ಚನ್ನಪಟ್ಟಣ: ಕ್ಷೇತ್ರದ ಮುಂದಿನ ಮೂರೂವರೆ ವರ್ಷದ ಅವಧಿಯ ನೂತನ ಶಾಸಕರಾಗಿ ಆಯ್ಕೆಯಾಗಿರುವ ಸಿ.ಪಿ. ಯೋಗೇಶ್ವರ್ ಅವರು, ತಾವು ಗೆದ್ದ ಹದಿನೈದು ದಿನಗಳಲ್ಲೇ ತಾಲ್ಲೂಕಿನ ಆಡಳಿತ ಚುಕ್ಕಾಣಿಯನ್ನು ಬಿಗಿಪಡಿಸುವತ್ತ ಚಿತ್ತ ಹರಿಸಿದ್ದಾರೆ. ತೀವ್ರ ಪೈಪೋಟಿಯ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿರುವ ಅವರ ಮುಂದೆ ಸಾಲು ಸಾಲು ಸವಾಲುಗಳು ಜೊತೆಗೆ ಜನರ ಅಭಿವೃದ್ಧಿ ನಿರೀಕ್ಷೆಯೂ ಹೆಚ್ಚಾಗಿದೆ.
ಅಧಿಕಾರಿಗಳ ದರ್ಬಾರಿನಲ್ಲಿ ಅಭಿವೃದ್ಧಿ ಕಾರ್ಯಗಳು ನೇಪಥ್ಯಕ್ಕೆ ಸರಿದಿದ್ದು ನಿಜ. ಜನರ ಕೆಲಸ–ಕಾರ್ಯಗಳಿಗಿಂತ ಹೆಚ್ಚಾಗಿ ಚುನಾವಣೆಗೆ ಸಂಬಂಧಿಸಿದ ಕಾರ್ಯಭಾರದಲ್ಲೇ ತಾಲ್ಲೂಕು ಆಡಳಿತ ಮುಳುಗಿತ್ತು. ಇದೀಗ, ಚುನಾವಣೆ ಕಾವು ಮುಗಿದು ಹೊಸ ಜನಪ್ರತಿನಿಧಿಯೂ ಬಂದಿದ್ದಾರೆ. ಅವರಿಗೆ ತಾಲ್ಲೂಕು ಆಡಳಿತವನ್ನು ಸರಿದಾರಿಗೆ ತಂದು ನನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಚಾಲನೆ ನೀಡಬೇಕಾದ ಸವಾಲು ಯೋಗೇಶ್ವರ್ ಮುಂದಿದೆ.
ಮೇಲಕ್ಕೇಳುವುದೇ ನಿಲ್ದಾಣ:
ಮುಖ್ಯವಾಗಿ ನಗರದಲ್ಲಿ ಹಲವು ವರ್ಷಗಳಿಂದ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ರಾಷ್ಟ್ರಪಿತ ಗಾಂಧೀಜಿ ಅವರ ನೆನಪಿನ ಬುತ್ತಿ ಇರುವ ಶಿಥಿಲಾವಸ್ಥೆಯ ಗಾಂಧಿ ಭವನಕ್ಕೆ ಹೊಸ ರೂಪ ನೀಡಬೇಕಿದೆ. ಸಾತನೂರು ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಹೆಸರಿಗಷ್ಟೇ ಉದ್ಘಾಟನೆಯಾಗಿದ್ದರೂ, ಇನ್ನು ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲಸ ಪೂರ್ಣಗೊಳಿಸಿ ಬಳಕೆಗೆ ಮುಕ್ತವಾಗಿಸಬೇಕಿದೆ. ರೇಷ್ಮೆ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕಿದೆ.
