು. ಎಲ್ಲಾ ಜಾತಿಗಳ ಜನರ ಪ್ರೀತಿ ಮತ್ತು ಪ್ರೋತ್ಸಾಹ ಸಿಕ್ಕಿತು. ಮನುಷ್ಯ ಗ್ರಾಮಸೀಮೆಯ ಅನುಭವ ಲೋಕದ ಕೂಪದಲ್ಲಿ ಸಿಲುಕಿಕೊಳ್ಳದೆ ತನ್ನ ಅನುಭವದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು. ಆಗಲೇ ಅವನು ವಿಶ್ವಮಾನವನಾಗಲು ಸಾಧ್ಯ’ ಎಂದು ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.