ADVERTISEMENT

ಹಂದಿಗೆ ಬಂದೂಕು ಉಲ್ಟಾ ಮಾಡಿ ಹೊಡೆದಾಗ ಆಕಸ್ಮಿಕವಾಗಿ ಹಾರಿದ ಗುಂಡು: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 7:13 IST
Last Updated 21 ನವೆಂಬರ್ 2025, 7:13 IST
   

ಮಾಗಡಿ: ಕಾಡುಪ್ರಾಣಿ ಬೇಟೆಗೆ ಹೋಗಿದ್ದಾಗ ನಾಡ ಬಂದೂಕಿನಿಂದ ಹಾರಿಸಿದ ಗುಂಡು ತೊಡೆಗೆ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕೆಬ್ಬೆಪಾಳ್ಯದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.

ಗ್ರಾಮದ ಪಾಂಡುರಂಗ (35) ಮೃತರು‌. ಸ್ನೇಹಿತ ಕಿರಣ್ ಅವರೊಂದಿಗೆ ಪಾಂಡುರಂಗ ಅವರು ತಮ್ಮ ನಾಡ ಬಂದೂಕಿನೊಂದಿಗೆ ಗ್ರಾಮದ ಹೊರವಲಯದಲ್ಲಿ ಬೇಟೆಗೆ ತೆರಳಿದ್ದರು.

ಇಬ್ಬರೂ ಒಂದೊಂದು ಜಾಗದಲ್ಲಿ ನಿಂತು ಪ್ರಾಣಿ ಬರುವುದನ್ನು ಗಮನಿಸುತ್ತಿದ್ದರು. ಈ ವೇಳೆ, ಕಾಡುಹಂದಿ ಪಾಂಡುರಂಗ ಅವರತ್ತ ಏಕಾಏಕಿ ನುಗ್ಗಿ ಬಂದಿದೆ. ಆಗ ಬಂದೂಕನ್ನು ಉಲ್ಟಾ ಮಾಡಿಕೊಂಡು‌ ಹಂದಿಗೆ ಹೊಡೆಯಲು ಮುಂದಾಗಿದ್ದಾರೆ ಎಂದು ಮಾಗಡಿ ಠಾಣೆ ಪೊಲೀಸರು ತಿಳಿಸಿದರು.

ADVERTISEMENT

ಏಟಿಗೆ ಸಿಗದೆ‌ ಹಂದಿ ತಪ್ಪಿಸಿಕೊಂಡಿದ್ದರಿಂದ ಬಂದೂಕು ನೆಲಕ್ಕೆ ಬಡಿದು ಹಾರಿದ ಗುಂಡು ಪಾಂಡುರಂಗ ಅವರ ತೊಡೆಗೆ ತಗುಲಿದೆ. ನೋವಿನಿಂದ‌ ಸ್ಥಳದಲ್ಲೇ ಕುಸಿದ ಅವರನ್ನು ಸ್ನೇಹಿತ ಕಿರಣ್, ಪಕ್ಕಕ್ಕೆ ಎತ್ತಿಕೊಂಡು ಹೋಗಿ ಆರೈಕೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಮನೆಯವರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ, ತುಂಬಾ ರಕ್ತಸ್ರಾವದಿಂದ ಪಾಂಡುರಂಗ ಕೊನೆಯುಸಿರೆಳೆದರು. ಮೃತರು ಅಕ್ರಮವಾಗಿ ನಾಡ ಬಂದೂಕು ಹೊಂದಿದ್ದರು ಎಂದು ತಿಳಿದು ಬಂದಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.