ನಗರದ ಒಳಚರಂಡಿ (ಯುಜಿಡಿ) ಕಾಮಗಾರಿ ನಿಂತ ನೀರಾಗಿದೆ. ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶದ ಹಲವು ರಸ್ತೆಗಳು ಗುಂಡಿ ಬಿದ್ದು ಹದಗೆಟ್ಟಿವೆ. ಕೆಲವೇ ಕೆರೆಗಳನ್ನು ಬಿಟ್ಟರೆ ಉಳಿದ ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ. ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಕಾಮಗಾರಿ ಹಳ್ಳ ಹಿಡಿದಿದೆ.
ಕಾಡಾನೆ ಹಾವಳಿ, ಭ್ರಷಾಚಾರ:
ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಂದಾಯ ಇಲಾಖೆ, ಉಪ ನೋಂದಣಾಧಿಕಾರಿ ಕಚೇರಿ, ಪೊಲೀಸ್ ಠಾಣೆ, ನಗರಸಭೆ ಸೇರಿದಂತೆ ಹಲವೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಆರೋಪಗಳು ಸಾರ್ವತ್ರಿಕವಾಗಿವೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹಾಸು ಹೊಕ್ಕಾಗಿದೆ. ಜನಸಾಮಾನ್ಯರನ್ನು ಸಣ್ಣಪುಟ್ಟ ಕೆಲಸಕ್ಕೂ ಅಲೆದಾಡಿಸುವುದು ಹೆಚ್ಚಾಗಿದೆ. ಯಾವುದೇ ಇಲಾಖೆಯಲ್ಲೂ ಸುಲಭದ ಕೆಲಸವೂ ಬೆಟ್ಟದಂತೆ ಗೋಚರವಾಗುತ್ತಿದೆ. ನಗರಸಭೆಯಲ್ಲಿ ಇ–ಖಾತೆ ಸೇರಿದಂತೆ ಹಲವು ಸಾರ್ವಜನಿಕ ಕೆಲಸಗಳನ್ನು ಮಾಡಿಸಿಕೊಳ್ಳುವುದು ಸವಾಲಾಗಿದೆ. ಹಣ ಕೊಡದಿದ್ದರೆ ಯಾವ ಕೆಲಸವೂ ಆಗದು ಎಂಬುದು ಸಾಮಾನ್ಯವಾಗಿದೆ. ಸಾರ್ವಜನಿಕ ಸ್ನೇಹಿಯಾಗಬೇಕಾದ ಗ್ರಾಮ ಪಂಚಾಯಿತಿಗಳಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ.
ನಗರಸಭೆ ಆಡಳಿತಕ್ಕೆ ಚಿಕಿತ್ಸೆ:
ಜಡವಾಗಿರುವ ನಗರಸಭೆ ಆಡಲಿತಕ್ಕೆ ಮೊದಲು ಚಿಕಿತ್ಸೆ ನೀಡಲು ಮುಂದಾಗಿರುವ ಯೋಗೇಶ್ವರ್, ಈಗಾಗಲೇ ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರ ಜೊತೆ ಸಭೆ ನಡೆಸಿ ನಗರದ ಸಮಸ್ಯೆಗಳ ಮುಕ್ತಿಗೆ ಅಂತ್ಯ ಕಾಣಿಸುವ ಮಾತುಗಳನ್ನಾಡಿದ್ದಾರೆ. ಹಾಗೆಯೇ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಭ್ರಷ್ಟಾಚಾರದ ಆರೋಪ ಕೇಳಿ ಬಾರದಂತೆ ಜನರ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು, ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆಗೂ ಸಭೆ ನಡೆಸಿದ್ದಾರೆ. ಕೆರೆಗಳಿಗೆ ಆದಷ್ಟು ಬೇಗ ನೀರು ಹರಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ತಾಕೀತು ಮಾಡಿದ್ದಾರೆ. ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪುನರಾರಂಭಿಸಲು ಸೂಚನೆ ನೀಡಿದ್ದಾರೆ. ಇದೆಲ್ಲದರ ಜೊತೆಗೆ ಹಳಿ ತಪ್ಪಿರುವ ತಾಲ್ಲೂಕು ಆಡಳಿತವನ್ನು ಸರಿದಾರಿಗೆ ತಂದು ಜನಸ್ನೇಹಿ ಆಡಳಿತ ನೀಡುವ ಸವಾಲು ಶಾಸಕರ ಮುಂದಿದೆ.
