
ಪ್ರಜಾವಾಣಿ ವಾರ್ತೆ
ಚನ್ನಪಟ್ಟಣ: ತಾಲ್ಲೂಕಿನ ಬಿ.ವಿ. ಹಳ್ಳಿ ಗ್ರಾಮದಲ್ಲಿ ರಾತ್ರಿ ಸುಮಾರು 11.30 ಗಂಟೆಯ ವೇಳೆಯಲ್ಲಿ ಒಂಟಿ ಸಲಗವೊಂದು ರಾಜಾರೋಷವಾಗಿ ಓಡಾಡಿದೆ.
ಗ್ರಾಮದ ಬಂಡೂರುಕೆರೆಯ ಕಡೆಯಿಂದ ಮುಖ್ಯರಸ್ತೆ ದಾಟಿ ಉಪನ್ಯಾಸಕ ಬಿ.ಪಿ. ತಿಮ್ಮೇಗೌಡರವರ ಹಿತ್ತಲಿಗೆ ಬಂದಿದೆ. ಅಲ್ಲಿರುವ ಸೌದೆಯನ್ನು ಉರುಳಿಸಿ ವಿದ್ಯುತ್ ವೈರ್ ಕಿತ್ತಾಕಿ ದಾಂಧಲೆ ನಡೆಸಿದೆ. ಅಲ್ಲಿಂದ ವಿ.ಎಸ್.ಎಸ್.ಎನ್ ಅಧ್ಯಕ್ಷ ದೊರೆಸ್ವಾಮಿ ಅವರ ಮನೆಯ ಹತ್ತಿರ ಬಂದು ಅಲ್ಲಿಂದ ಹಾಲಿನ ಡೈರಿಯ ಹತ್ತಿರ ಓಡಾಡಿದೆ.
ನಂತರ ಮುಖಂಡರಾದ ಬಿ.ಟಿ. ಶಿವಮಲ್ಲೇಗೌಡರ ಹಾಗೂ ಜಯಮುದ್ದಪ್ಪರವರ ಹಿತ್ತಲಿನಲ್ಲಿ ಓಡಾಡಿದ ಸಲಗವು ಜನರ ಗಲಾಟೆಯಿಂದ ಕಾಡಿನ ಕಡೆಗೆ ತೆರಳಿದೆ. ಘಟನೆಯಿಂದ ಭಯಭೀತರಾಗಿರುವ ಗ್ರಾಮಸ್ಥರು, ಆನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.