ADVERTISEMENT

‘ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸಲಿ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:42 IST
Last Updated 18 ಜುಲೈ 2019, 19:42 IST
ಕನಕಪುರ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ನಡೆದ ಹೊಲಿಗೆ ತರಬೇತಿ ಕಾರ್ಯಗಾರದಲ್ಲಿ ಎಚ್‌.ಕೆ. ಶ್ರೀಕಂಠು ಮಾತನಾಡಿದರು
ಕನಕಪುರ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ನಡೆದ ಹೊಲಿಗೆ ತರಬೇತಿ ಕಾರ್ಯಗಾರದಲ್ಲಿ ಎಚ್‌.ಕೆ. ಶ್ರೀಕಂಠು ಮಾತನಾಡಿದರು   

ಸಾತನೂರು (ಕನಕಪುರ): ‘ಗ್ರಾಮೀಣ ಪ್ರದೇಶದ ಮಹಿಳೆಯರು ರೇಷ್ಮೆ, ಹೈನುಗಾರಿಕೆಯ ಜತೆಗೆ ಇತರೆ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಬೇಕೆಂದು’ ಕನಕಾಂಬರಿ ಮಹಿಳಾ ಒಕ್ಕೂಟದ ಗೌರವ ಅಧ್ಯಕ್ಷ ಎಚ್‌. ಕೆ. ಶ್ರೀಕಂಠು ಹೇಳಿದರು.

ತಾಲ್ಲೂಕಿನ ಸಾತನೂರು ಹೋಬಳಿ ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟದ ವತಿಯಿಂದ ಪ್ರಾರಂಭಗೊಂಡ 35ನೇ ಹೊಲಿಗೆ ತರಬೇತಿ ಕಾರ್ಯಾಗಾರದ ಉದ್ಘಾಟನೆಯಲ್ಲಿ ಮಾತನಾಡಿದರು.

‘30 ವರ್ಷಗಳ ಹಿಂದೆ ಕೆಂಪೇಗೌಡನದೊಡ್ಡಿ ಒಂದು ಕುಗ್ರಾಮವಾಗಿತ್ತು. ಇಲ್ಲಿಗೆ ಬರಲು ರಸ್ತೆಯಿರಲಿಲ್ಲ, ಹಳ್ಳ ಕೊಳ್ಳದ ದಾರಿಯಲ್ಲಿ ಗ್ರಾಮಕ್ಕೆ ಬರಬೇಕಿತ್ತು. ಆದರೆ ಇಂದು ನಗರ ಪ್ರದೇಶದಂತೆ ಎಲ್ಲ ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿಯನ್ನು ಕಂಡಿದೆ’ ಎಂದರು.

ADVERTISEMENT

ಕನಕಾಂಬರಿ ಮಹಿಳಾ ಒಕ್ಕೂಟವು ಸ್ತ್ರೀ ಶಕ್ತಿ ಗುಂಪುಗಳ ನಿರ್ವಹಣೆ ಜತೆಗೆ ಮಹಿಳೆಯರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ. ಹೊಲಿಗೆ ತರಬೇತಿ, ಎಂಬ್ರಾಯಿಡಿಂಗ್‌, ಅಡುಗೆ ತಿನಿಸು ತಯಾರಿಕೆ ಮತ್ತಿತರರ ತರಬೇತಿಗಳನ್ನು ಕೊಡುತ್ತಿದೆ ಇವೆಲ್ಲದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಮೇಲೆ ಬರಬೇಕೆಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರ್‌ ಮಾತನಾಡಿ, ‘ಕನಕಾಂಬರಿ ಮಹಿಳಾ ಒಕ್ಕೂಟವು ಉಚಿತವಾಗಿ ಹೊಲಿಗೆ ತರಬೇತಿಯನ್ನು ಕೊಡುತ್ತಿದೆ. ಇಲ್ಲಿ ತರಬೇತಿ ಪಡೆದುಕೊಂಡರೆ ಎಸ್ಸಿ ಮತ್ತು ಎಸ್ಟಿ ಮಹಿಳೆಯರಿಗೆ ಪಂಚಾಯಿತಿಯಿಂದ ಉಚಿತವಾಗಿ ಹೊಲಿಗೆ ಯಂತ್ರವನ್ನು ಕೊಡಲಾಗುತ್ತದೆ. ಇತರೆ ಜನಾಂಗದ ಮಹಿಳೆಯರಿಗೆ ದಾನಿಗಳ ಸಹಕಾರದಿಂದ ಹೊಲಿಗೆ ಯಂತ್ರವನ್ನು ಕೊಡಿಸಲಾಗುವುದು’ ಎಂದರು.

ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಲಕ್ಷ್ಮಿಮಾತನಾಡಿ, ‘ಟೈಲರಿಂಗ್ ಕಲಿಯಬೇಕೆಂದರೆ ನಗರ ಪ್ರದೇಶಗಳಿಗೆ ಹೋಗಿ ಅಲ್ಲಿ ತಿಂಗಳಿಗೆ ಶುಲ್ಕವನ್ನು ಕೊಟ್ಟು ತರಬೇತಿ ಪಡೆಯಬೇಕು. ಒಕ್ಕೂಟವು ನಮ್ಮ ಊರಿಗೆ ಬಂದು ತರಬೇತಿ ಕೊಡುತ್ತಿರುವುದರಿಂದ ಹೆಚ್ಚಿನ ಮಹಿಳೆಯರಿಗೆ ಅನುಕೂಲವಾಗಿದೆ. ಇದು ನಮ್ಮೆಲ್ಲರ ಸೌಭಾಗ್ಯವೆಂದು’ ಹೇಳಿದರು.

ಕೆಂಪೇಗೌಡನದೊಡ್ಡಿ ಸರ್ಕಾರಿ ಶಾಲೆಯ ಶಿಕ್ಷಕಿ ಸರಿತ ಮಾತನಾಡಿ, ‘ಶಾಲಾ ಕಟ್ಟಡವು ಹಾಳಾಗಿದೆ. ಸರಿಪಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಏನು ಕ್ರಮ ಕೈಗೊಂಡಿಲ್ಲ, ಯಾರಾದರೂ ದಾನಿಗಳ ಸಹಕಾರದಿಂದ ಶಾಲೆಯ ದುರಸ್ಥಿ ಮಾಡಿಸುವಂತೆ’ ಈ ಸಂದರ್ಭದಲ್ಲಿ ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಎಇಇ ಶಿವಲಿಂಗಯ್ಯ, ಕಿರಿಯ ಎಂಜಿನಿಯರ್‌ಗಳಾದ ಅಪ್ಪಣ್ಣ, ಶಶಿಧರ್‌, ಮುಖಂಡ ಶಿವಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಲಿಂಗಪ್ಪ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಾಯಣ್ಣ, ಹೊಲಿಗೆ ತರಬೇತಿ ಶಿಕ್ಷಕಿ ಕಮಲಮ್ಮ, ಕ್ಷೇತ್ರ ವ್ಯವಸ್ಥಾಪಕ ಶಿವಲಿಂಗೇಗೌಡ, ಪ್ರೇಮಲತಾ, ಗೀತ ಮಲ್ಲೇಗೌಡನದೊಡ್ಡಿ ಮತ್ತು ಕೆಂಪೇಗೌಡನದೊಡ್ಡಿ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.