ನನಸಾಗುವುದೇ ನಿವೇಶನ ಸೂರಿನ ಕನಸು
ಕ್ಷೇತ್ರವನ್ನು ಹಿಂದೆ ಪ್ರತಿನಿಧಿಸುತ್ತಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಸಂಸದರಾಗಿ ಆಯ್ಕೆಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಲಿಟ್ಟಿದ್ದರು. ಅಭಿವೃದ್ಧಿ ಹೆಸರಿನಲ್ಲಿ ಕ್ಷೇತ್ರದಲ್ಲಿ ಉಪ ಚುನಾವಣೆ ತಯಾರಿ ಆರಂಭಿಸಿದ್ದ ಅವರು ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ತಾಲ್ಲೂಕಿನ ಹಲವೆಡೆ ಜನಸಂಪರ್ಕ ಸಭೆಗಳನ್ನು ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದ ಶಿವಕುಮಾರ್ ಚನ್ನಪಟ್ಟಣವನ್ನು ಚಿನ್ನದ ನಾಡು ಮಾಡುವ ಭರವಸೆ ನೀಡಿದ್ದರು. ಜೊತೆಗೆ ನಿವೇಶನ ರಹಿತರಿಗೆ ನಿವೇಶನ ಹಾಗೂ ಸೂರಿಲ್ಲದವರಿಗೆ ಮನೆ ನೀಡುವ ಕನಸನ್ನು ಬಿತ್ತಿದ್ದರು. ಪೂರಕವಾಗಿ ಜಮೀನು ಗುರುತಿಸುವ ಕೆಲಸವನ್ನು ಸಹ ಆರಂಭಿಸಿದ್ದರು. ಮನೆ ಇಲ್ಲದ ಸುಮಾರು 5 ಸಾವಿರ ಮಂದಿಗೆ ಮನೆ ನೀಡುವ ಭರವಸೆ ನೀಡಿರುವ ಶಿವಕುಮಾರ್ ಅದಕ್ಕಾಗಿ ತಾಲ್ಲೂಕಿನ ನಾಲ್ಕೈದು ಕಡೆ ಸರ್ಕಾರಿ ಜಾಗಗಳನ್ನು ಗುರುತಿಸಿ ಆ ಜಾಗಗಳನ್ನು ಸಮತಟ್ಟು ಮಾಡಿಸಿದ್ದರು. ಇದೀಗ ಆಡಳಿತಾರೂಢ ಕಾಂಗ್ರೆಸ್‌ನಿಂದ ಗೆದ್ದಿರುವ ಯೋಗೇಶ್ವರ್ ಅವರು ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ನೀಡಿರುವ ಭರವಸೆಗಳನ್ನು ಈಡೇರಿಸಿ ಜನ ನಿರೀಕ್ಷೆಗಳನ್ನು ನಿಜ ಮಾಡಬೇಕಾದ ದೊಡ್ಡ ಜವಾಬ್ದಾರಿ ಇದೆ.
ಹಿಂದೆ ಇದ್ದ ಶಾಸಕರ ನಿರ್ಲಕ್ಷ್ಯದಿಂದ ತಾಲ್ಲೂಕಿನ ಅಭಿವೃದ್ಧಿಗೆ ಗ್ರಹಣ ಹಿಡಿದಿತ್ತು. ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಲೇ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕಾದ ಸವಾಲು ನನ್ನ ಮುಂದಿದೆ. ಅದಕ್ಕೆ ಅಧಿಕಾರಿಗಳು ನನ್ನೊಂದಿಗೆ ಕೈ ಜೋಡಿಸಬೇಕು.ಸಿ.ಪಿ. ಯೋಗೇಶ್ವರ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.